Advertisement

ವ್ಯಾಪಾರಿಗೆ ಬುದ್ಧಿ ಕಲಿಸಲು ಮಗು ಕೊಂದವನ ಸೆರೆ

12:26 PM Oct 10, 2018 | |

ಬೆಂಗಳೂರು: ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಹಣ್ಣಿನ ವ್ಯಾಪಾರಿ ಮೇಲಿನ ಕೋಪಕ್ಕೆ ಆತನ ಸಹೋದರಿಯ ಎರಡೂವರೆ ವರ್ಷದ ಪುತ್ರನನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ಶವ ಕೆರೆಯೊಂದಕ್ಕೆ ಎಸೆದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಅಶೋಕನಗರ ಪೊಲೀಸರ ಬಂಧಿಸಿದ್ದಾರೆ.

Advertisement

ತಮಿಳುನಾಡು ಮೂಲದ ಶಾಂತಿನಗರದ ಭೀಮಣ್ಣ ಗಾರ್ಡನ್‌ ನಿವಾಸಿ ಆರ್ಮುಗಂ (37) ಬಂಧಿತ. ಶಾಮವೇಲು ಕೊಲೆಯಾದ ಎರಡೂವರೆ ವರ್ಷದ ಮಗು. ಆರೋಪಿ ಆರ್ಮುಗಂ ಕಾರು ಚಾಲಕನಾಗಿದ್ದು, ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಚೈತ್ರಾ ಎಂಬಾಕೆಯನ್ನು ಮದುವೆಯಾಗಿದ್ದ. ದಂಪತಿಗೆ 12 ವರ್ಷದ ಗಂಡು ಮಗ ಮತ್ತು 9 ವರ್ಷದ ಹೆಣ್ಣು ಮಗಳು ಇದ್ದಾರೆ. 10 ವರ್ಷಗಳಿಂದ ಶಾಂತಿನಗರದ ಭೀಮಣ್ಣ ಗಾರ್ಡ್‌ನ್‌ನ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು.

ಪತ್ನಿ ಚೈತ್ರಾ ಮನೆಗೆಲಸಕ್ಕೆ ಹೋಗುತ್ತಿದ್ದರು.  ಈ ವೇಳೆ ಮನೆ ಹತ್ತಿರದ ಮುಖ್ಯ ರಸ್ತೆಯಲ್ಲಿ ಹಣ್ಣು  ವ್ಯಾಪಾರ ಮಾಡುತ್ತಿದ್ದ ಮಣಿ ಅಲಿಯಾಸ್‌ ಮಣಿಪಾಲ್‌ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಪತಿ ಆರ್ಮುಗಂ ಪತ್ನಿ ಚೈತ್ರಾ ಹಾಗೂ ಈಕೆಯ ಪ್ರಿಯಕರ ಮಣಿಗೆ ಬುದ್ಧಿ ಹೇಳಿದ್ದ. ಆದರೂ ಸರಿ ಹೋಗಿರಲಿಲ್ಲ. 

ಬಳಿಕ ಮಣಿ ಸಹೋದರ, ಈತನ ತಾಯಿ, ಸಹೋದರಿಗೂ ವಿಷಯ ತಿಳಿಸಿ ಬುದ್ಧಿ ಹೇಳುವಂತೆ ಮನವಿ ಮಾಡಿದ್ದ. ಆದರೆ ಕುಟುಂಬ ಸದಸ್ಯರು ನಮ್ಮ ಮಣಿ ಆ ರೀತಿ ಮಾಡುವುದಿಲ್ಲ. ನಿನ್ನ ಪತ್ನಿಯನ್ನು ಸರಿಯಾಗಿ ಇಟ್ಟುಕೋ ಎಂದು ನಿರ್ಲಕ್ಷ್ಯದ ಮಾತುಗಳನ್ನಾಡಿದ್ದರು. ಜತೆಗೆ ಪತ್ನಿ ಕೂಡ ಜಗಳ ಮಾಡಿಕೊಂಡು ಒಂದೂವರೆ ತಿಂಗಳ ಹಿಂದೆ ತಮಿಳುನಾಡಿನ ತವರು ಮನೆಗೆ ಹೋಗಿದ್ದರು. ಇದರಿಂದ ಆರೋಪಿ ಕೋಪಗೊಂಡಿದ್ದ.

ಮಗು ಹತ್ಯೆಗೆ ಸಂಚು: ಈ ನಡುವೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯಿಂದ ದೂರವಾಗಿದ್ದ ಮಣಿ, ಸಹೋದರಿ, ತಮ್ಮ ಇಬ್ಬರು ಮಕ್ಕಳ ಜತೆ ತವರು ಮನೆಯಲ್ಲೇ ವಾಸವಾಗಿದ್ದರು. ಈ ಮನೆಯಲ್ಲಿದ್ದ ಎರಡೂವರೆ ವರ್ಷದ ಶಾಮವೇಲು ಮನೆ ಸದಸ್ಯರಿಗೆ ಪ್ರೀತಿ ಪಾತ್ರನಾಗಿದ್ದ. ಇದನ್ನು ಅರಿತಿದ್ದ ಆರೋಪಿ ಸೆ.30 ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆ ಮುಂದೆ ಆಟವಾಡುತ್ತಿದ್ದ ಶಾಮವೇಲುನನ್ನು ಪುಸಲಾಯಿಸಿ ಮನೆಗೆ ಕರೆದೊಯ್ದಿದ್ದಾನೆ.

Advertisement

ಕೊಲೆಗೈದು ಮೂಟ್ಟೆ ಕಟ್ಟಿದ್ದ: ಬಳಿಕ ಮನೆಯಲ್ಲಿ ತುಂಬಿದ್ದ ನೀರಿನ ಡ್ರಮ್‌ನೊಳಗೆ ಮಗುವನ್ನು ಮುಳುಗಿಸಿ ಕೊಲೆಗೈದು, ಅಲ್ಲೇ ಇದ್ದ ಗೋಣಿಚೀಲದಲ್ಲಿ ಮೃತ ಮಗುವಿನ ಶವವನ್ನು ಹಾಕಿಕೊಂಡು ಬಿಳೇಕಳ್ಳಿಯಲ್ಲಿರುವ ರಾಜಕಾಲುವೆಗೆ ಎಸೆದು ವಾಪಸ್‌ ಬಂದು, ಯಾರಿಗೂ ತಿಳಿಯದಂತೆ ತನ್ನ ಕೆಲಸದಲ್ಲಿ ನಿರತನಾಗಿದ್ದ. ಮತ್ತೂಂದೆಡೆ ಮಗು ನಾಪತ್ತೆಯಾದ ಕುರಿತು ಮಣಿ ಕುಟುಂಬಸ್ಥರು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ ಆರೋಪಿ ಬೈಕ್‌ ಮೇಲೆ ಗೋಣಿ ಚೀಲ ಕೊಂಡೊಯ್ಯುತ್ತಿರುವ ದೃಶ್ಯ ಸೆರೆಯಾಗಿತ್ತು. ಅಲ್ಲದೆ, ಸ್ಥಳೀಯರು ಅನೈತಿಕ ಸಂಬಂಧದ ವಿಚಾರವನ್ನು  ಪೊಲೀಸರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಳಿಸಿದಾಗ ಆರೋಪಿ ಬಗ್ಗೆ ಸುಳಿವು ಸಿಕ್ಕಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next