Advertisement

ಬಿರುಗಾಳಿ ಮಳೆಗೆ ನಲುಗಿದ ರಾಜಧಾನಿ

12:57 PM May 12, 2018 | Team Udayavani |

ಬೆಂಗಳೂರು: ನಗರದಲ್ಲಿ ಶುಕ್ರವಾರ ಬಿರುಗಾಳಿ, ಗುಡುಗು ಸಹಿತ ಸುರಿದ ಭಾರೀ ಮಳೆಗೆ ನಗರದ ಹಲವಾರು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, 25ಕ್ಕೂ ಹೆಚ್ಚು ಮರಗಳು ಧರೆಗುರುಳಿದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.

Advertisement

ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಆರಂಭವಾದ ಮಳೆ ಒಂದು ಗಂಟೆ ಕಾಲ ನಿರಂತರವಾಗಿ ಸುರಿದ ಪರಿಣಾಮ ನಗರದಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಬಿರುಗಾಳಿಗೆ ನಗರದ ಹಲವಾರು ಕಡೆಗಳಲ್ಲಿ 25ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ರಸ್ತೆಗೆ ಉರುಳಿದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು
ಸಮಸ್ಯೆಗೆ ಸಿಲುಕಿದರು. 

ನಿರಂತರವಾಗಿ ಮಳೆಯಿಂದಾಗಿ ನಗರದಲ್ಲಿನ ಬಹುತೇಕ ರಸ್ತೆಗಳು ಜಲಾವೃತಗೊಂಡ ಪರಿಣಾಮ ವಾಹನಗಳು ಸುಗಮವಾಗಿ ಚಲಿಸಲಾಗದೆ ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೇ ನಿಲ್ಲುವಂತಾಯಿತು. ಜತೆಗೆ ಪ್ರಮುಖ
ಅಂಡರ್‌ಪಾಸ್‌ಗಳು, ಟೆಂಡರ್‌ ಶ್ಯೂರ್‌ ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿ ನೀರು ತುಂಬಿದರಿಂದಾಗಿ ತೀವ್ರ ದಟ್ಟಣೆ ಉಂಟಾಯಿತು.

ಶುಕ್ರವಾರದ ಮಳೆಗೆ ನಗರದಲ್ಲಿನ ಹಲವಾರು ಕಾಲುವೆಗಳು ಉಕ್ಕಿ ಹರಿದಿವೆ. ಜತೆಗೆ ಗಿರಿನಗರ, ಹೊಸಕೆರೆಹಳ್ಳಿ, ನಾಗರಬಾವಿ, ಪೈಪ್‌ಲೈನ್‌ ರಸ್ತೆ, ಶ್ರೀನಗರ, ಬಾಣಸವಾಡಿ, ರಾಮಮೂರ್ತಿನಗರ, ಜೆ.ಪಿ.ನಗರ 5ನೇ ಫೇಸ್‌, ಇಂದಿರಾ ನಗರ, ಮಲ್ಲೇಶ್ವರ ಸೇರಿದಂತೆ ಹತ್ತಾರು ಕಡೆಗಳಲ್ಲಿ 15ಕ್ಕೂ ಹೆಚ್ಚು ಬೃಹತ್‌ ಮರಗಳು ಹಾಗೂ 20ಕ್ಕೂ ಹೆಚ್ಚು ಮರದ ಕೊಂಬೆಗಳು ಧರೆಗುರುಳಿವೆ.

ಇದರೊಂದಿಗೆ ಟಿ.ವಿ.ಟವರ್‌, ಕೆ.ಎಚ್‌.ರಸ್ತೆ, ಟ್ರೀನಿಟಿ ವೃತ್ತ, ಸಿ.ಎಲ್‌. ರಸ್ತೆ, ಹೆಬ್ಟಾಳ, ರಾಜರಾಜೇಶ್ವರಿ ನಗರ, ಕಾರ್ಪೊರೇಷನ್‌, ಕೆ.ಆರ್‌.ವೃತ್ತ, ಸ್ಯಾಂಕಿ ರಸ್ತೆ, ಎಂ.ಜಿ.ರಸ್ತೆ, ಇಂದಿರಾನಗರ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು.

Advertisement

ಅಂಡರ್‌ಪಾಸ್‌ ಬಂದ್‌: ಇತ್ತೀಚೆಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದ ಓಕಳಿಪುರ ಅಂಡರ್‌ಪಾಸ್‌ನಲ್ಲಿ ಮಳೆ ನೀರು ತುಂಬಿದ ಪರಿಣಾಮ ಅಂಡರ್‌ಪಾಸ್‌ನಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದು, ಹಳೆಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾ ಗಿದೆ. ಮಳೆಯಿಂದ ಮರಗಳು ಉರುಳಿ ಮತ್ತು ಭಾರೀ ಗಾಳಿಗೆ ಕೊಂಬೆಗಳು ಬಿದ್ದು ಅನೇಕ ಕಡೆ ವಿದ್ಯುತ್‌ ಕಂಬಗಳು ಹಾನಿಯಾಗಿವೆ. ಇದರಿಂದ ವಿದ್ಯುತ್‌ ವ್ಯತ್ಯಯ ಉಂಟಾಗಿ ಭಾಗಶಃ ನಗರ ಕತ್ತಲೆಯಲ್ಲಿ ಮುಳುಗಿತು.

ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಿದ್ದು, ಉಳಿದ ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗಿದೆ. ಪ್ರಮಾಣ ಕಡಿಮೆ ಇದ್ದರೂ ಮಳೆ ಸೃಷ್ಟಿಸಿದ ಅವಾಂತರ ಹೆಚ್ಚಿತ್ತು. ಶನಿವಾರ ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ದ ಅಧಿಕಾರಿಗಳು ತಿಳಿಸಿದ್ದಾರೆ

ಮಳೆಗೆ ವೃದ್ಧೆ ಸಾವು
ಗುರುವಾರ ರಾತ್ರಿ ನಗರದಲ್ಲಿ ಸುರಿದ ಭಾರಿ ಮಳೆಗೆ ಮಳೆನೀರು ಮನೆಗೆ ನುಗ್ಗಿದ ಪರಿಣಾಮ ಕೆ.ಪಿ.ಅಗ್ರಹಾರದ 6ನೇ ಅಡ್ಡರಸ್ತೆಯಲ್ಲಿ ರತ್ನಮ್ಮ (65) ಎಂಬುವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹಲವು ವರ್ಷಗಳಿಂದ
ಬಡಾವಣೆಯಲ್ಲಿ ರತ್ಮಮ್ಮ ಒಂಟಿಯಾಗಿ ವಾಸವಿದ್ದು, ಅವರ ಮನೆ ಪಕ್ಕದಲ್ಲಿಯೇ ರಾಜಕಾಲುವೆ ದುರಸ್ತಿ ಕಾರ್ಯ
ನಡೆಯುತ್ತಿದೆ. ಆದರೆ, ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವುದರಿಂದ ಗುರುವಾರ ರಾತ್ರಿ ಮಳೆ ಸುರಿದಾಗ ರಾಜಕಾಲುವೆ ಯಿಂದ ನೀರು ಉಕ್ಕಿ ಮನೆಯೊಳಗೆ ನುಗ್ಗಿದೆ. ಈ ವೇಳೆ ಮಲಗಿದ್ದ ರತ್ನಮ್ಮ ಮನೆಯಿಂದ ಹೊರಬರಲಾಗದೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮರುದಿನ ಅಕ್ಕಪಕ್ಕದ ಮನೆಯವರು ಬಂದು ನೋಡಿದಾಗ ರತ್ನಮ್ಮ ಮೃತಪಟ್ಟಿರುವುದು ಖಚಿತವಾಗಿದೆ. ಠಾಣೆಯಲ್ಲಿ ದೂರು ದಾಖಲಾಗಿದೆ. 

ಮಳೆ ಪ್ರಮಾಣ
ಕೋಣನಕುಂಟೆಯಲ್ಲಿ ಗರಿಷ್ಠ 44 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಎಚ್‌ಎಸ್‌ ಆರ್‌ ಲೇಔಟ್‌ 21.5 ಮಿ.ಮೀ., ಬೊಮ್ಮನ ಹಳ್ಳಿ 29, ಕೋರಮಂಗಲ 29.5, ಬಸವನ ಗುಡಿ 24.5, ನಾಗರಬಾವಿ 31, ಕೊಡಿಗೇಹಳ್ಳಿ
20, ಕಿತ್ತನಹಳ್ಳಿ 8, ರಾಜರಾಜೇಶ್ವರಿನ ನಗರ 10.5, ಕುಮಾರ ಸ್ವಾಮಿ ಲೇಔಟ್‌ 39, ಬೇಗೂರು 19, ಹೆಮ್ಮಿಗೆಪುರ 25.5, ಕಗ್ಗಲೀಪುರ 14.5, ಸೋಮನಹಳ್ಳಿ 17.5, ಮಂಡೂರು 5.5, ಸಾರಕ್ಕಿ 36, ಕೆಂಗೇರಿ 19, ಅಗ್ರಹಾರ ದಾಸರಹಳ್ಳಿ 19, ಬಿದರಹಳ್ಳಿ 15 ಮಿಲಿ ಮೀಟರ್‌ ಮಳೆಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next