ಬೆಂಗಳೂರು: ಆಗಸದಲ್ಲಿ ಭಾನುವಾರ ತಾರೆಗಳಿರಲಿಲ್ಲ. ಅವೆಲ್ಲವೂ ನಗರದ ಅಂಗಳಕ್ಕೆ ಜಾರಿದ್ದವು. ಹೀಗಾಗಿ, ಇಡೀ ಸಿಲಿಕಾನ್ ಸಿಟಿ ನಕ್ಷತ್ರಗಳು ತುಂಬಿದ “ಆಕಾಶ ಬುಟ್ಟಿ’ಯ ಪ್ರತಿಬಿಂಬವಾಗಿತ್ತು!
– ಭಾನುವಾರ ರಾತ್ರಿ 9 ಗಂಟೆಗೆ ನಗರದಲ್ಲಿ ಕಂಡು ಬಂದ ದೃಶ್ಯ ಇದು. ಕೋವಿಡ್ 19 ವಿರುದ್ಧದ ಹೋರಾಡಲು ಐಕ್ಯತೆ ಪ್ರದರ್ಶನಕ್ಕಾಗಿ ದೀಪ ಹಚ್ಚುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆ ಆಗುತ್ತಿದ್ದಂತೆ ನಗರದ ಬೀದಿಗಳೆಲ್ಲಾ ಕತ್ತಲಲ್ಲಿ ಮುಳುಗಿದವು. ಆಕಾಶದಲ್ಲಿ ನಕ್ಷತ್ರಗಳು ಕೂಡ ಕಣ್ಮರೆಯಾಗಿದ್ದವು. ಈ ಮಧ್ಯೆ ಭರವಸೆಯ ಬೆಳಕು ಒಂದೊಂದಾಗಿ ಬೆಳಗಲು ಶುರುವಾದವು. ಇದರಿಂದ ಇಡೀ ಬೆಂಗಳೂರು ಅಕ್ಷರಶಃ ಬೆಳಕಿನಲ್ಲಿ ಮಿಂದೆದ್ದಿತು. ಒಂಬತ್ತು ನಿಮಿಷಗಳ ನಂತರವೂ ಮಿನುಗುತ್ತಿದ್ದವು.
ಮುಖ್ಯಮಂತ್ರಿ, ಸಚಿವರು ಸೇರಿದಂತೆ ಪುಟ್ಟ ಮಕ್ಕಳು, ವೃದ್ಧರು, ಮಹಿಳೆಯರು, ಯುವಕರು, ಕರ್ತವ್ಯನಿರತ ಪೊಲೀಸರು, ರಾಜಕೀಯ ನಾಯಕರು ಹೀಗೆ ಎಲ್ಲ ವರ್ಗದವರೂ ಮನೆಯಂಗಳ, ಮೇಲ್ಛಾವಣಿ, ದೇವಸ್ಥಾನ, ಅಪಾರ್ಟಮೆಂಟ್, ಕಚೇರಿ, ಖಾಸಗಿ ಕಟ್ಟಡ ಹೀಗೆ ಎಲ್ಲಡೆ ನಿಂತು ದೀಪ, ಮೊಂಬತ್ತಿ, ಮೊಬೈಲ್ ಲೈಟ್ ಹಚ್ಚಿ ಒಂಬತ್ತು ನಿಮಿಷ ಜಾಗಬಿಟ್ಟು ಕದಲಲಿಲ್ಲ. ಸೋಂಕು ವಿರುದ್ಧ ಹೋರಾಡುತ್ತಿರುವವರಿಗೆ ನಮಿಸಿದರು.
ದೀಪಕ್ಕೆ ಸಿದ್ಧತೆ: ಮೋದಿಯವರ ಕರೆಗೆ ಒಗ್ಗೂಡುವ ಸದುದ್ದೇಶದಿಂದ ಬಹುತೇಕ ಗೃಹಿಣಿಯರು, ಮಕ್ಕಳು ಮತ್ತು ಹಿರಿಯರುಸಂಜೆಯಿಂದಲೇ ದೀಪಗಳನ್ನು ಮನೆಯ ಮುಂದಿಟ್ಟು, ಬತ್ತಿ ಮತ್ತು ಎಣ್ಣೆ ಹಾಕಿಟ್ಟುಕೊಂಡಿದ್ದರು. 9 ಗಂಟೆ ಆಗುತ್ತಿದ್ದಂತೆ ಎಲ್ಲರೂ ಒಟ್ಟಾಗಿ ದೀಪ ಹಚ್ಚಿ, ಆರಾಧನೆ ಮಾಡಿದರು.ಕೆಲವರು ಮನೆಯ ತಾರಸಿಯಿಂದ ಹಾರುವ ದೀಪಗಳನ್ನು ಬಿಟ್ಟರು. ಪಟಾಕಿ ಸಿಡಿಸಿದರು, ದೇವರನ್ನು ಸ್ಮರಿಸುವುದು ಕಂಡುಂಬಂತು.
ಗಣ್ಯರಿಂದ ದೀಪಾರಾಧನೆ: ಡಿಸಿಎಂ ಡಾ.ಸಿ. ಎನ್.ಅಶ್ವತ್ಥ ನಾರಾಯಣ, ಸಚಿವರಾದ ಸುರೇಶ್ ಕುಮಾರ್, ಆರ್. ಅಶೋಕ, ಬೈರತಿ ಬಸವರಾಜ, ಎಸ್.ಟಿ.ಸೋಮ ಶೇಖರ್, ಗೋಪಾಲಯ್ಯ, ಸೋಮಣ್ಣ ಸೇರಿದಂತೆ ಜನ ಪಾಲಿಕೆ ಸದಸ್ಯರು, ಪ್ರತಿನಿಧಿಗಳು ದೀಪ ಬೆಳಗಿಸಿದರು