Advertisement

ರಾಜಧಾನಿ ಜಲಾವೃತ!

10:18 AM Oct 14, 2017 | |

ಬೆಂಗಳೂರು: ಶುಕ್ರವಾರ ನಗರದಲ್ಲಿ ಸುರಿದ ಭಾರಿ ಮಳೆಗೆ ಬೆಂಗಳೂರು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಸಂಜೆ ನಗರದ ದಕ್ಷಿಣ ಹಾಗೂ ಉತ್ತರ ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಈ ಭಾಗದ ಬಡಾವಣೆಗಳು ಸಂಪೂರ್ಣ ಮುಳುಗಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಮಟ್ಟದ ಹೆಚ್ಚಾಗುತ್ತಿದ್ದು, ಸಮೀಪದ ರಾಜಕಾಲುವೆಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನರು ಮನೆಗಳಿಂದ ಹೊರಬರದೆ, ಒಳಗೂ ಇರದಂತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Advertisement

ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಹಲವಾರು ಬಡಾವಣೆಗಳಲ್ಲಿ ಜಲಪ್ರಳಯ ಸದೃಶ ಚಿತ್ರಣ ಸೃಷ್ಟಿಯಾಗಿತ್ತು. ಶುಕ್ರವಾರ ಸಂಜೆ 5.30 ರಿಂದ ರಾತ್ರಿ 7.30 ರವರೆಗೆ ಮಳೆ ಸುರಿದಿದ್ದು, ಮಳೆಯ ರಭಸಕ್ಕೆ ರಸ್ತೆಗಳ ಮೇಲೆ ಅಡಿಗಟ್ಟಲೇ ನೀರು ಹರಿದಿದೆ. ಜತೆಗೆ ಮ್ಯಾನ್‌ಹೋಲ್‌ಗ‌ಳಿಂದ ಮಳೆ ನೀರು ಉಕ್ಕಿದ್ದು, ತಗ್ಗುಪ್ರದೇಶಗಳಲ್ಲಿನ ಮನೆಗಳೊಳಗೆ ಮಳೆನೀರು ನುಗ್ಗಿದ್ದು,
ಕೆಲವು ಕಡೆಗಳಲ್ಲಿ ಮನೆಗಳು ಕುಸಿದಿವೆ.

ನಗರದ ಕೇಂದ್ರ ಭಾಗದ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಹೊಳೆಯ ರೀತಿಯಲ್ಲಿ ಹರಿಯುತ್ತಿದ್ದು, ವಾಹನಗಳ ಸಂಚಾರಿಸದಂತ ಪರಿಸ್ಥಿತಿ ನಿರ್ಮಾಣವಾಗಿತ್ತು.ಕೆಲವೊಂದು ಭಾಗಗಳಲ್ಲಿ ರಸ್ತೆಬದಿಯಲ್ಲಿ ನಿಲುಗಡೆ ಮಾಡಿದ್ದ ವಾಹನಗಳು ಸಂಪೂರ್ಣವಾಗಿ ಜಲಾವೃತಗೊಂಡು ಸವಾರರು ತೊಂದರೆ ಅನುಭವಿಸಿದ್ದಾರೆ. ಗಾಯತ್ರಿನಗರ, ಮಾಗಡಿ ರಸ್ತೆ, ಮೈಸೂರು ರಸ್ತೆ, ನಾಯಂಡಹಳ್ಳಿ ಜಂಕ್ಷನ್‌ ಸೇರಿ ಪ್ರಮುಖ ರಸ್ತೆಗಳಲ್ಲಿ ಸವಾರರು ವಾಹನಗಳು ರಸ್ತೆ ಮಧ್ಯೆ ನಿಲ್ಲಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಿದರು.

ಮೈಸೂರು ರಸ್ತೆ ಬಂದ್‌: ಸೋಮವಾರ ಸುರಿದ ಮಳೆಯಿಂದಾಗಿ ಮೈಸೂರು ರಸ್ತೆ ಭಾಗಶಃ ಬಂದ್‌ ಆಗಿತ್ತು. ನಾಯಂಡಹಳ್ಳಿ ಜಂಕ್ಷನ್‌ ಸೇರಿದಂತೆ ಹಲವಾರು ಭಾಗಗಳಲ್ಲಿ ಮಳೆಯ ನೀರು ರಸ್ತೆಯಲ್ಲಿ ನಿಂತ ಪರಿಣಾಮ ವಾಹನಗಳನ್ನು ಸಂಚಾರಿಸಲಾಗದೆ ಸುಮಾರು 7 ಕಿಲೋ ಮೀಟರ್‌ನಷ್ಟು ಸಂಚಾರ ದಟ್ಟಣೆ ಉಂಟಾಗಿತ್ತು. ಕೆಂಗೇರಿ ಕಡೆಗೆ ಚಲಿಸುವವರು ನಮ್ಮ ಮೆಟ್ರೋ ಮೂಲಕ ನಾಯಂಡಹಳ್ಳಿ ತಲುಪಿದರೂ ಅಲ್ಲಿಂದ ಕೆಂಗೇರಿ ಕಡೆಗೆ ಹೋಗಲಾಗದೆ ಪರದಾಡಿದರು. ಇದರೊಂದಿಗೆ ಮೆಜೆಸ್ಟಿಕ್‌, ಶಿವಾಜಿನಗರ, ಮೇಖೀವೃತ್ತ, ಕೆ.ಆರ್‌.ವೃತ್ತ, ಕೆ.ಆರ್‌.ಮಾರುಕಟ್ಟೆ, ಶೇಷಾದ್ರಿ ರಸ್ತೆ, ರಾಜಾಜಿನಗರ, ಓಕಳಿಪುರ, ಮಾಗಡಿ ರಸ್ತೆ, ರೇಸ್‌ಕೋರ್ಸ್‌ ರಸ್ತೆ ಸೇರಿದಂತೆ ಹಲವಾರು ಭಾಗಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.

ಮೇಯರ್‌ ಪರಿಶೀಲನೆ: ಮಳೆಯಿಂದಾಗಿ ಗೊಡೆ ಕುಸಿದು ಮೃತಪಟ್ಟ ದಂಪತಿ ಹಾಗೂ ನೀರಿನಲ್ಲಿ ಕೊಚ್ಚಿ ಹೋದ ಕುರುಬರಹಳ್ಳಿ,ಲಗ್ಗೆರೆ ಮತ್ತಿತರ ಪ್ರದೇಶಗಳಿಗೆ ಸಚಿವ ಕೆ.ಜೆ ಜಾರ್ಜ್‌, ಮೇಯರ್‌ ಸಂಪತ್‌ರಾಜ್‌ ಭೇಟಿ ನೀಡಿ ಪರಿಶೀಲಿಸಿ 
ದರು. ಸ್ಥಳೀಯ ಶಾಸಕ ಗೋಪಾಲಯ್ಯ ಹಾಗೂ ಪಾಲಿಕೆ ಸದಸ್ಯ ಎಂ.ಶಿವರಾಜು ಅವರು ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ನಿವಾಸಿಗಳನ್ನ ಸುರಕ್ಷಿತ ಪ್ರದೇಶಗಳಿಗೆ ರವಾನಿಸಿದರು.

Advertisement

ಅಡ್ಡಿಯಾದ ಸಿಲಿಂಡರ್‌:  ಭಾರಿ ಮಳೆಯಿಂದ 25ಕ್ಕೂ ಹೆಚ್ಚು ಗ್ಯಾಸ್‌ ಸಿಲಿಂಡರ್‌ಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ನೀರಿನಲ್ಲಿ ಕೊಚ್ಚಿ ಹೋದ ಅರ್ಚಕ ವಾಸುದೇವ್‌ ಅವರ ಶೋಧ ಕಾರ್ಯಕ್ಕೆ ಅಡ್ಡಿಯುಂಟಾಯಿತು. ರಾಜ್ಯ ವಿಪತ್ತು ನಿರ್ವಹಣಾ ದಳ ಹಾಗೂ ಪೌರರಕ್ಷಾ ದಳ ಸಿಬ್ಬಂದಿ ನಿರಂತರವಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

ಜಲಾವೃತಗೊಂಡ ಪ್ರದೇಶಗಳು ಯಶವಂತಪುರ, ಬಾಪೂಜಿನಗರ, ಮೈಸೂರು ರಸ್ತೆ, ಕುರುಬರಹಳ್ಳಿ, ವಿಜಯನಗರ, ಹೊಸಗುಡ್ಡದಹಳ್ಳಿ, ಚೋಳನಾಯಕನಹಳ್ಳಿ, ಸಿದ್ಧಾರ್ಥ ನಗರ, ಶಿವಾನಂದವೃತ್ತ, ಚಾಲುಕ್ಯ ವೃತ್ತ, ಲಗ್ಗೆರೆ, ಗಾಯತ್ರಿನಗರ, ರಾಜರಾಜೇಶ್ವರಿ ನಗರ, ಕೆ.ಪಿ.ಅಗ್ರಹಾರ, ಯಶವಂತಪುರ ಆರ್‌ಎಂಸಿ ಯಾರ್ಡ್‌, ಟಾಟಾ ಇನ್‌ಸ್ಟಿಟ್ಯೂಟ್‌, ಕೆಂಪೇಗೌಡ ಬಡಾವಣೆ, ಮಿಲ್ಕ್ ಕಾಲೋನಿ, ನಂದಿನಿ ಬಡಾವಣೆ, ಸಾಣೆಗೊರವನಹಳ್ಳಿ, ಗೋರಿಪಾಳ್ಯ, ಆಸ್ಟಿನ್‌ಟೌನ್‌, ಸಾರಕ್ಕಿ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.

ಜನರಿಂದ ತರಾಟೆ
ಕುರುಬರಹಳ್ಳಿ ವೃತ್ತದ ವೆಂಕಟರಮಣ ಸ್ವಾಮಿ ದೇವಾಲಯದ ಅರ್ಚಕ ವಾಸುದೇವ್‌ ಅವರು ನೀರಿನಲ್ಲಿ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಶಾಸಕ ಗೋಪಾಲಯ್ಯ ಹಾಗೂ ಪಾಲಿಕೆ ಸದಸ್ಯ ಶಿವರಾಜು ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಮುಂದಾದರು. ಈ ವೇಳೆ ಕುಟುಂಬಸ್ಥರು ಜನಪ್ರತಿನಿಧಿಗಳ ಮೇಲೆ ಹರಿಹಾಯ್ದರು. ಆಗುವುದೆಲ್ಲ ಆಗಿ ಹೋಗಿದೆ ಈಗ ಏಕೆ ಬಂದಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದೇ ರೀತಿ ಸಾಣೆಗೊವರನಹಳ್ಳಿಗೆ ಶಾಸಕ ಸುರೇಶ್‌ ಕುಮಾರ್‌ ಭೇಟಿ ನೀಡಿದ ವೇಳೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಬೆಂಗಳೂರಿನಲ್ಲಿ ದಾಖಲೆಯ ಮಳೆಯಾಗಿರುವುದರಿಂದ ನಗರದಲ್ಲಿ ಅನಾಹುತಗಳು ಸಂಭವಿಸುತ್ತಿದ್ದು, ಮಳೆಯಿಂದಾಗಿ ಜನರು ಮೃತಪಟ್ಟಿರುವುದು ದುರದೃಷ್ಟಕರ ಸಂಗತಿ. ರಾಜಕಾಲುವೆಗಳ ದುರಸ್ತಿಗಾಗಿ ಮುಖ್ಯಮಂತ್ರಿಗಳು 1200 ಕೋಟಿ ರೂ. ನೀಡಿದ್ದು, ದುರಸ್ತಿಗಾಗಿ ಟೆಂಡರ್‌ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು. 

ಕೆ.ಜೆ.ಜಾರ್ಜ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ 

ಗುಂಡಿಗಳಾಯ್ತು; ರಾಜಕಾಲುವೆ ಸರದಿ ವಾರದ ಹಿಂದೆ ರಸ್ತೆ ಗುಂಡಿಗಳು ಮೂವರನ್ನು ಬಲಿ ಪಡೆದಿದ್ದವು. ಶುಕ್ರವಾರ ರಾಜಕಾಲುವೆಗಳೂ ಮೂವರನ್ನು ಬಲಿ ಪಡೆದಿವೆ. ವಾರದ ಹಿಂದಷ್ಟೇ ರಸ್ತೆಗುಂಡಿಗಳಿಗೆ ದಂಪತಿ ಹಾಗೂ ಮತ್ತೋರ್ವ ಮಹಿಳೆ ಸಾವನ್ನಪ್ಪಿದ್ದರು. ಶುಕ್ರವಾರ ಕುರುಬರಹಳ್ಳಿ 18ನೇ ಕ್ರಾಸ್‌ನಲ್ಲಿ ಗೋಡೆ ಕುಸಿದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದರು. ಕುರುಬರಹಳ್ಳಿ ವೃತ್ತದಲ್ಲಿ ಓರ್ವ ಅರ್ಚಕರು ಮತ್ತು ಜೆ.ಸಿ. ನಗರದಲ್ಲಿ ತಾಯಿ-ಮಗಳು ರಾಜಕಾಲುವೆಯಲ್ಲಿ ಕೊಚ್ಚಿಹೋದರು. 

ಮೆಟ್ರೋ ಮೊರೆ ಹೋದ ಮೇಯರ್‌ ಮಳೆಯಿಂದಾಗಿ ನಗರದಲ್ಲಿ ರಸ್ತೆಗಳಲ್ಲಿ ನೀರು ನಿಂತು ತೀವ್ರ ಸಂಚಾರ ದಟ್ಟಣೆ ಉಂಟಾದ ಹಿನ್ನೆಲೆಯಲ್ಲಿ ಮೇಯರ್‌ ಸಂಪತ್‌ರಾಜ್‌ ಮಳೆ ಅನಾಹುತ ಪ್ರದೇಶಗಳಿಗೆ ತೆರಳಲು ನಮ್ಮ ಮೆಟ್ರೋ ಮೊರೆ ಹೋದರು. ರಾಜಾಜಿನಗರದವರೆಗೆ ಮೆಟ್ರೋ ಮೂಲಕ ಪ್ರಯಾಣಿಸಿದ ಅವರು ಅಲ್ಲಿಂದ ಬಿಬಿಎಂಪಿ ಸದಸ್ಯ ಶಿವರಾಜ್‌ ಅವರ ಕಾರಿನಲ್ಲಿ ಕುರುಬರಹಳ್ಳಿಗೆ ಭೇಟಿ ನೀಡಿದರು.

ಅಧಿಕಾರಿಗಳ ರಜೆ ರದ್ದು: ಭಾರಿ ಮಳೆಯಿಂದಾಗಿ ನಗರದಲ್ಲಿ ಅನಾಹುತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ರಜೆಯನ್ನು ಮೇಯರ್‌ ಸಂಪತ್‌ ರಾಜ್‌ ರದ್ದುಪಡಿಸಿದ್ದಾರೆ. ಪಾಲಿಕೆಯ ಎಲ್ಲ ಅಧಿಕಾರಿಗಳು ಶನಿವಾರ ಹಾಗೂ ಭಾನುವಾರವೂ ಕೆಲಸಕ್ಕೆ ಹಾಜರಾಗಿ ಸಾರ್ವಜನಿಕರಿಗೆ ಆಗಿರುವ ತೊಂದರೆಗಳ ಪರಿಹಾರಿಸಲು ಮುಂದಾಗಬೇಕು ಎಂದು ಆದೇಶಿಸಿದ್ದಾರೆ.

ಮಾಹಿತಿ ಪಡೆದ ಸಿಎಂ: ಶುಕ್ರವಾರ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಆಗಿರುವ ಅನಾಹುತಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರೊಂದಿಗೆ ಮಳೆಯಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡು ವಂತೆ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next