Advertisement

ಮೈತ್ರಿ ಸರ್ಕಾರ ಬಂದರೂ ಕ್ಯಾಂಟೀನ್‌ ತೆರೆದಿಲ್ಲ

03:11 PM Jul 12, 2018 | |

ಚಿಕ್ಕಬಳ್ಳಾಪುರ: ನಗರ ಪ್ರದೇಶಕ್ಕೆ ಉದ್ಯೋಗ ಆರಿಸಿ ಬರುವ ರೈತಾಪಿ ಕೂಲಿ ಕಾರ್ಮಿಕರಿಗೆ ಮೂರು ಹೊತ್ತು
ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಅನುಷ್ಠಾನಗೊಂಡಿದ್ದ ಮಹತ್ವಾಕಾಂಕ್ಷಿ
ಇಂದಿರಾ ಕ್ಯಾಂಟೀನ್‌ ಯೋಜನೆ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗು ಚುನಾಯಿತ ಜನಪ್ರತಿನಿಧಿಗಳ ಉದಾಸೀನತೆಗೆ
ಒಳಗಾಗಿರುವುದು ಎದ್ದು ಕಾಣುತ್ತಿದೆ.

Advertisement

 ಪ್ರತಿ ದಿನ ಬೆಳಗ್ಗೆ 5 ರೂ.ಗೆ ತಿಂಡಿ, ಮಧ್ಯಾಹ್ನ, ರಾತ್ರಿ ಸಮಯದಲ್ಲಿ ಬರೋಬ್ಬರಿ 10 ರೂ.ಗೆ ಊಟ ಸವಿಯುವ ಭಾಗ್ಯ ಕಲ್ಪಿಸುವ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಮೊದಲಿಗೆ ಬೆಂಗಳೂರಿಗೆ ಸಿಮೀತಗೊಳಿಸಿತ್ತು. ಇಂದಿರಾ ಕ್ಯಾಂಟೀನ್‌ ಯೋಜನೆ ಕಾಂಗ್ರೆಸ್‌ ಸರ್ಕಾರಕ್ಕೆ ಅಲ್ಪಾವಧಿಯಲ್ಲಿ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕಾರಣ
ರಾಜ್ಯಾದ್ಯಂತ ನಗರ, ಪಟ್ಟಣಗಳಿಗೆ ವಿಸ್ತರಿಸಿತ್ತು. ಆದರೆ, ಜಿಲ್ಲಾಡಳಿತ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ ಕ್ಯಾಂಟೀನ್‌ ನಿರ್ಮಾಣಕ್ಕೆ ಮೇ ತಿಂಗಳಲ್ಲಿ ತಡೆಯೊಡ್ಡಿತ್ತು. ಚುನಾವಣೆ ನೀತಿ ಸಂಹಿತೆ ತೆರವಾಗಿ ಎರಡು ತಿಂಗಳಾಗುತ್ತಾ ಬಂದರೂ ಇಂದಿರಾ ಕ್ಯಾಂಟೀನ್‌ ಮಾತ್ರ ಜಿಲ್ಲೆಯ ಪಾಲಿಗೆ ಕಸನಸಾಗಿಯೇ ಉಳಿದಿದೆ. ಹಿಂದಿನ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿ ಮುಗಿದು ಜೆಡಿಎಸ್‌-ಕಾಂಗ್ರೆಸ್‌
ಸಮ್ಮಿಶ್ರ ಸರ್ಕಾರ ಬಂದರೂ ಇಂದಿಗೂ ಇಂದಿರಾ ಕ್ಯಾಂಟೀನ್‌ ಆರಂಭಗೊಂಡಿಲ್ಲ.

ಚಿಕ್ಕಬಳ್ಳಾಪುರ ಬಿಟ್ಟರೆ ಎಲ್ಲೂ ಕಾಮಗಾರಿ ನಡೆದಿಲ್ಲ: ಜಿಲ್ಲೆಯ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ,
ಗೌರಿಬಿದನೂರು, ಶಿಡ್ಲಘಟ್ಟ ಹಾಗೂ ಗುಡಿಬಂಡೆ ಪಟ್ಟಣ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀರ್‌ ಆರಂಭಿಸುವ ನಿಟ್ಟಿನಲ್ಲಿ
ಜಿಲ್ಲಾ ನಗರಾಭಿವೃದ್ಧಿ ಕೋಶ ಈ ಹಿಂದೆಯೆ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದು ಕ್ಯಾಂಟೀನ್‌ ಕಾಮಗಾರಿ
ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ, ಇದುವರೆಗೂ ಚಿಕ್ಕಬಳ್ಳಾಪುರ ಹೊರತುಪಡಿಸಿ ಎಲ್ಲೂ ಕೂಡ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ಆರಂಭಗೊಳ್ಳದಿರುವುದು ಎದ್ದು ಕಾಣುತ್ತಿದೆ.

ಶಿಡ್ಲಘಟ್ಟ ರೇಷ್ಮೆ ನಗರವಾಗಿದ್ದು ಕೂಲಿ ಕಾರ್ಮಿಕರ ಸಂಖ್ಯೆ ಅಧಿಕವಾಗಿದೆ. ಅದೇ ರೀತಿ ಚಿಂತಾಮಣಿ ವಾಣಿಜ್ಯ
ಕೇಂದ್ರವಾಗಿದ್ದು, ಇಲ್ಲಿ ಕೂಡ ಕೂಲಿ ಕಾರ್ಮಿಕರ ಸಂಖ್ಯೆ ಅಧಿಕವಾಗಿದೆ. ಆದರೆ, ಸ್ಥಳೀಯ ನಗರಸಭೆಗಳು ಮಾತ್ರ
ಕ್ಯಾಂಟೀನ್‌ ನಿರ್ಮಾಣದ ಬಗ್ಗೆ ಆಸಕ್ತಿ ತೋರದಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ
ಕಾರಣವಾಗಿದೆ. 

ಬಾಗೇಪಲ್ಲಿ, ಗುಡಿಬಂಡೆಯಲ್ಲಿ ಕ್ಯಾಂಟೀನ್‌ ಮರೀಚಿಕೆ: ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲೂಕಾಗಿರುವ
ಬಾಗೇಪಲ್ಲಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣದ ಸ್ಥಳ ವಿವಾದಕ್ಕೆ ಗುರಿಯಾಗಿದೆ. ಹಾಲಿ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ಸಂತೆ ಮೈದಾನದಲ್ಲಿ ಈ ಹಿಂದೆ ಕ್ಯಾಂಟೀನ್‌ ನಿರ್ಮಾಣಕ್ಕೆ ಭೂಮಿ ಪೂಜೆ ಸಹ ಮಾಡಿದ್ದರು. ಆದರೆ, ಅದಕ್ಕೆ ಸಿಪಿಎಂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ನಗರದ ಗೂಳೂರು ವೃತ್ತದಲ್ಲಿ ಆರಂಭಿಸುವಂತೆ ಪ್ರತಿಭಟನೆ ನಡೆಸಿದ್ದರು. ಇದರಿಂದ ಎಲ್ಲೂ ಕಾಮಗಾರಿ ಆರಂಭಗೊಳ್ಳದೇ ನನೆಗುದಿಗೆ ಬಿದ್ದಿದೆ. ಶಿಡ್ಲಘಟ್ಟದಲ್ಲಿ ಕಾಮಗಾರಿ ಆರಂಭಗೊಂಡಿಲ್ಲ.ಚಿಂತಾಮಣಿಯಲ್ಲಿ ಗುರುಭವನದ ಆವರಣದಲ್ಲಿ ನಿರ್ಮಿಸಬೇಕೆಂಬ ನಿರ್ಧಾರಕ್ಕೆ ಶಿಕ್ಷಕರ ವಿರೋಧ ವ್ಯಕ್ತಪಡಿಸಿದ್ದರಿಂದ ಕೊನೆ ಗಳಿಗೆಯಲ್ಲಿ ಎಪಿಎಂಸಿ ಆವರಣದಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಚುನಾವಣೆಗೂ ಮೊದಲು ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ ಅನುಮತಿ ಕೊಟ್ಟ ನಂತರ ಇದೀಗ ಎಪಿಎಂಸಿ ಆಡಳಿತ ಮಂಡಳಿ ಕ್ಯಾಂಟೀನ್‌ ನಿರ್ಮಾಣಕಕೆ ತಗಾದೆ ತೆಗೆದಿರುವುದರಿಂದ ಕಾಮಗಾರಿ ನಿಂತಿದೆ. ಈ ವಿಚಾರದಲ್ಲಿ
ರಾಜಕೀಯ ಬಣ್ಣ ಪಡೆದುಕೊಂಡಿರುವುದರಿಂದ ಕಾಮಗಾರಿ ಆರಂಭಗೊಂಡಿಲ್ಲ

Advertisement

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next