Advertisement

ಅಂತೂ ಬೋನಿಗೆ ಬಿತ್ತು ನರಭಕ್ಷಕ ಚಿರತೆ!

04:53 PM Dec 22, 2018 | Team Udayavani |

ಕಂಪ್ಲಿ: ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕನ ಹೊತ್ತೂಯ್ದು ಕೊಂದು ಹಾಕಿ ನಂತರ ನಾಪತ್ತೆಯಾಗಿದ್ದ ನರಭಕ್ಷಕ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಸತತ ಹನ್ನೊಂದು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸೋಮಲಾಪುರ ಗ್ರಾಮಸ್ಥರಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದ ಚಿರತೆ ಶುಕ್ರವಾರ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ 3 ವರ್ಷದ ಬಾಲಕನನ್ನು ಹೊತ್ತೂಯ್ದ ನಂತರ ಸೋಮಲಾಪುರ ಗ್ರಾಮದ ಜನ ತಲ್ಲಣಗೊಂಡಿದ್ದರು. ಗುಡ್ಡದ ಬುಡದಲ್ಲೇ ಇದ್ದ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು. ಚಿರತೆ ಸೆರೆಹಿಡಿಯದಿದ್ದಲ್ಲಿ ಮತ್ತಷ್ಟು
ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು. ಹೀಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡು ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
 
 ಅರಣ್ಯ ಇಲಾಖೆ ಮೊದಲ ಹಂತದಲ್ಲಿ ಮೂರು, ಎರಡನೇ ಹಂತದಲ್ಲಿ ನಾಲ್ಕು ಹಾಗೂ ನಂತರ ಒಟ್ಟು ಏಳು ಬೋನ್‌ಗಳನ್ನು ಅಳವಡಿಸಿತ್ತು. ಆದರೆ ಆಗಾಗ ಕಾಣಿಸಿಕೊಳ್ಳುತ್ತಿದ್ದ ಚಿರತೆ ಬೋನಿಗೆ ಮಾತ್ರ ಬೀಳುತ್ತಿರಲಿಲ್ಲ. ಇದು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ತಲೆನೋವಿಗೆ ಕಾರಣವಾಗಿತ್ತು.

ಪ್ರತಿದಿನ ಈ ಭಾಗದ ಮೆಟ್ರಿ, ದೇವಲಾಪುರ, ಸೋಮಲಾಪುರ, ಹಳೇದರೋಜಿ, ಮಾದಾಪುರಗಳಲ್ಲಿ ಕಾಣಿಸಿಕೊಳ್ಳುವ ಚಿರತೆ ಕುರಿ ಮತ್ತು ನಾಯಿಗಳನ್ನು ಹೊತ್ತೂಯ್ದು ಗುಡ್ಡದಲ್ಲಿ ಮರೆಯಾಗುತ್ತಿತ್ತು. ಚಿರತೆ ಪತ್ತೆಗಾಗಿ ಡಿಜಿಟಲ್‌ ಕ್ಯಾಮೆರಾ ಮತ್ತು ಟ್ರ್ಯಾಪ್‌ ಕ್ಯಾಮೆರಾ ಅಳವಡಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಚಿರತೆಯ ಚಲನವಲನ ಹಾಗೂ ಹೆಜ್ಜೆ ಗುರುತು ಪತ್ತೆ ಹಚ್ಚಲು ಡ್ರೋಣ್‌ ಕ್ಯಾಮೆರಾ ಬಳಸುವ ಜೊತೆಗೆ ಸ್ಥಳೀಯರೊಂದಿಗೆ ಕೂಂಬಿಂಗ್‌ ನಡೆಸಲಾಯಿತು. ಆದರೂ ನರಭಕ್ಷಕ ಚಿರತೆ ಮಾತ್ರ ಯಾರ ಕಣ್ಣಿಗೂ ಬಿದ್ದಿರಲಿಲ್ಲ.

ಆದರೆ ಕೊನೆಗೂ ಶುಕ್ರವಾರ ಬೆಳಗಿನ ಜಾವ ಸೋಮಲಾಪುರ ಗ್ರಾಮದ ಎರದಮಟ್ಟಿಯ ಚೆಕ್‌ ಡ್ಯಾಮ್‌ ಹತ್ತಿರ ಇಡಲಾಗಿದ್ದ ಬೋನ್‌ನಲ್ಲಿ ಚಿರತೆ ಸೆರೆಯಾಗಿದೆ. ಸೆರೆಯಾದ ಚಿರತೆ ನೋಡಲು ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನ
ಜಮಾಯಿಸಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು.
 
ಈ ಸಂದರ್ಭದಲ್ಲಿ ಹೊಸಪೇಟೆ ವಲಯ ಅರಣ್ಯಾಧಿಕಾರಿ ಟಿ.ಭಾಸ್ಕರ್‌, ಉಪವಲಯ ಅರಣ್ಯಾಧಿಕಾರಿ ಎಸ್‌.ದೇವರಾಜ, ಸಿಪಿಐ ಡಿ.ಹುಲುಗಪ್ಪ, ಪಿಎಸ್‌ಐ ಕೆಬಿ ವಾಸುಕುಮಾರ್‌ ಮತ್ತು ಸಿಬ್ಬಂದಿ ಹಾಜರಿದ್ದರು.

ಸ್ಥಳೀಯರು ಮತ್ತು ಇಲಾಖೆ ಸಿಬ್ಬಂದಿ ನಿರಂತರ ಶ್ರಮದಿಂದ ನರಭಕ್ಷಕ ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿದಿದ್ದು,
ಇದು ಈಗಾಗಲೇ ಮನುಷ್ಯನ ಮೇಲೆ ದಾಳಿ ಮಾಡಿರುವುದರಿಂದ ಇದನ್ನು ಕಾಡಿನಲ್ಲಿ ಬಿಡದೆ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಸ್ಥಳಾಂತರಿಸಲಾಗುವುದು. ಇನ್ಮುಂದೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಆದರೂ ಜನತೆ ಎಚ್ಚರಿಕೆಯಿಂದ ಇರುವುದು ಉತ್ತಮ. 
ಡಾ| ಪಿ.ರಮೇಶಕುಮಾರ್‌, ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಳ್ಳಾರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next