Advertisement

ಅಭ್ಯರ್ಥಿ ಹಣೆಬರಹ ನಾಳೆ ಬಯಲು

09:54 AM May 22, 2019 | Team Udayavani |

ಕೊಪ್ಪಳ: ಲೋಕಸಭಾ ಕ್ಷೇತ್ರದ ಮತ ಎಣಿಕೆ ಮೇ 23ರಂದು ನಗರದ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಬೆಳಗ್ಗೆ 8ರಿಂದ ಆರಂಭವಾಗಲಿದ್ದು, ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಒಟ್ಟು 569 ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಪ್ರತಿ ಕ್ಷೇತ್ರಕ್ಕೆ 68 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ. ಸುನೀಲ್ಕುಮಾರ ಹೇಳಿದರು.

Advertisement

ನಗರದ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸ್ಟ್ರಾಂಗ್‌ ರೂಂ ಹಾಗೂ ಸಿದ್ಧತೆ ಪರಿಶೀಲನೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಒಂದು ತಿಂಗಳಿಂದ ಮತಯಂತ್ರ ಇರುವ ಕೊಠಡಿಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಸಿಎಪಿಎಫ್‌, ಪೊಲೀಸ್‌ ಪಡೆ ಸೇರಿ ಇತರೆ ತಂಡಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿವೆ. ಇನ್ನೂ ಕಾಲೇಜಿನ ಕೆಳ ಕೊಠಡಿಗಳಲ್ಲಿ ಸಿಂಧನೂರು, ಮಸ್ಕಿ, ಕನಕಗಿರಿ, ಸಿರಗುಪ್ಪಾ ಕ್ಷೇತ್ರಗಳ ಮತಯಂತ್ರಗಳನ್ನು ಇರಿಸಲಾಗಿದೆ. ಮೊದಲ ಮಹಡಿಯಲ್ಲಿ ಕುಷ್ಟಗಿ, ಗಂಗಾವತಿ, ಕೊಪ್ಪಳ ಹಾಗೂ ಯಲಬುರ್ಗಾ ಕ್ಷೇತ್ರದ ಮತಯಂತ್ರಗಳನ್ನು ಇರಿಸಲಾಗಿದೆ. ಪ್ರತಿ ಮತ ಕ್ಷೇತ್ರಕ್ಕೆ 68 ಸಿಬ್ಬಂದಿ ನೇಮಕ ಮಾಡಲಾಗಿದೆ. ಎಂಟೂ ಕ್ಷೇತ್ರಕ್ಕೆ 569 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ 117 ಏಜೆಂಟರ್‌ ನೇಮಕಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರಾಗಿ ರಣ ವಿಜಯ್‌ ಯಾದವ್‌ ಹಾಗೂ ಉರ್ಮಿಳಾ ಸುರೇಂದರ್‌ ಶುಕ್ಲಾ ಅವರನ್ನು ಭಾರತ ಚುನಾವಣಾ ಆಯೋಗವು ನೇಮಕ ಮಾಡಿದೆ. ಈ ಇಬ್ಬರು ಅಧಿಕಾರಿಗಳು ತಲಾ 4 ಕ್ಷೇತ್ರಗಳ ಮತ ಎಣಿಕೆಯ ವೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಬೆಳಗ್ಗೆ 7:45ಕ್ಕೆ ಸ್ಟ್ರಾಂಗ್‌ ರೂಂ ಓಪನ್‌: ಮೇ 23ರ ಬೆಳಗ್ಗೆ 7:45ಕ್ಕೆ ಚುನಾವಣಾ ವೀಕ್ಷಕರ, ಮತ ಎಣಿಕಾ ವೀಕ್ಷಕರ ಸಮಕ್ಷಮದಲ್ಲಿ ಸ್ಟ್ರಾಂಗ್‌ ರೂಂ ತೆರೆಯಲಾಗುವುದು. ಅಂಚೆ ಮತಗಳ ಎಣಿಕೆ ಕಾರ್ಯ ಬೆಳಗ್ಗೆ 8ರಿಂದ ಆರಂಭವಾಗಲಿದೆ. ಆಗ ಎಲ್ಲ ಎಂಟೂ ಕ್ಷೇತ್ರಗಳ ಮತ ಎಣಿಕಾ ಕಾರ್ಯ ಆರಂಭವಾಗಲಿದೆ. ಪ್ರತಿ ಸುತ್ತಿನ ಫಲಿತಾಂಶವು ಸುವಿಧಾ ಎನ್ನುವ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ಸಾರ್ವಜನಿಕವಾಗಿ ಮೈಕ್‌ ಮೂಲಕ ಫಲಿತಾಂಶವನ್ನು ಪ್ರಕಟ ಮಾಡಲಾಗುವುದು. ಜೊತೆಗೆ ಎಲ್ಇಡಿ ಪರದೆ ಮೂಲಕ ಪ್ರದರ್ಶನ ಮಾಡಲಾಗುವುದು ಎಂದರು.

5 ವಿವಿಪ್ಯಾಟ್ ಮತ ಎಣಿಕೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ವಿಧಾನಸಭಾ ಮತ ಕ್ಷೇತ್ರದ ಮತ ಎಣಿಕೆ ಮುಕ್ತಾಯದ ಬಳಿಕ ಆ ಕ್ಷೇತ್ರದಲ್ಲಿನ 5 ವಿವಿಪ್ಯಾಟ್‌ಗಳಲ್ಲಿನ ಚೀಟಿಗಳ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಇದನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಅನುಕ್ರಮವಾಗಿ ವಿವಿ ಪ್ಯಾಟ್‌ಗಳಲ್ಲಿನ ಚೀಟಿ ಎಣಿಕೆ ಮಾಡಲಾಗುವುದು. ವಿವಿ ಪ್ಯಾಟ್‌ನ ಮತ ಎಣಿಕೆ ಮುಕ್ತಾಯದ ನಂತರವಷ್ಟೇ ಫಲಿತಾಂಶವನ್ನು ಪ್ರಕಟ ಮಾಡಲಾಗುವುದು ಎಂದರು.

Advertisement

ಮೊದಲು ಅಂಚೆ ಮತ ಎಣಿಕೆ: ಈ ವರೆಗೂ 2562 ಮತಗಳು ಜಿಲ್ಲಾಡಳಿತಕ್ಕೆ ತಲುಪಿದ್ದು, ಮೇ. 22ರ ವರೆಗೂ ಅಂಚೆ ಮತಗಳನ್ನು ಸ್ವೀಕಾರ ಮಾಡಲಾಗುವುದು. ಆ ನಂತರ ಅಂಚೆ ಮತಗಳನ್ನು ಸ್ವೀಕಾರ ಮಾಡಲ್ಲ. ಅಲ್ಲದೇ, ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಲಾಗುವುದು. ಬಳಿಕ ಇವಿಎಂ ಯಂತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಮೆರವಣಿಗೆ ಮಾಡುವಂತಿಲ್ಲ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಕೇಂದ್ರದ ಹೊರಗೆ ಸೇರಿದಂತೆ ಜಿಲ್ಲೆ ಎಲ್ಲೂ ಮೆರವಣಿಗೆ ಮಾಡುವಂತಿಲ್ಲ. ಅಭ್ಯರ್ಥಿಗಳು ಗೆದ್ದರೂ ನಿಯಮ ಉಲ್ಲಂಘಿಸುವಂತಿಲ್ಲ. ಈ ಬಗ್ಗೆ ಪಕ್ಷಗಳ ಅಭ್ಯರ್ಥಿಗಳ ಕರೆದು ಸಭೆ ಮಾತನಾಡಲಾಗುವುದು ಎಂದರು.

ಎಸ್‌ಪಿ ರೇಣುಕಾ ಸುಕುಮಾರ ಮಾತನಾಡಿ, ಮತ ಎಣಿಕೆಯ ದಿನದಂದು ಎಣಿಕಾ ಕೇಂದ್ರ ಸೇರಿ ಜಿಲ್ಲಾದ್ಯಂತ ವಿವಿಧ ಬಿಗಿ ಬಂದೋಬಸ್ತ್ ಒದಗಿಸಲಾಗುವುದು. ಎಸ್‌ಪಿ, 2 ಡಿಎಸ್‌ಪಿ, 500 ಗೃಹರಕ್ಷಕ ದಳ, 12 ಕೆಎಸ್‌ಆರ್‌ಪಿ, ಡಿಆರ್‌ 3, ಸಿಐಎಸ್‌ಎಫ್‌ ಸೇರಿ 2 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮತ ಎಣಿಕಾ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಬಿಟ್ಟರೆ ಮತ್ತ್ತ್ಯಾರು ಮೊಬೈಲ್ ಬಳಕೆ ಮಾಡುವಂತ್ತಿಲ್ಲ. ಕಾನೂನು ಸುವ್ಯವಸ್ಥೆಗೆ ಎಲ್ಲರೂ ಸಹಕಾರ ನೀಡಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next