Advertisement
ಉತ್ತರ ದಿಲ್ಲಿಯ ಯಮುನಾ ದಂಡೆಯ ಮೇಲೆ ಶಿಥಿಲಾವಸ್ಥೆಯಲ್ಲಿರುವ ನಿರಾಶ್ರಿತರ ಕ್ಯಾಂಪಿನಲ್ಲಿ, ಪುಟ್ಟ “ನಾಗರಿಕತಾ’ ಜನಿಸಿದ್ದಾಳೆ. ನಾಗರಿಕತಾಳ ಅಪ್ಪ-ಅಮ್ಮ ಪಾಕಿಸ್ಥಾನದಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳಿಂದ ಬಚಾವಾಗಲು ದೆಹಲಿಗೆ ಓಡಿಬಂದವರು. ತಮಗೆ ಗೌರವಯುತ ಜೀವನ ನಡೆಸಲು ಅವಕಾಶ ಕೊಡುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಬಂದದ್ದೇ, ಅವರು ತಮ್ಮ ಮಗಳ ಹೆಸರನ್ನು “ನಾಗರಿಕತಾ’ ಎಂದು ಇಟ್ಟಿದ್ದಾರೆ. ತಮ್ಮ ಮೂಲ ದೇಶಗಳಲ್ಲಿ ಯಾವ ನಾಗರಿಕತೆಯನ್ನು ಪಡೆಯಲು ಇವರೆಲ್ಲ ವಂಚಿತರಾಗಿದ್ದರೋ, ಅಂಥ ನಾಗರಿಕತೆಯನ್ನು ಭಾರತದಲ್ಲಿ ಪಡೆಯುವ ಅವರ ಆಸೆಗೆ ರೆಕ್ಕೆ ನೀಡಿದೆ ಸಿಎಎ.
Related Articles
Advertisement
ಈಗ ಏಳುವ ಪ್ರಶ್ನೆಯೆಂದರೆ, ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ 14ನೇ ಪರಿಚ್ಛೇದದಲ್ಲಿ ಪ್ರತಿಪಾದಿಸಲಾದ ಸಮಾನತೆಯ ಹಕ್ಕಿನ ನಿಬಂಧನೆಗಳಿಗೆ ಬದ್ಧವಾಗಿದೆಯೇ ಎಂಬುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಪರಿಚ್ಛೇದ 14ರಲ್ಲಿ “”ಭಾರತವು ತನ್ನ ಭೂಪ್ರದೇಶದೊಳಗಿನ ಯಾವುದೇ ವ್ಯಕ್ತಿಯನ್ನು ಸಮಾನ ರಕ್ಷಣೆ ಮತ್ತು ಸಮಾನತೆಯಿಂದ ವಂಚಿಸಬಾರದು” ಎಂದು ಹೇಳುತ್ತದೆ. ಗೃಹ ಸಚಿವ ಅಮಿತ್ ಶಾ ಅವರೂ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ಉದ್ದೇಶ ಮತ್ತು ಕಾರಣಗಳನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ.
ಇತಿಹಾಸವನ್ನು ನೋಡಿದರೆ, ಭಾರತ, ಆಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಗಡಿಯುದ್ದಕ್ಕೂ ವಲಸೆ ನಡೆದಿರುವುದು ತಿಳಿಯುತ್ತದೆ. ಧರ್ಮದ ಕಾರಣಕ್ಕಾಗಿ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಆಶ್ರಯ ಕೋರಿ ಬಂದಿರುವ ಸಮುದಾಯಗಳಲ್ಲಿ ಅನೇಕರ ಟ್ರಾವೆಲ್ ಡಾಕ್ಯುಮೆಂಟ್‌ಗಳ ಅವಧಿ ಮುಗಿದಿದೆ ಅಥವಾ ಅಪೂರ್ಣ ದಾಖಲೆಗಳನ್ನು ಹೊಂದಿದ್ದಾರೆ, ಅಥವಾ ಅವರ ಬಳಿ ದಾಖಲೆಗಳೇ ಇಲ್ಲ. ಮೋದಿ ಸರ್ಕಾರವು ತನ್ನ ಮೊದಲನೇ ಅವಧಿಯಲ್ಲಿ ಈ ರೀತಿಯ ವಲಸಿಗರಿಗೆ ಪಾಸ್‌ಪೋರ್ಟ್ ಅಧಿನಿಯಮ(ಭಾರತ ಪ್ರವೇಶಕ್ಕೆ) 1920ರ ಹಾಗೂ ವಿದೇಶಿ ಅಧಿನಿಯಮ 1946ರ ಪ್ರತಿಕೂಲ ದಂಡನಾರ್ಹ ಅಂಶಗಳಿಂದಲೂ ವಿನಾಯಿತಿ ನೀಡಿದೆ. ಇದಷ್ಟೇ ಅಲ್ಲದೇ 2016ರಲ್ಲಿ ಮೋದಿ ಸರ್ಕಾರ ಈ ನಿರಾಶ್ರಿತರಿಗೆ ದೀರ್ಘಕಾಲಿಕ ವೀಸಾ ಪಡೆಯಲೂ ಅರ್ಹರನ್ನಾಗಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಒಟ್ಟಲ್ಲಿ, ಧಾರ್ಮಿಕ ಹಿಂಸೆಗೆ ತುತ್ತಾಗಿರುವವರಿಗೆ ನಾಗರಿಕತೆ ದೊರಕುವಂತೆ ಮಾಡಲು ಸಶಕ್ತಗೊಳಿಸುತ್ತದೆ.
ಸಿಎಎ, ಸಂವಿಧಾನದ ಅನುಚ್ಛೇದ 25ರ ಉಲ್ಲಂಘನೆ ಮಾಡುತ್ತಿದೆಯೇ ಎನ್ನುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಅನುಚ್ಛೇದ 25, ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಇಷ್ಟವಾದ ಧರ್ಮವನ್ನು ಮುಕ್ತವಾಗಿ ಅನುಸರಿಸಲು, ಆಚರಿಸಲು ಸಮಾನ ಹಕ್ಕನ್ನು ನೀಡುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಯಾವುದೇ ರೀತಿಯಲ್ಲೂ ಈ ಅಂಶಗಳನ್ನು ಉಲ್ಲಂ ಸಿಲ್ಲ. ಈ ಸತ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸ್ಪಷ್ಟವಾಗಿ ಹೇಳಿದ್ದಾರೆ. “”ಸಿಎಬಿಯಿಂದಾಗಿ ಭಾರತೀಯ ಅಲ್ಪಸಂಖ್ಯಾತರ ಹಕ್ಕುಗಳ, ಭಾರತೀಯ ಜಾತ್ಯಾತೀತ ಮೌಲ್ಯಗಳ ಮತ್ತು ಸಂಪ್ರದಾಯಗಳ ಹನನವಾಗುವುದಿಲ್ಲ” ಎಂದವರು ಸ್ಪಷ್ಟಪಡಿಸಿದ್ದಾರೆ.
ಸಿಎಎ ಎನ್ನುವುದು ಅನ್ಯಾಯವನ್ನು ಎದುರಿಸುತ್ತಿರುವ ಸಾವಿರಾರು ನಿರ್ವಸಿತ ಕುಟುಂಬಗಳನ್ನು ಸಬಲೀಕರಣಗೊಳಿಸುವ ಐತಿಹಾಸಿಕ ಹೆಜ್ಜೆಯಾಗಿದೆ. ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿರುವ ಕೆಲವು ನಾಯಕರು ಇಂದು ದೇಶದಲ್ಲಿ ಹಿಂಸೆ ಮತ್ತು ಅಶಾಂತಿಯನ್ನು ಹಬ್ಬಿಸುತ್ತಿದ್ದಾರೆ. ಅವರಿಗೆ ನಮ್ಮ ವಿನಂತಿಯಿಷ್ಟೇ- ಸ್ವಾಮಿ ವಿವೇಕಾನಂದರು 1893ರಲ್ಲಿ ಧರ್ಮಸಂಸತ್ತಿನಲ್ಲಿ ಮಾಡಿದ ಭಾಷಣವನ್ನು ಒಮ್ಮೆ ನೆನಪುಮಾಡಿಕೊಳ್ಳಿ: “”ಎಲ್ಲಾ ದೇಶಗಳ ಹಾಗೂ ಎಲ್ಲಾ ಧರ್ಮಗಳ ನಿರಾಶ್ರಿತರಿಗೆ, ಧಾರ್ಮಿಕ ಹಿಂಸಾ ಪೀಡಿತರಿಗೆ ನೆಲೆ ಒದಗಿಸಿದ ರಾಷ್ಟ್ರ ನನ್ನದು ಎನ್ನುವುದಕ್ಕೆ ನನಗೆ ಹೆಮ್ಮೆಯಾಗುತ್ತದೆ” ಎಂದಿದ್ದರು ವಿವೇಕಾನಂದರು. ಸಿಎಎ ಹಲವು ರೀತಿಯಲ್ಲಿ ಇದೇ ಆಕಾಂಕ್ಷೆಗಳನ್ನೇ ಪೂರ್ಣಗೊಳಿಸುತ್ತದೆ.(ಮೂಲ: ಟಿಒಐ) – ಧರ್ಮೇಂದ್ರ ಪ್ರಧಾನ್, ಕೇಂದ್ರ ಇಂಧನ ಸಚಿವ