ಬೆಂಗಳೂರು: ನಗರದ ರಸ್ತೆಗಳನ್ನೆಲ್ಲಾ ಆವರಿಸಿರುವ ಗುಂಡಿಗಳನ್ನು ಮುಚ್ಚಲು ಮಿಲ್ಲಿಂಗ್ ಮಷಿನ್ ಬಳಕೆಗೆ ಮುಂದಾಗಿರುವ ಬಿಬಿಎಂಪಿ, ಗುರುವಾರದಿಂದ ವಿವಿಧೆಡೆ ಈ ಯಂತ್ರ ಕಾರ್ಯಾರಂಭ ಮಾಡಲಿದೆ. ಸಾಮಾನ್ಯವಾಗಿ ವೈಟ್‌ಟಾಪಿಂಗ್ ರಸ್ತೆ ನಿರ್ಮಾಣಕ್ಕೆ ಈ ಮಿಲ್ಲಿಂಗ್ ಯಂತ್ರ ಬಳಸಲಾಗುತ್ತದೆ. ಆದರೆ, ಇದೇ ಮೊದಲ ಬಾರಿ ರಸ್ತೆ ಗುಂಡಿಗಳನ್ನು ಮುಚ್ಚಲು ಈ ಯಂತ್ರ ಬಳಕೆಯಾಗುತ್ತಿದೆ. ಇದರಿಂದ ಗುಂಡಿಗಳ ಕುರುಹುಗಳು ಕೂಡ ಇಲ್ಲದಂತೆ ಮಾಡುವ ಗುರಿಯನ್ನು ಬಿಬಿಎಂಪಿ ಹೊಂದಿದೆ.
ಈಗ ಗುಂಡಿಗಳನ್ನು ಮುಚ್ಚಲು ಅನುಸರಿಸುತ್ತಿರುವ ವಿಧಾನದಿಂದ ಬರೀ “ಬ್ಯಾಂಡೇಜ್’ ಹಾಕಿದಂತಾಗುತ್ತದೆ. ಆದರೆ, ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಗುಂಡಿಗಳ ಕುರುಹುಗಳು ಇಲ್ಲದಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಮಿಲ್ಲಿಂಗ್ ಮಷಿನ್‌ನಿಂದ ಗುಂಡಿಗಳಿರುವ ರಸ್ತೆಯ ಮೇಲ್ಪದರವನ್ನೇ ಸಂಪೂರ್ಣವಾಗಿ ಕಿತ್ತುಹಾಕಲಾಗುವುದು. ನಂತರ ಅದರ ಮೇಲೆ ಟಾರು ಹಾಕಲಾಗುವುದು.
ಇದರಿಂದ ರಸ್ತೆ ಮರುನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಲ್ಲಿಂಗ್ ಯಂತ್ರದಿಂದ ರಸ್ತೆ ದುರಸ್ತಿಗೆ ಸುಮಾರು 16 ಲಕ್ಷ ಖರ್ಚು ಆಗಲಿದೆ. ಸಾಮಾನ್ಯ ವಿಧಾನದಲ್ಲಿ ಗುಂಡಿ ಮುಚ್ಚಲು 12ರಿಂದ 14 ಲಕ್ಷ ರೂ. ತಗಲುತ್ತದೆ. ಸಂಪೂರ್ಣವಾಗಿ ರಸ್ತೆ ಪದರು ತೆಗೆದು, ನಿರ್ಮಾಣ ಮಾಡುವುದರಿಂದ ಸಮಯ ಹೆಚ್ಚು ಹಿಡಿಯುತ್ತದೆ ಎಂದೂ ಅವರು ಹೇಳಿದರು.
ಗುಂಡಿಗಳ ಸಂಖ್ಯೆ ದುಪ್ಪಟ್ಟು!
ಈ ಬಾರಿ ದಾಖಲೆ ಮತ್ತು ನಿರಂತರ ಮಳೆ ಬಿದ್ದಿದ್ದರಿಂದ ನಗರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ರಸ್ತೆ ಗುಂಡಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ ಸುಮಾರು 4 ಸಾವಿರ ಗುಂಡಿಗಳು ಬಿದ್ದಿದ್ದವು. ಆದರೆ, ಈ ಬಾರಿ 9,400 ಗುಂಡಿಗಳು ಬಿದ್ದಿವೆ. ಜತೆಗೆ 8ರಿಂದ 9 ಸಾವಿರ ಚದರ ಮೀಟರ್ ರಸ್ತೆಗಳ ಸವೆತ ಕೂಡ ಆಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
4 ಮೀಟರ್‌ಗಿಂತ ಕಡಿಮೆ ಆಳ ಇರುವ ಗುಂಡಿಗಳನ್ನು ಮಳೆಯಿಂದಾದ ರಸ್ತೆ ಸವೆತ ಎಂದು ಪರಿಗಣಿಸಲಾಗುವುದು. 4 ಮೀ.ಗಿಂತ ಹೆಚ್ಚು ಆಳ ಇದ್ದರೆ, ಅವು ರಸ್ತೆ ಗುಂಡಿಗಳು ಎನ್ನಲಾಗುತ್ತದೆ. 9,400ರಲ್ಲಿ ಈಗಾಗಲೇ 6,400 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೇಳಿದರು.