Advertisement

Belthangady: ಭರದಿಂದ ಸಾಗುತ್ತಿದೆ ಗುಂಡಿ ಮುಚ್ಚುವ ಕಾರ್ಯ

12:53 PM Sep 12, 2024 | Team Udayavani |

ಬೆಳ್ತಂಗಡಿ: ಬಹು ನಿರೀಕ್ಷಿತ ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ-73ರ ಕಾಮಗಾರಿ ಗುತ್ತಿಗೆದಾರ ಡಿ.ಪಿ.ಜೈನ್‌ ಅರ್ಧದಲ್ಲೆ ನಷ್ಟ ಅನುಭವಿಸಿ ಕಾಮಗಾರಿ ತೊರೆದಿದ್ದರಿಂದ ಇದೀಗ ಮುಗ್ರೋಡಿ ಕಂಪೆನಿಗೆ ಕಾಮಗಾರಿ ವಹಿಸಿದ ಬಳಿಕ 35 ಕಿ.ಮೀ. ಅಲ್ಲಲ್ಲಿ ಹೊಂಡಗುಂಡಿಯಾಗಿದ್ದಲ್ಲಿ ನಿರಂತರ ಕಾಮಗಾರಿ ಭರದಿಂದ ಸಾಗುತ್ತಿದೆ.

Advertisement

ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಕುರಿತು ಅನೇಕ ಬಾರಿ ಉದಯವಾಣಿ ವರದಿ ಪ್ರಕಟಿಸಿತ್ತು. ಈ ಮಧ್ಯೆ ಕೆಸರುಮಯ ರಸ್ತೆಯಲ್ಲಿ ವಾಹನ ಸವಾರರು ಪರದಾಡುವ ಸಂಪೂರ್ಣ ಚಿತ್ರಣವನ್ನೂ ಉದಯವಾಣಿ ಸುದಿನದಲ್ಲಿ ಪ್ರಕಟಿಸಿತ್ತು. ಇದಕ್ಕೂ ಮುನ್ನ ಗುತ್ತಿಗೆದಾರರ ಕೆಲಸಗಾರರಿಗೆ ವೇತನ ನೀಡದೆ ಸಮಸ್ಯೆ ಎದುರಾದ ವರದಿ ಪ್ರಕಟಗೊಂಡಿತ್ತು.

ಇದಾದ ಕೆಲವೇ ದಿನಗಳಲ್ಲಿ ನೂತನ ಗುತ್ತಿಗೆ ಕಂಪೆನಿ ಮುಗ್ರೋಡಿ ಕನ್‌ಸ್ಟ್ರಕ್ಷನ್‌ಗೆ ಕಾಮಗಾರಿ ನಡೆಸಲು ಕೇಂದ್ರದಿಂದ ಒಪ್ಪಿಗೆ ಪಡೆದು ಸಂಸದ ಬ್ರಿಜೇಶ್‌ ಚೌಟ ಹಾಗೂ ಶಾಸಕ ಹರೀಶ್‌ ಪೂಂಜ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಚಾಲನೆ ದೊರೆತಿತ್ತು. ಇದೀಗ ಕಾಮಗಾರಿ ನಡೆಸಲಾಗುತ್ತಿದ್ದರೂ ಮಳೆಯಿಂದಾಗಿ ಕೆಲವೆಡೆ ಅಡ್ಡಿ ಉಂಟಾಗಿದೆ.

ಬಿಸಿಲು ಬಂದ ತಕ್ಷಣವೇ ಡಾಮರು
ಪ್ರಸಕ್ತ ಜಲ್ಲಿ ಹುಡಿ ಸಹಿತ ಎಂ ಸ್ಯಾಂಡ್‌ ಜಲ್ಲಿಗಳಿಂದ ನಿರಂತರವಾಗಿ ಹೊಂಡ ಮುಚ್ಚುವ ಕಾರ್ಯ ನಡೆಯುತ್ತಿದೆ. ನಿರಂತರ ಮಳೆಯಿಂದ ಕಾಮಗಾರಿಗೆ ತೊಡಕಾಗಿದೆ. ಮಳೆ ಬಿಟ್ಟು ಬಿಸಿಲು ಬಂದಲ್ಲಿ ತಕ್ಷಣವೇ ಸಮತಟ್ಟು ಮಾಡಿ ಡಾಮರೀಕರಣ ನಡೆಯಲಿದೆ. ಪ್ರಸಕ್ತ ಮಳೆ ನೀರು ಸರಾಗವಾಗಿ ಸಾಗಲು ಚರಂಡಿ ದುರಸ್ತಿ ಕಾರ್ಯವೂ ನಡೆಯುತ್ತಿದೆ ಎಂದು ಕಂಪೆನಿಯವರು ತಿಳಿಸಿದ್ದಾರೆ.

ರಸ್ತೆ ಸಮತಟ್ಟು ಕಾರ್ಯ ನಿರಂತರ
ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಒಟ್ಟು 35 ಕಿ.ಮೀ. ವ್ಯಾಪ್ತಿಯ ಹೆದ್ದಾರಿಯಲ್ಲಿ ಸುಮಾರು 7 ಸ್ಥಳಗಳಲ್ಲಿ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಮೊದಲ ಹಂತದಲ್ಲಿ ಈ ಸ್ಥಳಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಗ್ರೋಡಿ ಗುತ್ತಿಗೆದಾರರಿಂದ ಬೆಳ್ತಂಗಡಿಯಿಂದ ಉಜಿರೆ ವರೆಗೆ 3 ಜೆಸಿಬಿ, 1 ಹಿಟಾಚಿ, 2 ಟಿಪ್ಪರ್‌, 1 ಗ್ರೇಡರ್‌ ಕಾಮಗಾರಿ ನಡೆಸುತ್ತಿದ್ದು, ಗುರುವಾಯನಕೆರೆಯಿಂದ ಮಡಂತ್ಯಾರು ವರೆಗೆ 1ಹಿಟಾಚಿ, 2 ಜೆಸಿಬಿ ಕಾರ್ಯನಿರ್ವಹಿಸುತ್ತಿದೆ. ಉಜಿರೆಯಿಂದ ಚಾರ್ಮಾಡಿವರೆಗೆ 3 ಜೆಸಿಬಿ, 1 ಹಿಟಾಚಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. ಒಟ್ಟು 25 ರಿಂದ 30 ಕೆಲಸಗಾರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.