Advertisement

ಕಡಬಕ್ಕೆ ಸುಸಜ್ಜಿತ ಸರಕಾರಿ ಬಸ್‌ ನಿಲ್ದಾಣ ತುರ್ತು ಅಗತ್ಯ

03:26 PM Mar 19, 2017 | Team Udayavani |

ಕಡಬ : ಉಪ್ಪಿನಂಗಡಿ ಪಟ್ಟಣ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ನಡುವೆ ಇರುವ ಕಡಬ ಪಟ್ಟಣದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ಇಲ್ಲ. ಬಸ್‌ ಗಳು ರಸ್ತೆ ಪಕ್ಕದಲ್ಲೇ ನಿಂತು ಪ್ರಯಾಣಿಕರನ್ನು ಇಳಿಸುವ ಮತ್ತು ಹತ್ತಿಕೊಳ್ಳುವ ಪ್ರಕ್ರಿಯೆಯನ್ನು ನಡೆಸುತ್ತಿವೆ. ಹಾಗಾಗಿ ರಸ್ತೆಯೇ ಬಸ್‌ ನಿಲ್ದಾಣವೆಂದು ಪರಿಗಣಿಸಲಾಗಿದೆ.

Advertisement

ಕಡಬವು ಹೋಬಳಿ ಕೇಂದ್ರವಾಗಿ ವಿಶೇಷ ತಹಶೀಲ್ದಾರ್‌ ಕಚೇರಿ ಹೊಂದಿತ್ತು. ಈಗ ತಾಲೂಕು. ಹೋಬಳಿ ಕೇಂದ್ರವಾಗಿದ್ದರಿಂದ ಸುತ್ತಲಿನ ಗ್ರಾಮಗಳ ಜನರು ಕಂದಾಯ ಇಲಾಖಾ ಕೆಲಸಗಳು ಹಾಗೂ ಇತರ ವ್ಯವಹಾರಗಳಿಗಾಗಿ ಕಡಬ ಪೇಟೆಗೇ ಬರಬೇಕು. ಇದರಿಂದ ನಿತ್ಯವೂ ಸಾವಿರಾರು ಮಂದಿಯ ಭೇಟಿ ಇದ್ದೇ ಇರುತ್ತದೆ. ದಿನಂಪ್ರತಿ ಇಲ್ಲಿನ ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕರ ಕೇಂದ್ರದಲ್ಲಿ ಸುಮಾರು 120ಕ್ಕೂ ಹೆಚ್ಚು ಬಸ್‌ ಟ್ರಿಪ್‌ಗ್ಳು ದಾಖಲಾಗುತ್ತವೆ. ಆದರೂ ಬಸ್‌ ನಿಲ್ದಾಣವನ್ನು ಕಲ್ಪಿಸದಿರುವುದು ದೊಡ್ಡ ಕೊರತೆಯಾಗಿದೆ.

ಜಮೀನು ಕಾದಿರಿಸಿದೆ
ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣಕ್ಕಾಗಿ ಜಮೀನು ಒದಗಿಸುವಂತೆ ಕೆಎಸ್‌ಆರ್‌ಟಿಸಿ ಹಲವು ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಜಮೀನು ಸಿಕ್ಕಿರಲಿಲ್ಲ. ಕಡಬದ ಕೆರೆಯ ಒಂದು ಭಾಗವನ್ನು ಬಸ್‌ ನಿಲ್ದಾಣಕ್ಕೆ ಉಪಯೋಗಿಸುವ ಪ್ರಯತ್ನವೂ ಫಲ ನೀಡಿರಲಿಲ್ಲ. ಇದೀಗ ಕೊನೆಗೂ ಅಂಬೇಡ್ಕರ್‌ ಭವನದ ಬಳಿ 1.73 ಎಕ್ರೆ ಜಮೀನನ್ನು ಕಂದಾಯ ಇಲಾಖೆಯವರು ಕಾದಿರಿಸಿದ್ದಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಜಾಗವನ್ನು ಪರಿಶೀಲಿಸಿದ್ದಾರೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಕೆಲವು ವರ್ಷಗಳಲ್ಲಿ ಸುಸಜ್ಜಿತ ಸರಕಾರಿ ಬಸ್‌ ನಿಲ್ದಾಣ ನಿರ್ಮಾಣವಾಗಲಿದೆ. ಆದರೆ ಅದು ಸಾಧ್ಯವಾಗುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯನ್ನು ಅವಲಂಬಿಸಿದ್ದು ಎನ್ನುತ್ತಾರೆ ನಾಗರಿಕರು.

ಪರಿಶೀಲಿಸ ಲಾಗಿದೆ
ಕಾದಿರಿಸಿದ ಜಮೀನು ಬಸ್‌ ನಿಲ್ದಾಣಕ್ಕೆ ಸೂಕ್ತವೇ ಎಂದು ನಿಗಮದ ಜಿಲ್ಲಾ ಮಟ್ಟದ ಅಧಿಕಾರಿಯವರು ಪರಿಶೀಲಿಸುವರು. ಬಳಿಕ ಜಮೀನು ನಿಗಮಕ್ಕೆ ವರ್ಗಾವಣೆಯಾದ ಕೂಡಲೇ ಮುಂದಿನ ಕಾರ್ಯ ಆರಂಭವಾಗಲಿದೆ. 
– ದಿವಾಕರ ಎಸ್‌.ಯರಗೊಪ್ಪ, ಎಇಇ, ಕೆಎಸ್‌ಆರ್‌ಟಿಸಿ, 
ಪುತ್ತೂರು ವಿಭಾಗ

– ನಾಗರಾಜ್‌ ಎನ್‌.ಕೆ. ಕಡಬ

Advertisement
Advertisement

Udayavani is now on Telegram. Click here to join our channel and stay updated with the latest news.

Next