Advertisement

ಸುಡು ಬಿಸಿಲು: ತೆನೆ ಕಟ್ಟಿದ ಪೈರುಗಳು ಕರಟಿ ಕೃಷಿಕರು ಕಂಗಾಲು  ​​​​​​

06:00 AM Sep 27, 2018 | Team Udayavani |

ಉಡುಪಿ: ಮಳೆ ಕೊರತೆ ಜಿಲ್ಲೆಯ ಭತ್ತ ಕೃಷಿಕರನ್ನು ಕಂಗೆಡಿಸಿದೆ. ಮಳೆ ನೀರನ್ನೇ ಆಶ್ರಯಿಸಿರುವ ಗದ್ದೆಗಳ ಪೈರುಗಳು ಒಣಗುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಮಳೆಯಾಗದೆ 20 ದಿನಗಳೇ ಕಳೆಯುತ್ತಿದ್ದು ರೈತರಲ್ಲಿ ನಿರಾಶೆ ಮತ್ತು ಆತಂಕದ ಕಾರ್ಮೋಡ ಕವಿದಿದೆ. 

Advertisement

ಈ ಬಾರಿ ಮಳೆ ಆರಂಭದಲ್ಲೇ ಒಂದಷ್ಟು ಭರವಸೆ ಮೂಡಿಸಿದ್ದರಿಂದ ಬೆಟ್ಟು ಗದ್ದೆಗಳಲ್ಲೂ ಕೆಲ ರೈತರು ಭತ್ತ ಬೆಳೆಯುವ ಸಾಹಸಕ್ಕೆ ಮುಂದಾಗಿದ್ದರು. ಈಗ ನೆಲ ಬಿರಿದು ಪೈರುಗಳು ಕೆಂಪು, ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಇನ್ನು ಕನಿಷ್ಠ 20 ದಿನಗಳ ಕಾಲವಾದರೂ ಮಳೆ ಬರಬೇಕಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ಶೇ.25-30ರಷ್ಟು ಬೆಳೆ ಮಾತ್ರ ಬರಬಹುದು ಎನ್ನುತ್ತಾರೆ ರೈತರು.

ಬೆಂಕಿರೋಗ, ಹುಳಬಾಧೆ
ಬೆಂಕಿರೋಗ ಮತ್ತು ಹುಳುಬಾಧೆ ಕೆಲವು ಪ್ರದೇಶಗಳಲ್ಲಿ ಕಂಡು ಬಂದಿದೆ. ಆದರೆ ಇದು ವ್ಯಾಪಕವಾಗಿಲ್ಲ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬೆಂಕಿ ರೋಗಕ್ಕಿಂತ ಮಳೆ ಕೊರತೆಯೇ ಸದ್ಯದ ದೊಡ್ಡ ಸಮಸ್ಯೆ ಎಂಬುದು ರೈತರ ಕೂಗು. ಬೆಳೆದು ನಿಂತ ಪೈರಿನಲ್ಲಿ ತೆನೆ ಬಳಿಯಬೇಕಾದ ಹೊತ್ತಲ್ಲಿ ಬಂದಿರುವ ನಿರಂತರ ಸುಡುಬಿಸಿಲಿನಿಂದಾಗಿ ರೈತರ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ.

ಪಂಪ್‌ ಲೋ ವೋಲ್ಟೆàಜ್‌
ಭತ್ತ ಸೇರಿದಂತೆ ಎಲ್ಲಾ ಕೃಷಿಗೂ ಈಗಲೇ  ಪಂಪ್‌ ನೀರು ಹಾಯಿಸುವುದು ಅನಿವಾರ್ಯವಾಗಿದೆ. ಹಾಗಾಗಿ ಲೋ ವೋಲ್ಟೆàಜ್‌ ಆಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹೆಚುr ಟಿ.ಸಿಗಳನ್ನು ಹಾಕಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಒಮ್ಮೆ ಗದ್ದೆ ಒಡೆದು ಹೋದರೆ ಮತ್ತೆ ನೀರು ನಿಲ್ಲುವುದಿಲ್ಲ. ಹಾಗಾಗಿ ಈಗ ನಿರಂತರವಾಗಿ ಪಂಪ್‌ ನೀರು ಹಾಯಿಸುವುದು ಅನಿವಾರ್ಯವಾಗಿದೆ.  

40 ಮಿ.ಮೀ ಮಾತ್ರ ಮಳೆ 
ಜಿಲ್ಲೆಯಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ವಾಡಿಕೆ ಯಂತೆ 346 ಮಿ.ಮೀ ಮಳೆಯಾಗಬೇಕಿತ್ತು. ಆದರೆ  ಈ ವರ್ಷ ಸೆಪ್ಟೆಂಬರ್‌ 25ರ ವರೆಗೆ ಸುರಿದಿರುವುದು ಕೇವಲ 40.4 ಮಿ.ಮೀ ಮಾತ್ರ. ಈ ಅವಧಿಯಲ್ಲಿ ಕುಂದಾಪುರ ತಾಲೂಕಿನಲ್ಲಿ 54.4 ಮಿ.ಮೀ, ಕಾರ್ಕಳದಲ್ಲಿ 38.5 ಮಿ.ಮೀ ಮಳೆಯಾಗಿದೆ.

Advertisement

ವಾರದಲ್ಲಿ ಸಮೀಕ್ಷೆ 
ಜಿಲ್ಲೆಯಲ್ಲಿ ಮೇ ಅಂತ್ಯ ಮತ್ತು ಜೂನ್‌ ಆರಂಭದಲ್ಲಿ ನಾಟಿ ಮಾಡಿದವರ ಪೈರು ಕೊಯ್ಲಿಗೆ ಬಂದಿದೆ. ಆದರೆ ಅನಂತರ ನಾಟಿ ಮಾಡಿದ ಗದ್ದೆಗಳಿಗೆ ನೀರಿನ ಅಭಾವ ಉಂಟಾಗಿದೆ. ಇನ್ನೂ ಒಂದು ವಾರ ಮಳೆ ಬಾರದಿದ್ದರೆ ನಷ್ಟ ಉಂಟಾಗಲಿದೆ. ವಾರದ ಅನಂತರವೂ ಇದೇ ಸ್ಥಿತಿ ಉಂಟಾದರೆ ಬೆಳೆ ಹಾನಿಯ ಸಮೀಕ್ಷೆ ನಡೆಸಿ ಸರಕಾರಕ್ಕೆ ಮಾಹಿತಿ ನೀಡಲಾಗುವುದು. ಬೆಳೆ ಪರಿಹಾರಕ್ಕೆ ಬರಪೀಡಿತ ತಾಲೂಕು ಎಂದು ಘೋಷಣೆಯಾಗಬೇಕಾಗುತ್ತದೆ.
– ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ 

ನೀರಿನ ಒರತೆ ಹೆಚ್ಚಿಸಲು ಕ್ರಮ ಅಗತ್ಯ
ವಿವಿಧೆಡೆ ವೆಂಟೆಡ್‌ ಡ್ಯಾಮ್‌ಗಳನ್ನು ರಚಿಸಿ ಭೂಮಿಯಲ್ಲಿ ನೀರಿನ ಒರತೆ ಹೆಚ್ಚುವಂತೆ ನೋಡಬೇಕು. ಪಾಳುಬಿದ್ದ ಕೆರೆ, ಮದಗಗಳ ಹೂಳೆತ್ತಿ ಜಲಮೂಲಗಳನ್ನು ರಕ್ಷಿಸಬೇಕು. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗೆ ಹೆಚ್ಚಿನ ಅವಕಾಶವಿರುವುದರಿಂದ ಇದರ ಬಗ್ಗೆ ಜನಪ್ರತಿನಿಧಿಗಳು ರೂಪುರೇಷೆ ಸಿದ್ಧಪಡಿಸಬೇಕು.  
– ಯಡ್ತಾಡಿ ಸತೀಶಕುಮಾರ್‌ ಶೆಟ್ಟಿ, 
ಪ್ರಗತಿಪರ ಕೃಷಿಕರು, ಗ್ರಾ.ಪಂ. ಮಾಜಿ ಅಧ್ಯಕ್ಷರು 

10 ಸಾವಿರ ರೂ. ಪರಿಹಾರ ಬೇಕು
ಒಂದು ಎಕರೆ ಭತ್ತ ಕೃಷಿಗೆ 10,000 ರೂ.ಗಳಿಗಿಂತ ಹೆಚ್ಚು ವೆಚ್ಚವಾಗುತ್ತದೆ. ಹಾಗಾಗಿ ಒಂದು ಎಕರೆಗೆ ಕನಿಷ್ಠ 10ಸಾವಿರ  ರೂ. ಪರಿಹಾರ ನೀಡಬೇಕು. ಭತ್ತವನ್ನು ನಂಬಿಕೊಂಡವರು ಕಂಗೆಟ್ಟಿದ್ದೇವೆ. ಇದು ತೆನೆ ಕಟ್ಟುವ ಹೊತ್ತು. ಆದರೆ ಇದೇ ವೇಳೆ ಮಳೆ ಕೈಕೊಟ್ಟಿದೆ. ಪಂಪ್‌ ನೀರು ಇಲ್ಲದವರಿಗೆ ದಿಕ್ಕೇ ತೋಚದಂತಾಗಿದೆ. ಪಂಪ್‌ ನೀರು ಇದ್ದರೂ ಅದು ಸಾಲುತ್ತಿಲ್ಲ. ಭತ್ತದ ಜತೆಗೆ ಅಡಿಕೆ, ತೆಂಗು ತೋಟಗಳಿಗೂ ಈಗಲೇ ಪಂಪ್‌ ನೀರು ಹಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
– ರಾಮಕೃಷ್ಣ ಶರ್ಮ, ಅಧ್ಯಕ್ಷರು
ಉಡುಪಿ ಜಿಲ್ಲಾ ಕೃಷಿಕ ಸಂಘ 

ಬೆಳೆವಿಮೆ ಎಲ್ಲರಿಗೂ ಅನ್ವಯವಾಗಲಿ
ಸದ್ಯ ಸಾಲ ಮಾಡುವವರಿಗೆ ಮಾತ್ರ ಬೆಳೆವಿಮೆ ಕಡ್ಡಾಯ ಮಾಡಲಾಗಿದೆ. ಇತರ ರೈತರಿಗೆ ಕಡ್ಡಾಯವಲ್ಲ. ಇದನ್ನು ಎಲ್ಲಾ ರೈತರಿಗೂ ಕಡ್ಡಾಯ ಮಾಡಬೇಕು. ಪ್ರೀಮಿಯಂ ಮೊತ್ತ ಹೆಚ್ಚಿರುವುದರಿಂದ ಕೆಲವು ರೈತರು ಬೆಳೆವಿಮೆ ಮಾಡಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಪ್ರೀಮಿಯಂನ ಶೇ.50ರಷ್ಟು ಮೊತ್ತವನ್ನು ಸರಕಾರವೇ ಭರಿಸಬೇಕು. 
– ಕುದಿ ಶ್ರೀನಿವಾಸ ಭಟ್‌
ಪ್ರಗತಿಪರ ಕೃಷಿಕರು

– ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next