Advertisement

ಸಾಧನೆ ಪಟ್ಟಿ ಜತೆ ವೈಫ‌ಲ್ಯದ ಹೊರೆ

11:47 AM Sep 23, 2017 | Team Udayavani |

ಬೆಂಗಳೂರು: ಪೌರ ಕಾರ್ಮಿಕರಿಗೆ ಬಿಸಿಯೂಟ ವ್ಯವಸ್ಥೆ ಹಾಗೂ ಬಡವರಿಗೆ ಇಂದಿರಾ ಕ್ಯಾಂಟೀನ್‌ ಆರಂಭ, ಕಾಂಕ್ರೀಟ್‌ ರಸ್ತೆ ನಿರ್ಮಾಣದ ಸಾಧನೆಯ “ಪಟ್ಟಿ’ ಜತೆಗೆ ಮಳೆ ಪ್ರವಾಹದ ಅನಾಹುತ ಹಾಗೂ ರಸ್ತೆ ಗುಂಡಿಗಳ ವೈಫ‌ಲ್ಯಗಳ “ಹೊರೆ’, ಮಿತ್ರ ಪಕ್ಷದ ಅಪಸ್ವರದ ನಡುವೆ ಮೇಯರ್‌ ಜಿ.ಪದ್ಮಾವತಿ ಅವರದು ವರ್ಷದ ಆಡಳಿತಕ್ಕೆ ತೆರೆ ಬೀಳುತ್ತಿದೆ.

Advertisement

ರಾಜ್ಯ ಸರ್ಕಾರದ ಅನುದಾನ ಪಡೆದು ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕಾಮಗಾರಿ ಕೈಗೊಂಡರೂ ನಗರದಲ್ಲಿ ಇಪ್ಪತ್ತು ದಿನ ನಿರಂತರ ಸುರಿದ ದಾಖಲೆಯ ಮಳೆಯಿಂದ ಉಂಟಾದ ಅನಾಹುತಕ್ಕೆ ಎಲ್ಲವೂ ಕೊಚ್ಚಿ ಹೋಗಿ ವೈಫ‌ಲ್ಯಗಳು ಎತ್ತಿ ತೋರುವಂತಾಯಿತು. ಅಧಿಕಾರದಲ್ಲಿ ಜತೆಯಾದ ಮಿತ್ರ ಪಕ್ಷವೇ ಅನುದಾನ ತಾರತಮ್ಯ, ಸ್ಥಾನಮಾನದ ವಿಚಾರದಲ್ಲಿ “ಕ್ಯಾತೆ’ ತೆಗೆದು ಅಭಿವೃದ್ಧಿ ಬಗ್ಗೆ ಶ್ವೇತಪತ್ರ ಹೊರಡಿಸಲು ಆಗ್ರಹಿಸಿ ಧರಣಿ ನಡೆಸಿದ್ದು ಸೋಜಿಗವೇ ಸರಿ.

ಪದ್ಮಾವತಿ ಅವರ ಅವಧಿಯಲ್ಲಿ ಮಹತ್ವದ ಯೋಜನೆ ಜಾರಿಗೊಳಿಸಿದರೂ ಬಜೆಟ್‌ನಲ್ಲಿ ನೀಡಿದ್ದ ಭರವಸೆಗಳು ಈಡೇರಲಿಲ್ಲ. ಜತೆಗೆ ಆಸ್ತಿ ತೆರಿಗೆ ವಂಚಕರ ಪತ್ತೆ ಹಚ್ಚಿ ಅವರಿಂದ ನಷ್ಟ ವಸೂಲು ಮಾಡುವ ದಿಟ್ಟತನ ತೋರದಿರುವುದು ದೊಡ್ಡ ವೈಫ‌ಲ್ಯ. ಅಡಮಾನ ಇಟ್ಟ ಮಲ್ಲೇಶ್ವರಂ ಮಾರುಕಟ್ಟೆ ವಾಪಸ್‌ ಪಡೆದಿದ್ದು ಹೊರತುಪಡಿಸಿದರೆ ಪಾಲಿಕೆಯ ಒಟ್ಟಾರೆ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಒಂದು ವರ್ಷದಲ್ಲಿ ಹೇಳಿಕೊಳ್ಳುವಂತಹ ಸಾಧನೆಯೇನೂ ಆಗಲಿಲ್ಲ. ರಾಜಧಾನಿಯನ್ನು ಬಾಧಿಸುತ್ತಿರುವ ಕಸದ ಸಮಸ್ಯೆಗೂ ಶಾಶ್ವತ ಮುಕ್ತಿಕಾಣಿಸುವ ಕೆಲಸವೂ ಆಗಲಿಲ್ಲ.

ಕ್ಯಾಂಟೀನ್‌-ಕಾಮಗಾರಿಗಳೇ ಸಾಧನೆ: ಪದ್ಮಾವತಿ ಆವರ ಅವಧಿಯಲ್ಲಿ ಪೌರಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ, ರಿಯಾಯಿತಿ ದರದಲ್ಲಿ ಬಡವರಿಗೆ ಊಟ ಒದಗಿಸುವ ಇಂದಿರಾ ಕ್ಯಾಂಟೀನ್‌  ಆರಂಭ, ಕಾಂಕ್ರೀಟ್‌ ರಸ್ತೆಗಳ ನಿರ್ಮಾಣ ಸಾಧನೆಗಳ ಪಟ್ಟಿಗೆ ಸೇರಿವೆ.

 ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಬಿಸಿಯೂಟ ನೀಡುವ ವ್ಯವಸ್ಥೆಯನ್ನು ದೇಶದಲ್ಲಿಯೇ ಮೊದಲ ಬಾರಿಗೆ ಬಿಬಿಎಂಪಿಯಲ್ಲಿ ಜಾರಿ ಎಂಬ ಖ್ಯಾತಿ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ ಯೋಜನೆಯ ಮೊದಲ ಹಂತದ 101 ಕ್ಯಾಂಟೀನ್‌ಗಳು ಪದ್ಮಾವತಿ ಅವರ ಅವಧಿಯಲ್ಲಿ ಉದ್ಘಾಟನೆಯಾಗಿವೆ. 

Advertisement

ಕಾಂಕ್ರೀಟ್‌ ರಸ್ತೆ, ಮೇಲ್ಸೇತುವೆ, ಕೆಳ ಸೇತುವೆ, ಸಿಗ್ನಲ್‌ ಫ್ರೀ ಕಾರಿಡಾರ್‌ ಸೇರಿದಂತೆ ನಗರದಲ್ಲಿ ಪಾಲಿಕೆಯಿಂದ ಕೈಗೆತ್ತಿಕೊಂಡು ನೆನೆಗುದಿಗೆ ಬಿದ್ದ ಕಾಮಗಾರಿಗಳ ಪರಿಶೀಲನೆ ಮೂಲಕ ಕಾಮಗಾರಿಗೆ ವೇಗ. ಮಾಗಡಿ ರಸ್ತೆ ಅಂಡರ್‌ ಪಾಸ್‌, ರಾಜ್‌ಕುಮಾರ್‌ ರಸ್ತೆಯ ಅಂಡರ್‌ ಪಾಸ್‌, ಪದ್ಮನಾಭನಗರ ಕ್ಷೇತ್ರದ ಚೆನ್ನಮ್ಮ ವೃತ್ತ ಹಾಗೂ ಹೊಸಕೆರೆಹಳ್ಳಿಯ ಕೆಇಬಿ ಜಂಕ್ಷನ್‌ ಮೇಲ್ಸೇತುವೆ ಸಾರ್ವಜನಿಕ ಸೇವೆಗೆ.

ಮಳೆ ಅನಾಹುತ-ವೈಫ‌ಲ್ಯಗಳ ಮೇಲಾಟ: ಮಳೆ ಅನಾಹುತ ತಡೆಯುವ ಶಾಶ್ವತ ವ್ಯವಸ್ಥೆ,  ಜನತೆಗೆ ಸಮಸ್ಯೆ ಸ್ವೀಕರಿಸಲು ಅತ್ಯಾಧುನಿಕ ಕಂಟ್ರೋಲ್‌ ರೂಂ ಆರಂಭ, ತ್ಯಾಜ್ಯ ವಿಂಗಡಣೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮಾರ್ಷಲ್‌ಗ‌ಳ ನೇಮಕ, ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ಸಂಸ್ಕರಣೆಗೆ ಕ್ರಮ ಹಾಗೂ ರಾಜಕಾಲುವೆ ಒತ್ತುವರಿ ತೆರವು ಭರವಸೆಗಳು  ಈಡೇರಲೇ ಇಲ್ಲ.

ನಾಲ್ಕು ಬಾರಿ ಪಾಲಿಕೆ ಸದಸ್ಯೆಯಾದ ಅನುಭವ ಇದ್ದರೂ ಮಾಸಿಕ ಸಭೆಗಳನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗಲಿಲ್ಲ. ಪ್ರತಿಪಕ್ಷದವರ ಆರೋಪ, ಟೀಕೆ ಎದುರಾದಾಗ ಸಭೆ ಮುಂದೂಡಿದರು. ಬಿಬಿಎಂಪಿಯಲ್ಲಿ ಜಾಹೀರಾತು, ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್ಸಿ), ಕಸದ ಮಾಫಿಯಾಗಳ ನಿಯಂತ್ರಿಸುವಂತಹ ಯಾವುದೇ ಪ್ರಯತ್ನ ಒಂದು ವರ್ಷದಲ್ಲಿ ಆಗಲಿಲ್ಲ. 

ಕಸದ ಗುತ್ತಿಗೆದಾರರು ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಬೆದರಿಕೆ ಹಾಕಿ ಕೆಲಸ ಸ್ಥಗಿತಗೊಳಿಸಿದ ಘಟನೆಗಳು ನಡೆದವು. ತಿಂಗಳು ತಡವಾಗಿ ಮಳೆ ಬಂದರೂ ಮುಂಜಾಗ್ರತೆ ವಹಿಸದ ಕಾರಣ ಪ್ರವಾಹ ಅನಾಹುತ ಸೃಷ್ಟಿಸಿತು. ಇದರ ತಡೆಗೆ ವಿಫ‌ಲವಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. 

ರಾಜ್ಯ ಸರ್ಕಾರ ಹಾಗೂ ಪಕ್ಷ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಕಳೆದೊಂದು ವರ್ಷದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ ತೃಪ್ತಿಯಿದೆ. ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ವಿರೋಧಿಸುವ ಮೂಲಕ ಪ್ರತಿಪಕ್ಷದವರು ಸಭೆ ಹಾಳು ಮಾಡಿದ್ದು ಬೇಸರ ತಂದಿದೆ. ಸರ್ಕಾರ ಹಾಗೂ ಪಕ್ಷ ಮುಂದೆ ನಿಯೋಜಿಸುವ ಜವಾಬ್ದಾರಿ ನಿಭಾಯಿಸಲು ಸಿದ್ಧವಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜಾಜಿನಗರದಿಂದ ಸ್ಪರ್ಧಿಸುವ ಆಕಾಂಕ್ಷಿಯಾಗಿದ್ದೇನೆ. 
-ಜಿ.ಪದ್ಮಾವತಿ, ಮೇಯರ್‌

ಕಳೆದೊಂದು ವರ್ಷದಲ್ಲಿ ಬಿಬಿಎಂಪಿಯಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ವಿರುದ್ಧವಾಗಿ ಆಡಳಿತ ನಡೆಸಲಾಗುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಪ್ರತಿ ತಿಂಗಳು ಕಸದ ಸಮಸ್ಯೆ ತಲೆದೂರುತ್ತಿದೆ. ಮಳೆಯಿಂದ ಹಲವಾರು ಪ್ರದೇಶಗಳು ಜಲಾವೃತಗೊಂಡರೂ ಪರಿಹಾರ ನೀಡಿಲ್ಲ. ರಸ್ತೆಗಳು ಗುಂಡಿಮಯವಾಗಿವೆ. ತಜ್ಞರ ಸಮಿತಿ ರಚಿಸಿ ಸ್ಥಾಯಿ ಸಮಿತಿಗಳ ಅಧಿಕಾರ ಕಿತ್ತುಕೊಂಡರೂ, ಅವುಗಳ ಅಧಿಕಾರ ಉಳಿಸುವ ಪ್ರಯತ್ನ ಮೇಯರ್‌ ಪದ್ಮಾವತಿಯವರು  ಮಾಡಲಿಲ್ಲ. 
-ಪದ್ಮನಾಭರೆಡ್ಡಿ, ವಿಪಕ್ಷ ನಾಯಕ

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next