Advertisement

ಕಟ್ಟಡ ಮಂಜೂರಾಗಿ ವರ್ಷವೇ ಕಳೆದರೂ ನಿರ್ಮಾಣವಿಲ್ಲ

11:05 AM Apr 02, 2018 | Team Udayavani |

ಪುತ್ತೂರು: ಪುತ್ತೂರಿಗೆ ಮಹಿಳಾ ಠಾಣೆ ಮಂಜೂರುಗೊಂಡು ವರ್ಷ ಪೂರೈಸಿದೆ. ಆದರೆ ಮಹಿಳಾ ಠಾಣೆಗೆ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಣೆಯ ಭಾಗ್ಯ ಇನ್ನೂ ಲಭಿಸಿಲ್ಲ. ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳನ್ನು ಒಳಗೊಂಡು ಪುತ್ತೂರು ವಿಭಾಗ ಕಾರ್ಯವ್ಯಾಪ್ತಿಯನ್ನು ಹೊಂದಿರುವ ದ.ಕ. ಜಿಲ್ಲೆಯ 2ನೇ ಮಹಿಳಾ ಪೊಲೀಸ್‌ ಠಾಣೆಯು ಪುತ್ತೂರಿಗೆ ಮಂಜೂರುಗೊಂಡು 2017ರ ಮಾ. 11ರಂದು ಸಂಚಾರ ಠಾಣೆ ಯ ಹೊಸ ಕಟ್ಟಡದಲ್ಲಿ ತಾತ್ಕಾಲಿಕ ಉದ್ಘಾಟನೆಗೊಂಡಿತ್ತು.

Advertisement

ಶಾಸಕರ ಸಹಿತ ಭಾಗಶಃ ಸ್ಥಳೀಯ ಸಂಸ್ಥೆಗಳ ಪ್ರಮುಖ ಸ್ಥಾನಗಳಲ್ಲಿ ಮಹಿಳಾ ಪಾರಮ್ಯ ಮೆರೆದಿರುವ ಪುತ್ತೂರಿಗೆ ಮಹಿಳಾ ಠಾಣೆಯ ಮಂಜೂರಾತಿ ಮತ್ತೂಂದು ಗರಿಯನ್ನು ಮೂಡಿಸಿತ್ತು. ಮಹಿಳಾ ಠಾಣೆಯ ಮಂಜೂರಾತಿ ನೆಲೆಯಲ್ಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಗೃಹ ಸಚಿವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

ಸ್ವಂತ ಕಟ್ಟಡಕ್ಕೆ 20 ಲಕ್ಷ ರೂ.
ಅನಂತರದಲ್ಲಿ ಮಹಿಳಾ ಠಾಣೆಗೆ ಸ್ವಂತ ಕಟ್ಟಡವಾಗಬೇಕೆಂಬ ನಿಟ್ಟಿನಲ್ಲಿ ಆರಂಭಿಸಲಾದ ಪ್ರಯತ್ನವೂ ಸಾಕಾರಗೊಂಡು ಸರಕಾರ ಗೃಹ ಇಲಾಖೆಯ ಮೂಲಕ 20 ಲಕ್ಷ ರೂ. ಮಂಜೂರುಗೊಳಿಸಿತ್ತು. ಈ ಅನುದಾನದಲ್ಲಿ ಈ ಹಿಂದೆ ಸಂಚಾರ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದ ಹಳೆಯ ಪೊಲೀಸ್‌ ಸ್ಟೇಷನ್‌ ಕಟ್ಟಡವನ್ನು ಅಭಿವೃದ್ಧಿಪಡಿಸಿ ಅಲ್ಲಿಗೆ ಮಹಿಳಾ ಠಾಣೆಯನ್ನು ಸ್ಥಳಾಂತರಿಸುವ ಯೋಜನೆ ಹಾಕಿಕೊಂಡಿದ್ದರೂ ಇನ್ನೂ ಕಾರ್ಯಗತಗೊಂಡಿಲ್ಲ.

ನಿರ್ವಹಣೆಯಿಲ್ಲದೆ ಅನಾಥ
ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುತ್ತು ಬೆಳೆದ ಕೆರೆಯ ಬಳಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಹಲವು ದಶಕಗಳ ಇತಿಹಾಸ ಹೊಂದಿರುವ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರ ಪೊಲೀಸ್‌ ಠಾಣೆ 2015ರ ಸೆ. 7ರಂದು ಪಕ್ಕದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಎರಡೂವರೆ ವರ್ಷಗಳಿಂದ ನಿರ್ವಹಣೆಯಿಲ್ಲದೆ ಕಟ್ಟಡ ಶಿಥಿಲಗೊಳ್ಳುತ್ತಿದೆ.

2010ರಲ್ಲಿ ಪುತ್ತೂರಿಗೆ ಸಂಚಾರ ಪೊಲೀಸ್‌ ಠಾಣೆ ಮಂಜೂರಾದಾಗ ಈ ಕಟ್ಟಡವನ್ನು ಸಂಚಾರ ಠಾಣೆಯನ್ನಾಗಿಸಲಾಗಿತ್ತು. ಅದಕ್ಕೂ ಮೊದಲು ಹಲವು ವರ್ಷಗಳಿಂದ ಪುತ್ತೂರು ಪೊಲೀಸ್‌ ಠಾಣೆ ಕಾರ್ಯ ನಿರ್ವಹಿಸುತ್ತಿತ್ತು. ಹೀಗೆ ಪುತ್ತೂರಿನ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಹೊಸದಾಗಿ ಆರಂಭಗೊಳ್ಳುವ ವ್ಯವಸ್ಥೆಗಳು ಇದೇ ಕಟ್ಟಡದಲ್ಲಿ ಆರಂಭಗೊಳ್ಳುವುದು ವಿಶೇಷ.

Advertisement

ಪ್ರಸ್ತುತ ಮಹಿಳಾ ಠಾಣೆಗೆ ಸಂಬಂಧಪಟ್ಟ ಪಿಎಸ್‌ಐ, ಎಎಸ್‌ಐ ಹಾಗೂ ಸುಮಾರು 7 ಸಿಬಂದಿ ಸಂಚಾರ ಪೊಲೀಸ್‌ ಠಾಣೆಯ ಕಟ್ಟಡದಲ್ಲಿ ವಿಭಾಗ ಮಾಡಿಕೊಂಡು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಮೂರು ತಾ| ಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಮಹಿಳಾ ಠಾಣೆಯ ಸಮರ್ಪಕ ಕರ್ತವ್ಯ ನಿರ್ವಹಣೆಯ ಭಾಗವಾಗಿ ಪ್ರತ್ಯೇಕ ವ್ಯವಸ್ಥೆಯ ಅನಿವಾರ್ಯತೆಯೂ ಇವರಿಗಿದೆ.

ಪುನಶ್ಚೇತನ ಯಾವಾಗ?
ಮಹಿಳಾ ಠಾಣೆಯನ್ನು ಈ ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸುವುದಕ್ಕೆ ಮೊದಲು ಅದನ್ನು 20 ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರಿಂದ ಸೂಚನೆ ನೀಡಲಾಗಿದೆ. ಆದರೆ ಇನ್ನೂ ಅಭಿವೃದ್ಧಿ ಕಾರ್ಯ ಆರಂಭಗೊಂಡಿಲ್ಲ. ಹಾಲಿ ಭೂತ ಬಂಗಲೆಯಂತಿರುವ ಹಳೆಯ ಪೊಲೀಸ್‌ ಸ್ಟೇಷನ್‌ ಕಟ್ಟಡದ ನಿರ್ವಹಣೆ ಮಾಡುತ್ತಿಲ್ಲವಾದ್ದರಿಂದ ಇನ್ನಷ್ಟು ಶಿಥಿಲಿಗೊಳ್ಳುವ ಸಾಧ್ಯತೆಯೂ ಇದೆ.

ಶೀಘ್ರ ಆರಂಭ
ಮಹಿಳಾ ಠಾಣೆಗೆ ಸಂಬಂಧಿಸಿದಂತೆ ಗುರುತಿಸಲಾದ ಹಳೆಯ ಪೊಲೀಸ್‌ ಸ್ಟೇಷನ್‌ ಕಟ್ಟಡವನ್ನು ಪುನಶ್ಚೇತನಗೊಳಿಸಲು 20 ಲಕ್ಷ ರೂ. ಮಂಜೂರಾಗಿದ್ದು, ಟೆಂಡರ್‌ ಪ್ರಕ್ರಿಯೆ ಆಗಿರುವ ಕುರಿತು ಮೇಲಾಧಿಕಾರಿಗಳಿಂದ ಮಾಹಿತಿ ಬಂದಿದೆ. ಶೀಘ್ರದಲ್ಲಿ ಕಟ್ಟಡ ಅಭಿವೃದ್ಧಿಗೊಂಡು ಮಹಿಳಾ ಠಾಣೆ ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ.
– ಸುರೇಖಾ
ಸಬ್‌ ಇನ್‌ಸ್ಪೆಕ್ಟರ್‌, ಮಹಿಳಾ ಪೊಲೀಸ್‌ ಠಾಣೆ, ಪುತ್ತೂರು

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next