Advertisement
ಈಗಾಗಲೇ ಕಟ್ಟಡದ ನಕ್ಷೆ ಪಡೆಯುವ ಪ್ರಕ್ರಿಯೆಯನ್ನು ಆನ್‌ಲೈನ್ ವ್ಯವಸ್ಥೆಗೆ ಒಳಪಡಿಸಿರುವ ಬಿಬಿಎಂಪಿ, ಇದೀಗ ಕಟ್ಟಡದ ಖಾತಾ ಪಡೆಯುವಿಕೆಯನ್ನೂ ಆನ್‌ಲೈನ್ ವ್ಯವಸ್ತೆ ವ್ಯಾಪ್ತಿಗೆ ತರಲು ಮುಂದಾಗಿದೆ. ಜನರು ಅನಗತ್ಯವಾಗಿ ಬಿಬಿಎಂಪಿ ಕಚೇರಿಗಳಿಗೆ ಅಲೆಯುವುದು, ಅಧಿಕಾರಿಗಳಿಗೆ ಲಂಚ ನೀಡುವುದನ್ನು ತಪ್ಪಿಸುವ ಸದುದ್ದೇಶದೊಂದಿಗೆ ಖಾತಾ ಸೇವೆಗಳನ್ನು ಸಂಪೂರ್ಣ ಆನ್‌ಲೈನ್‌ಗೊಳಿಸಲು ಪಾಲಿಕೆ ಸಿದ್ಧತೆ ನಡೆಸಿದೆ.
Related Articles
Advertisement
ಖಾತಾ ವಿಭಜನೆ: ಬಿಡಿಎ, ಕರ್ನಾಟಕ ಗೃಹ ಮಂಡಳಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ, ರಾಜೀವ್ ಗಾಂಧಿ ಗ್ರಾಮೀಣ ವಸತಿ ಸಂಸ್ಥೆ, ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿ ಮಂಜೂರು ಮಾಡಿದ ಹಾಗೂ ಕಂದಾಯ ಪಾಕೆಟ್ಸ್, ಅನುಮೋದಿತ ಬಡಾವಣೆ (ನಿವೇಶನ), ಅನುಮೋದಿತ ಕಟ್ಟಡ (ಅಪಾರ್ಟ್‌ಮೆಂಟ್) ಮತ್ತು ಗ್ರಾಮಠಾಣಾದಲ್ಲಿರುವ ಆಸ್ತಿಗಳಿಗೆ ಖಾತಾ ವಿಭಜನೆ ಮಾಡಿಕೊಡಲಾಗುತ್ತದೆ.
ಹೊಸ ಖಾತಾ ನೋಂದಣಿ: ಬಿಡಿಎ, ಕರ್ನಾಟಕ ಗೃಹ ಮಂಡಳಿ ಮತ್ತು ಇನ್ನಿತರ ಸರ್ಕಾರಿ ಪ್ರಾಧಿಕಾರವು ಹಂಚಿಕೆ ಮಾಡಿದ (ಗ್ರಾಮ ಠಾಣಾ ಹೊರತುಪಡಿಸಿ), ಬಿಡಿಎ ಅನುಮೋದಿತ ಬಡಾವಣೆ ಮತ್ತು ಬಿಡಿಎ ರೀ ಕನ್ವೇಡ್ ಬಡಾವಣೆಯಲ್ಲಿನ ಆಸ್ತಿಗಳಿಗೆ ಖಾತಾ ನೋಂದಣಿ ಮಾಡಲಾಗುತ್ತದೆ.
30 ದಿನಗಳಲ್ಲಿ ಖಾತಾ ಕೈಗೆ: ಖಾತಾ ಸೇವೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರಿಗೆ ಕಾಲಮಿತಿಯೊಳಗೆ ಸೇವೆ ಒದಗಿಸುವ ಯೋಜನೆಯನ್ನು ಪಾಲಿಕೆ ಹೊಂದಿದ್ದು, ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಅರ್ಜಿದಾರರಿಗೆ ಖಾತಾ ದಾಖಲೆ ದೊರೆಯುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. ಅದರಂತೆ 30 ದಿನದೊಳಗೆ ಪಾಲಿಕೆ ಅಧಿಕಾರಿಗಳು ಅರ್ಜಿಗಳ ವಿಲೇವಾರಿ ಮಾಡಬೇಕು. ಒಂದೊಮ್ಮೆ ಅರ್ಜಿ ವಿಲೇವಾರಿ ಮಾಡದಿದ್ದರೆ ಅದಕ್ಕೆ ಸಮರ್ಪಕ ಕಾರಣ ನೀಡಬೇಕಾಗುತ್ತದೆ.
ಸುಧಾರಣಾ ಶುಲ್ಕ ಪಾವತಿ ಕಡ್ಡಾಯ: ಪಾಲಿಕೆಯಿಂದ ಹೊಸದಾಗಿ ಖಾತಾ ನೋಂದಣಿ, ಖಾತಾ ವಿಭಜನೆ ಹಾಗೂ ಖಾತಾ ಜೋಡಣೆ ಬಯಸುವ ಆಸ್ತಿ ಮಾಲೀಕರು ಕಡ್ಡಾಯವಾಗಿ ಸುಧಾರಣಾ ಶುಲ್ಕ ಪಾವತಿಸಬೇಕು. ಇಲ್ಲವೆ, ನಿಗದಿತ ಸಮಯದೊಳಗೆ ಶುಲ್ಕ ಪಾವತಿಸಲು ಅಧಿಕಾರಿಗಳು ಕಾಲಾವಕಾಶ ನೀಡುತ್ತಾರೆ.
ಸುಮೋಟೋ ಮೂಲಕ ವರ್ಗಾವಣೆ: ಅಪಾರ್ಟ್‌ಮೆಂಟ್‌ಗಳ ಸಂದರ್ಭದಲ್ಲಿ ಸ್ವತ್ತಿನ ಖಾತಾ ವಿಭಜನೆಯಾಗಿಲ್ಲವೆಂಬ ಕಾರಣ ನೀಡಿ ಖಾತಾ ವರ್ಗಾವಣೆಯ ಅರ್ಜಿಯನ್ನು ಅಧಿಕಾರಿಗಳು ತಿರಿಸ್ಕರಿಸುವಂತಿಲ್ಲ. ಅಂತಹ ಸಂದರ್ಭದಲ್ಲಿ ಸಹಾಯಕ ಕಂದಾಯ ಅಧಿಕಾರಿಗಳು ಸುಮೋಟೋ ಆಧಾರದ ಮೇಲೆ ಸ್ವತ್ತಿನ ಖಾತಾ ವಿಭಜನೆ ಮಾಡಿ ಅರ್ಜಿದಾರರಿಗೆ ಖಾತಾ ವರ್ಗಾವಣೆ ಮಾಡಿಕೊಡಬೇಕು.
ಖಾತಾ ವರ್ಗಾವಣೆ ಅರ್ಜಿಗಳ ಸ್ಥಿತಿಗತಿ-ಸ್ವೀಕರಿಸಿದ ಒಟ್ಟು ಅರ್ಜಿಗಳು 5909
-ಅನುಮತಿ ನೀಡಿರುವುದು 685
-ತಿರಸ್ಕೃತ ಅರ್ಜಿಗಳು 812
-ಪರಿಶೀಲನಾ ಹಂತದ ಅರ್ಜಿಗಳು 1253
-ಶುಲ್ಕ ಪಾವತಿಸಿದವರು 725
-ಬಾಕಿಯಿ ಇರುವ ಅರ್ಜಿಗಳು 2069
-ಸ್ಥಳ ಪರಿಶೀಲನೆ ನಡೆಸಿರುವುದು 50
-ಪ್ರಮಾಣ ಪತ್ರ ವಿತರಣೆ ಹಂತ 201 ಪಾಲಿಕೆಯಿಂದ ಜಾರಿಗೊಳಿಸಿದ ಆನ್‌ಲೈನ್ ಖಾತಾ ವರ್ಗಾವಣೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಎಲ್ಲ ಖಾತಾ ಸೇವೆಗಳನ್ನು ಆನ್‌ಲೈನ್‌ಗೊಳಿಸಲಾಗಿದೆ. ಇದರಿಂದಾಗಿ ಜನರಿಗೆ ಸುಲಭ ಹಾಗೂ ಶೀಘ್ರವಾಗಿ ಖಾತಾ ದೊರೆಯಲಿದ್ದು, ಆಡಳಿತದಲ್ಲಿ ಪಾರದರ್ಶಕತೆ ಬರಲಿದೆ. ಆನ್‌ಲೈನ್ ಖಾತಾ ಸೇವೆಗಳ ಕುರಿತು ಅಧಿಕಾರಿಗಳಿಗೆ ಶೀಘ್ರದಲ್ಲಿಯೇ ಸುತ್ತೋಲೆ ಹೊರಡಿಸಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ * ವೆಂ.ಸುನೀಲ್ ಕುಮಾರ್