ರಾಮನಗರ: ಶುಕ್ರವಾರ ಕೇಂದ್ರ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಒಂದೆರೆಡು ಅಂಶಗಳನ್ನು ಹೊರತು ಪಡಿಸಿದರೆ, ಇಡೀ ಬಜೆಟ್ ಚುನಾವಣೆಯ ದೃಷ್ಟಿ ಇರಿಸಿಕೊಂಡು ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹಾಗೂ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ಉದಯವಾಣಿಯೊಂದಿಗೆ ಪ್ರತಿಕ್ರಿಯಿಸಿದ ಅವರು, ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಮಂಡಿಸಿರುವ ಬಜೆಟ್ ಇದಾಗಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ನಿರೀಕ್ಷೆ ದೇಶ ವ್ಯಾಪಿ ರೈತ ಸಮುದಾಯ ಇರಿಸಿಕೊಂಡಿತ್ತು. ಸಾಲ ಮನ್ನಾ ಮಾಡುವ ನಿರೀಕ್ಷೆ ಇತ್ತು. ಆದರೆ, ಈ ನಿರೀಕ್ಷೆಗಳು ಹುಸಿಯಾಗಿವೆ. ಸಣ್ಣ ರೈತರಿಗೆ ವಾರ್ಷಿಕ 6 ಸಾವಿರ ಪ್ರೋತ್ಸಾಹ ಧನ ನೀಡುವುದು ಏನೇನು ಸಾಲುವುದಿಲ್ಲ. ಕೃಷಿ ಬೆಳೆಗಳಿಗೆ ನೀಡುವ ಎಂ.ಎಸ್.ಪಿ ದರಗಳಲ್ಲೂ ಹೆಚ್ಚಳವಾಗಿಲ್ಲ ಎಂಬುದು ಬೇಸರದ ಸಂಗತಿ ಎಂದು ತಿಳಿಸಿದರು.
ಉದ್ಯಮಕ್ಕೆ ಸಹಕಾರಿ: ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಹಕಾರಿಯಾಗುವ ಬಜೆಟ್ ಮಂಡನೆಯಾಗಿದೆ. ಜಿ.ಎಸ್.ಟಿ ದರಗಳನ್ನು ಕಡಿಮೆ ಮಾಡುವ ನಿರೀಕ್ಷೆ ಇತ್ತು. ಅದು ಕೂಡ ಈಡೇರಲಿಲ್ಲ. ಕಳೆದ 5 ವರ್ಷಗಲ್ಲಿ ದೇಶದ ನಿರುದ್ಯೋಗ ಸಮಸ್ಯೆ ದುಪ್ಪಟ್ಟಾಗಿದೆ ಎಂದು ಕೆಲವು ವರದಿಗಳು ಹೇಳಿವೆ. ಈ ವಿಚಾರ ಕೇಂದ್ರ ಸರ್ಕಾರಕ್ಕೆ ಗೊತ್ತಿದೆ. 2 ಕೋಟಿ ಉದ್ಯೋಗ ಸೃಷ್ಟಿ ಮತ್ತು ಅಚ್ಚೇದಿನ್ ನೀಡುವ ಭರವಸೆ ಕೊಟ್ಟಿದ್ದ ನರೇಂದ್ರ ಮೋದಿ ಸರ್ಕಾರ ನಿರುದ್ಯೋಗ ಸಮಸ್ಯೆಗೆ ಸ್ಪಂದಿಸದಿರುವುದು ದುರಂತ.
ಶುಕ್ರವಾರ ಮಂಡನೆಯಾಗಿರುವ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಗೆ ಯಾವ ಯೋಜನೆಯೂ ಇಲ್ಲ. ರಾಮನಗರ -ಹೆಜ್ಜಾಲ- ಕನಕಪುರ- ಚಾಮರಾಜನಗರ ರೈಲು ಮಾರ್ಗದ ಬಗ್ಗೆ ಪ್ರಸ್ತಾಪವಿಲ್ಲ. ಹೆಚ್ಚುವರಿ ರೈಲುಗಳನ್ನು ಪರಿಚಯಿಸುವ ಚಿಂತನೆಗಳು ಇಲ್ಲ. ಬುಲೆಟ್ ರೈಲು ಓಡಿಸುವ ನಿರ್ಧಾರವೂ ಹುಸಿಯಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದರು.
ಯುವಕರಿಗೆ ಸ್ಪಂದನೆ ಇಲ್ಲ: ಯುವ ಸಮುದಾಯದ ಆಶೋತ್ತರಗಳಿಗೆ ಈ ಬಜೆಟ್‌ನಲ್ಲಿ ಸ್ಪಂದನೆ ಇಲ್ಲ ಎಂದಿರುವ ಅವರು, ಆದಾಯ ತೆರಿಗೆ ವಿಚಾರದಲ್ಲಿ ವಿತ್ತ ಸಚಿವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ ಎಂಬ ವಿಚಾರ ಸ್ವಾಗತಾರ್ಹ ಎಂದಿರುವ ಅವರು ಈ ನಿರ್ಧಾರ ಮಧ್ಯಮವರ್ಗದ ಕುಟುಂಬಗಳಿಗೆ ಸಹಕಾರಿ ಎಂದು ತಿಳಿಸಿದರು.
ನಿರೀಕ್ಷೆ ಹುಸಿ: ಕೇಂದ್ರ ಬಜೆಟ್‌ನಲ್ಲಿ ಹಲವು ನಿರೀಕ್ಷೆಗಳು ಇದ್ದವು. ಈ ದೇಶದ ಬೆನ್ನೆಲುಬಾದ ರೈತರ ಕಷ್ಟಗಳಿಗೆ ಸ್ಪಂದಿಸುವ ಬಜೆಟ್ ಆಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಚುಣಾವಣೆಯನ್ನು ಗಮನದಲ್ಲಿಟ್ಟುಕೊಂಡು ರೈತರ ಮನವೊಲಿಸುವ ಬಜೆಟ್ ಇದಾಗಿದೆ. ಇದರಿಂದ ಅನ್ನದಾತ ಸಮಸ್ಯೆ ನೀಗಲು ಅಸಾಧ್ಯವಾಗಿದೆ. ದೇಶಾದ್ಯಂತ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾದರೆ ಮಾತ್ರ ರೈತರ ಪ್ರಗತಿ ಸಾಧ್ಯವಾಗುತ್ತದೆ ಎಂದು ಕನಕಪುರದ ರೈತ ಮುಖಂಡ ನಾರಾಯಣಸ್ವಾಮಿ ತಿಳಿಸಿದ್ದಾರೆ.