ಕಲಬುರಗಿ: ಇಡೀ ಜಗತ್ತಿಗೆ ಶಾಂತಿ, ಸಮತೆ ಬೋಧಿಸಿದ ಬುದ್ಧ ನಮಗೆ ಹಿಡಿಸಲಿಲ್ಲ. ಆತನ ಬೋಧನೆ, ತತ್ವಗಳನ್ನು ನಾವು ತಿಳಿಯುವ ಮೊದಲೇ ದೇಶದಿಂದ ಹೊರದೂಡಿಬಿಟ್ಟೇವು. ಅದರಿಂದ ನಮಗೆ ತುಂಬಲಾರದ ನಷ್ಟ ಎಂದು ಹಿರಿಯ ಸಂಸ್ಕೃತಿ ಚಿಂತಕ ಪ್ರೊ| ಮೀರಾಸಾಬಿಹಳ್ಳಿ ಶಿವಣ್ಣ ಅಭಿಪ್ರಾಯಪಟ್ಟರು.
ಪಾಲಿ ಇನ್ಸ್‌ಟ್ಯೂಟ್ ಮತ್ತು ಗುಲಬರ್ಗಾ ವಿವಿ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಮಹಾತ್ಮಗಾಂಧಿ ಸಭಾಂಗಣದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬುದ್ಧ ಮತ್ತು ಆತನ ಧರ್ಮ ಕೃತಿ ಕುರಿತು ಮಂಗಳವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧನ ಕಾಲದಲ್ಲಿ ಈ ದೇಶದಲ್ಲಿ ಪಾಲಿಯೇ ಜನಪದ ಭಾಷೆಯಾಗಿತ್ತು. ಹಾಗಾಗಿ ಪಾಲಿ ಭಾಷೆ ಅಧ್ಯಯನ ಮಾಡುವುದು ನಮ್ಮ ಎಲ್ಲ ಅಗತ್ಯಗಳಲ್ಲಿ ಪ್ರಥಮವಾಗಬೇಕು. ಆಗಲೇ ಈ ನೆಲದ ಮೂಲ ತತ್ವ ಹಾಗೂ ಅವರ ಪರಿಭಾಷೆ ನಮಗೆ ಅರ್ಥವಾಗುತ್ತದೆ. ಆಗ ನಾವು ಮನುಷ್ಯ ಮೌಲ್ಯಗಳ ಕುರಿತು ಗೌರವ ಹಾಗೂ ಅನುಕರಣೆ ಸಾಧ್ಯವಿದೆ ಎಂದು ಹೇಳಿದರು.
ಈ ಹಂತದಲ್ಲಿ ನಮಗೆ ವಿಶ್ವರತ್ನ ಡಾ| ಬಾಬಾಸಾಹೇಬ ತಮ್ಮ ಕೊನೆಗಾಲದಲ್ಲಿ ಬರೆದಿರುವ ಬುದ್ಧ ಮತ್ತು ಆತನ ಧಮ್ಮ ಎನ್ನುವ ಪುಸ್ತಕ ಬುದ್ಧನ ಕುರಿತು ನಮಗೆ ಬೆಳಕು ಚೆಲ್ಲುತ್ತದೆ. ಅದನ್ನು ಓದುವುದು ನಮ್ಮ ಅನಿವಾರ್ಯತೆಯಾಗಬೇಕು. ಆಗಲೇ ನಾವು ನಮ್ಮೊಳಗಿನ ಸಮತೆಯ ಹಣತೆ ಹಚ್ಚಬಲ್ಲೆವು ಎಂದು ಹೇಳಿದರು.
ಮಹಾತ್ಮಗಾಂಧೀಜಿ ಜತೆ ಹಲವು ವಿಷಯಗಳಲ್ಲಿ ವೈಚಾರಿಕ ಭಿನ್ನಾಭಿಪ್ರಾಯ ಹೊಂದಿದ್ದ ಅಂಬೇಡ್ಕರ್ ದಲಿತರ ಆತ್ಮಾಭಿಮಾನದ ಸಂಕೇತವಾಗಿದ್ದಾರೆ. ನಾನಕ್‌ಚಂದ್ ಎಂಬುವವರು ಅಂಬೇಡ್ಕರ್‌ರ ಆಲೋಚನೆಗಳನ್ನು ಬರೆದಿಡುವ ಮೂಲಕ ಮಹದುಪಕಾರ ಮಾಡಿದ್ದಾರೆ. ಈ ದೇಶದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಅವರ ಬಗ್ಗೆ ಬರೆಯದವರೇ ಇಲ್ಲ.
ಅಷ್ಟು ಪುಸ್ತಕಗಳು, ಅಷ್ಟು ವಿಚಾರಗಳು, ಸಂಘರ್ಷಗಳು, ವಾದಗಳು ಮತ್ತು ಸತ್ಯಗಳು ಹೊರಬಂದಿವೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಗುವಿವಿ ಕುಲಪತಿ ಪ್ರೊ| ಎಸ್.ಆರ್. ನಿರಂಜನ್ ಮಾತನಾಡಿ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳಿಂದ ಅವರು ಕಂಡುಕೊಂಡ ಸತ್ಯದ ಮಾರ್ಗವನ್ನು ಅನುಸರಿಸುವುದರಿಂದ ಒಂದು ಸ್ವತ್ಛ ಮತ್ತು ಆರೋಗ್ಯಕರವಾದ ಸಮಾಜವನ್ನು ನಾವು ಕಟ್ಟಬಹುದು.
ಆ ನಿಟ್ಟಿನಲ್ಲಿ ನಮ್ಮ ಆಲೋಚನೆಗಳು, ಸಂಶೋಧನೆಗಳು, ವಿಚಾರಗಳು, ತರ್ಕಗಳು ಹಾಗೂ ನಿಲುವುಗಳು ಇರಬೇಕು. ಆಗಲೇ ನಾವು ಮಾನವೀಯ ಮೌಲ್ಯಗಳನ್ನು ಗೌರವಿಸಲು ಹಾಗೂ ಅದನ್ನು ರೂಢಿಸಿಕೊಳ್ಳಲು ಸಾಧ್ಯ.