Advertisement

ಜಿಲ್ಲಾ ಕೂಗಿಗೆ ಬಲ ತಂದ “ವಿಜಯನಗರ’

09:31 AM Sep 22, 2019 | Lakshmi GovindaRaju |

ಬಳ್ಳಾರಿಯಿಂದ ಆರು ತಾಲೂಕುಗಳನ್ನು ಬೇರ್ಪಡಿಸಿ ಹೊಸಪೇಟೆ ಕೇಂದ್ರವನ್ನಾಗಿಸಿಕೊಂಡು ನೂತನ “ವಿಜಯನಗರ’ ಜಿಲ್ಲೆ ರಚನೆ ಬಗ್ಗೆ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಖ್ಯ ಕಾರ್ಯದರ್ಶಿಗೆ ನೀಡಿರುವ ಸೂಚನೆ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಈ ಕೂಗಿಗೆ ಬಳ್ಳಾರಿ ಜಿಲ್ಲೆಯ ನಾಯಕರು, ಆಡಳಿತಾರೂಢ ಬಿಜೆಪಿ ನಾಯಕರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಜತೆಗೆ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿಭಜನೆಯ ಕೂಗಿಗೆ ಮತ್ತಷ್ಟು ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಿಲ್ಲೆಗಳ ಕೂಗಿಗೆ ಇದು ನಾಂದಿಯಾದರೂ ಅಚ್ಚರಿಯಿಲ್ಲ.

Advertisement

ಬೆಳಗಾವಿ ವಿಭಜನೆ ಕೂಗಿಗೆ ಮತ್ತೆ ಜೀವ
ಬೆಳಗಾವಿ: ಸಾರ್ವಜನಿಕರು ಹಾಗೂ ಆಡಳಿತಾತ್ಮಕ ಅನುಕೂಲತೆ ದೃಷ್ಟಿಯಿಂದ ರಾಜ್ಯದಲ್ಲೇ ಅತಿ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿರುವ ಬೆಳಗಾವಿಯನ್ನು ವಿಭಜನೆ ಮಾಡಬೇಕೆಂಬ ಎರಡು ದಶಕಗಳ ಬೇಡಿಕೆಗೆ ಈಗ ಮತ್ತೆ ಜೀವ ಬಂದಿದೆ. ಬಳ್ಳಾರಿ ಜಿಲ್ಲೆ ವಿಭಜನೆ ಪ್ರಸ್ತಾಪದ ಬೆನ್ನಲ್ಲೇ ಈ ಕೂಗಿಗೆ ಬಲ ಬಂದಿದೆ. ಈ ಬೇಡಿಕೆಗೆ ಸಾರ್ವಜನಿಕವಾಗಿ ವ್ಯಾಪಕ ಬೆಂಬಲ ಇದೆ.

ಜನರ ಅನು ಕೂಲ ಮತ್ತು ಆಡಳಿತಾತ್ಮಕ ದೃಷ್ಟಿ ಯಿಂದ ಇದು ಅತ್ಯಗತ್ಯ. ಆದರೆ, ಜಿಲ್ಲೆ ಯನ್ನು ಹೇಗೆ ಮತ್ತು ಎಷ್ಟು ವಿಭಜಿಸ ಬೇಕು ಎಂಬುದೇ ಇದುವರೆಗೆ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಜಿಲ್ಲೆ ವಿಭಜನೆ ಪ್ರಸ್ತಾಪ ಬಂದರೆ ಸಾಕು ಚಿಕ್ಕೋಡಿ, ಗೋಕಾಕ ಮತ್ತು ಬೈಲಹೊಂಗಲ ಭಾಗದ ಜನರೂ ಎದ್ದು ನಿಲ್ಲುತ್ತಾರೆ. ಹೀಗಾಗಿ ಈ ವಿಷಯ ಸರ್ಕಾರಕ್ಕೆ ತಲೆನೋವಾಗಿದೆ.

ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯನ್ನು ಒಡೆದು ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಗಳನ್ನಾಗಿ ಮಾಡಬೇಕು ಎಂಬ ಬೇಡಿಕೆ ಇದ್ದರೂ ವಿವಿಧ ಕಾರಣಗಳಿಂದ ಇದು ನನೆಗುದಿಗೆ ಬಿದ್ದಿದೆ. ಇದುವರೆಗೆ ಅಧಿಕಾರ ನಡೆಸಿದ ಮುಖ್ಯಮಂತ್ರಿಗಳು ರಾಜಕೀಯ ಹಿತಾಸಕ್ತಿಯಿಂದಾಗಿ ಈ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಹಸ ಮಾಡಿಲ್ಲ. ಹೀಗಾಗಿ ಈ ವಿಚಾರಕ್ಕೆ ರಾಜಕೀಯ ಬಲ ಸಿಗುತ್ತಿಲ್ಲ. ಅದಕ್ಕಾಗಿ ನಡೆಯುತ್ತಿರುವ ಹೋರಾಟಗಳೂ ತಾತ್ಕಾಲಿಕ ಎನ್ನುವಂತಾಗಿವೆ.

ಆದರೆ ಈಗ ವಿಜಯನಗರ ಜಿಲ್ಲೆ ರಚನೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಜಿಲ್ಲಾ ವಿಭಜನೆ ಪರ ಇರುವ ಗಡಿ ಭಾಗದ ಬೆಳಗಾವಿಯ ಜನರಲ್ಲಿ ಆಶಾಕಿರಣ ಮೂಡಿಸಿದೆ. ಈಗಿರುವ ಜಿಲ್ಲಾ ಕೇಂದ್ರದಿಂದ 200 ಕಿ.ಮೀ. ದೂರದ‌ ಊರುಗಳ ಜನರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಬಂದು ಹೋಗಲು ತೊಂದರೆಯಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿರುವುದು ಹೊಸ ಜಿಲ್ಲೆ ಬೇಡಿಕೆಗೆ ಪುಷ್ಟಿ ಸಿಕ್ಕಿದೆ.

Advertisement

ವ್ಯಾಪ್ತಿ, ಅಂತರ ಎಷ್ಟು?: ಭೌಗೋಳಿಕ ವಿಸ್ತೀರ್ಣದ ದೃಷ್ಟಿಯಿಂದ ಬೆಳಗಾವಿ ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆ. ಒಟ್ಟು 13,44,382 ಲಕ್ಷ ಹೆಕ್ಟೇರ್‌ ವಿಸ್ತೀರ್ಣ ಹೊಂದಿದೆ. 2011ರ ಜನಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 47.79 ಲಕ್ಷ. ಇದರಲ್ಲಿ ಗ್ರಾಮೀಣ ಪ್ರದೇಶದ ಜನಸಂಖ್ಯೆ 35.68 ಲಕ್ಷ ಇದೆ. ಒಟ್ಟು 14 ತಾಲೂಕು ಹಾಗೂ 506 ಗ್ರಾಪಂ ಹೊಂದಿದೆ. ಎಲ್ಲಕ್ಕಿಂತ ಮುಖ್ಯ ಸಂಗತಿ ಎಂದರೆ ಅಥಣಿ ತಾಲೂಕಿನ ಗಡಿ ಭಾಗದ ಹಳ್ಳಿಗಳು ಜಿಲ್ಲಾ ಕೇಂದ್ರದಿಂದ ಸುಮಾರು 190 ಕಿ.ಮೀ. ದೂರದಲ್ಲಿವೆ. ಅಥಣಿ ತಾಲೂಕು ಕೇಂದ್ರವೇ ಬೆಳಗಾವಿಯಿಂದ 150 ಕಿ.ಮೀ. ದೂರದಲ್ಲಿದೆ. ಈ ಪ್ರದೇಶದ ಜನರು ಜಿಲ್ಲಾ ಕೇಂದ್ರಕ್ಕೆ ಬಂದು ಕೆಲಸ ಮಾಡಿಕೊಂಡು ಹೋಗುವುದು ದುಸ್ತರವಾಗಿದೆ. ಈ ಎಲ್ಲ ಕಾರಣಗಳಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂಬ ಕೂಗು ಕಳೆದ 2 ದಶಕಗಳಿಂದ ಕೇಳಿ ಬರುತ್ತಲೇ ಇದೆ.

ನನೆಗುದಿಗೆ ಬೀಳಲು ಕಾರಣಗಳೇನು?: ಹಿಂದಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವಧಿಯಲ್ಲೇ ಈ ಬೇಡಿಕೆ ವ್ಯಕ್ತವಾಗಿತ್ತು. ಚಿಕ್ಕೋಡಿ ಮತ್ತು ಗೋಕಾಕ ಭಾಗದ ಜನರು ತಮ್ಮ ತಾಲೂಕೇ ಜಿಲ್ಲೆಯಾಗಬೇಕು ಎಂಬ ಬೇಡಿಕೆ ಮಂಡಿಸಿ ಹೋರಾಟವನ್ನೂ ನಡೆಸಿದ್ದರು. ಆಗ ಎಲ್ಲ ಅಂಶಗಳನ್ನೂ ಪರಿಗಣಿಸಿದ ಸರ್ಕಾರ ಚಿಕ್ಕೋಡಿ ಜಿಲ್ಲೆಯನ್ನಾಗಿ ಪ್ರಕಟಿಸಲು ಸಿದ್ಧತೆಯನ್ನೂ ಮಾಡಿಕೊಂಡಿತ್ತು. ಆದರೆ ಕೆಲ ರಾಜಕೀಯ ಒತ್ತಡಗಳ ಪರಿಣಾಮ ಈ ಘೋಷಣೆ ಹೊರಬೀಳಲೇ ಇಲ್ಲ.

ಅಂದು ನನೆಗುದಿಗೆ ಬಿದ್ದ ಜಿಲ್ಲಾ ವಿಭಜನೆ ಪ್ರಸ್ತಾವ ಇನ್ನೂ ಪರಿಹಾರ ಕಂಡಿಲ್ಲ. ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿ ಸಂಸದರು, ಶಾಸಕರು ಒಟ್ಟಾಗಿ ಹೋದರೆ ಇದು ತಕ್ಷಣ ಈಡೇರುವ ಬೇಡಿಕೆ. ಜಿಲ್ಲಾ ವಿಭಜನೆಗೆ ನಮ್ಮ ವಿರೋಧ ಇಲ್ಲ ಎಂದು ಬಹಿರಂಗವಾಗಿ ಹೇಳಿದರೂ ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ಮಾತ್ರ ಹಿಂದೆ ಸರಿಯುತ್ತಿದ್ದಾರೆ. ಇನ್ನೊಂದೆಡೆ ಜಿಲ್ಲಾ ವಿಭಜನೆ ಮಾಡಿದರೆ ಬೆಳಗಾವಿಯಲ್ಲಿ ಕನ್ನಡದ ಪ್ರಾಬಲ್ಯ ಕಡಿಮೆಯಾಗುತ್ತದೆ. ಮತ್ತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಸದೃಢವಾಗುತ್ತದೆ. ಹೀಗಾಗಿ ಗಡಿ ವಿವಾದ ಇತ್ಯರ್ಥವಾಗುವವರೆಗೆ ಜಿಲ್ಲಾ ವಿಭಜನೆ ಮಾಡುವುದು ಬೇಡ ಎಂಬುದು ಕನ್ನಡ ಹೋರಾಟಗಾರರ ವಾದ.

* ಕೇಶವ ಆದಿ

*****

ಉ.ಕನ್ನಡ ವಿಭಜನೆಗೂ ಎದ್ದಿತ್ತು ಕೂಗು
ಹೊನ್ನಾವರ: ಕರಾವಳಿ, ಅರೆಮಲೆನಾಡು ಹಾಗೂ ಬಯಲುಸೀಮೆಯ ಸಂಗಮವಾಗಿದ್ದು, 12 ತಾಲೂಕುಗಳನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯನ್ನು ವಿಭಜಿಸಬೇಕು ಎಂಬ ಕೂಗು 2 ದಶಕದಷ್ಟು ಹಳೆಯದ್ದು. ನೆರೆಯ ದಕ್ಷಿಣ ಕನ್ನಡ ಜಿಲ್ಲೆ ವಿಭಜನೆಯಾಗಿ ಉಡುಪಿ ಜಿಲ್ಲೆ ಆಸ್ತಿತ್ವಕ್ಕೆ ಬಂದಾಗ ಉತ್ತರ ಕನ್ನಡವನ್ನೂ ವಿಭಜಿಸಬೇಕು ಎಂಬ ಧ್ವನಿ ಎದ್ದಿತ್ತು. ಇದಕ್ಕೆ ಕರಾವಳಿಯಲ್ಲಿ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಆದರೆ ಘಟ್ಟ ಪ್ರದೇಶಗಳ ತಾಲೂಕುಗಳಲ್ಲಿ ಬೆಂಬಲ ವ್ಯಕ್ತವಾಗಿತ್ತು. ಕೊನೆಗೆ ಹೋರಾಟದ ಕಾವು ಕಡಿಮೆಯಾಯಿತು. ಅನಂತರ ಉತ್ತರ ಕನ್ನಡ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳಷ್ಟೇ ಆಸ್ತಿತ್ವಕ್ಕೆ ಬಂದವು.

ಉತ್ತರ ಕನ್ನಡ ರಾಜ್ಯದ ದೊಡ್ಡ ಜಿಲ್ಲೆಗಳಲ್ಲೊಂದು. ಈ ಹಿಂದೆ 11 ತಾಲೂಕನ್ನು ಹೊಂದಿದ್ದ ಜಿಲ್ಲೆ ಹೊಸದಾಗಿ ರಚನೆಯಾದ ದಾಂಡೇಲಿ ತಾಲೂಕು ಸೇರಿ ಈಗ 12 ತಾಲೂಕುಗಳನ್ನು ಹೊಂದಿದೆ. ಕಾರವಾರ ಜಿಲ್ಲಾ ಕೇಂದ್ರವಾಗಿದೆ. 6 ವಿಧಾನಸಭಾ ಕ್ಷೇತ್ರ, ಒಂದು ಲೋಕಸಭೆ ಕ್ಷೇತ್ರಗಳಿವೆ. 144 ಕಿಮೀ ಕರಾವಳಿಯಿದೆ. ಜಿಲ್ಲೆಯ ಭೌಗೋಳಿಕ ಪ್ರದೇಶ ವಿಸ್ತೀರ್ಣ 10,24,679 ಹೆಕ್ಟೇರ್‌. ಈ ಪೈಕಿ 8,15,202 ಹೆಕ್ಟೇರ್‌ನಷ್ಟು ಭೂಮಿ ಅರಣ್ಯ ಇಲಾಖೆಗೆ ಸೇರಿದೆ. ಹಳ್ಳಿಗಳಲ್ಲಿ 9 ಲಕ್ಷ ಹಾಗೂ ನಗರದಲ್ಲಿ 4ಲಕ್ಷದಷ್ಟು ಜನಸಂಖ್ಯೆ ಇದೆ. ಕರಾವಳಿಯ ಭಟ್ಕಳದಿಂದ ಜೋಯಿಡಾಕ್ಕೆ 200 ಕಿಮೀ ದೂರ ಹೋಗಲು 10 ತಾಸು ಬೇಕು. ಇನ್ನು ಆಡಳಿತಾತ್ಮಕವಾಗಿ ಸಮಗ್ರ ಜಿಲ್ಲೆಯನ್ನು ಪರಿಚಯ ಮಾಡಿಕೊಳ್ಳಲು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ವರ್ಷವೇ ಬೇಕು.

ಮೂರಂತಸ್ತಿನ ಮಹಡಿ!: ಭೌಗೋಳಿಕವಾಗಿ ನಕಾಶೆ ನೋಡಿದರೆ ಉತ್ತರ ಕನ್ನಡ ಒಂದು ಜಿಲ್ಲೆ. ಕರಾವಳಿಯ ಸಮುದ್ರ, ಅರೆಮಲೆನಾಡು, ಕಾಡು, ಬಯಲು ಸೀಮೆಯನ್ನೊಳಗೊಂಡ 4000 ಮಿಮೀ ಯಿಂದ 400 ಮಿಮೀ ಮಳೆ ಸುರಿಯುವ ಬೆಟ್ಟ-ಘಟ್ಟ ಹಾಗೂ ಕರಾವಳಿ ಈ ಮೂರು ಅಂತಸ್ತಿನ ಮಹಡಿಯಂತಿದೆ ಈ ಜಿಲ್ಲೆ. ಕಲೆ, ಸಂಸ್ಕೃತಿ, ಜನಜೀವನ, ಊಟೋಪಚಾರ, ಉದ್ಯೋಗ, ಎಲ್ಲವೂ ಭಿನ್ನ. ಸಾಮಾನ್ಯವಾಗಿ ಕೃಷಿಕರು, ಮೀನುಗಾರರು ಎಂದು ವಿಭಜಿಸಬಹುದು.

ಕೈಗಾರಿಕೆಗಳು ತೀರ ಕಡಿಮೆ. ಈ ಹಿಂದೆ ವಿಭಜನೆಗೊಂಡ ಜಿಲ್ಲೆಗಳು ಪ್ರಗತಿಯಲ್ಲಿ ನಾಗಾಲೋಟ ಸಾಧಿಸಿರುವುದನ್ನು ಕಂಡಾಗ ಉತ್ತರ ಕನ್ನಡವೂ ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಂಡು ಆಡಳಿತಾತ್ಮಕವಾಗಿ ವಿಭಜನೆಗೊಂಡರೆ ಒಳ್ಳೆಯದು ಎಂಬ ಅಭಿಪ್ರಾಯ ಆಗಾಗ ಕೇಳಿಬರುತ್ತದೆ. ಇನ್ನು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಎಲ್ಲರೂ ಒಟ್ಟಾಗಿ ಬಂದರೆ ವಿಭಜಿಸುವ ಕುರಿತು ಆಲೋಚಿಸೋಣ ಎಂದಿದ್ದರು. ಯಡಿಯೂರಪ್ಪನವರು ಬೇರೆ ಜಿಲ್ಲೆಗಳೊಟ್ಟಿಗೆ ಉತ್ತರ ಕನ್ನಡದ ಕುರಿತು ಆಲೋಚಿಸೋಣ ಎಂದಿದ್ದರು.

ವಿಭಜನೆ ಹೇಗೆ?: ಸಾಮಾನ್ಯವಾಗಿ ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ಸಹಿತ ಐದು ತಾಲೂಕುಗಳು ಸೇರಿ ಕಾರವಾರ ಜಿಲ್ಲೆಯಾಗಬೇಕು. ಜತೆಗೆ ಕಾರವಾರದಲ್ಲಿ ನೌಕಾನೆಲೆ ಹಾಗೂ ಅಣುಸ್ಥಾವರಗಳು ವಿಸ್ತಾರಗೊಳ್ಳುವುದರಿಂದ ಮಧ್ಯವರ್ತಿ ಸ್ಥಳವಾದ ಕುಮಟಾ ಜಿಲ್ಲಾ ಕೇಂದ್ರವಾಗಬೇಕು ಎಂಬ ಅಭಿಪ್ರಾಯವಿತ್ತು. ಹಾಗೆಯೇ ಘಟ್ಟದ ಮೇಲಿನ ಶಿರಸಿ ಎಲ್ಲ ದೃಷ್ಟಿಯಿಂದ ಅಭಿವೃದ್ಧಿ ಹೊಂದಿರುವುದರಿಂದ ಅದು ಇನ್ನೊಂದು ಜಿಲ್ಲೆಯಾಗಲಿ.

ಇದಕ್ಕೆ ಜೋಯಿಡಾ(ಸೂಪಾ), ಹಳಿಯಾಳ, ಯಲ್ಲಾಪುರ, ಮುಂಡಗೋಡ, ಸಿದ್ದಾಪುರ ಹಾಗೂ ಶಿರಸಿ ತಾಲೂಕುಗಳು ಸೇರಲಿ ಎಂಬ ಮಾತೂ ಕೇಳಿಬಂದಿತ್ತು. ಇನ್ನೊಂದೆಡೆ ಕರಾವಳಿ ಪ್ರದೇಶ ಎರಡೂ ಜಿಲ್ಲೆಗೆ ಇರಲಿ ಎಂದಾದರೆ ಶಿರಸಿ, ಸಿದ್ಧಾಪುರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಒಂದು ಜಿಲ್ಲೆಯನ್ನಾಗಿಸಿ ಶಿರಸಿ ಅಥವಾ ಕುಮಟಾವನ್ನು ಜಿಲ್ಲಾ ಕೇಂದ್ರ ಮಾಡಬಹುದು. ಅಂತೆಯೇ ಹಳಿಯಾಳ, ಯಲ್ಲಾಪುರ, ಕಾರವಾರ, ಮುಂಡಗೋಡ, ಜೋಯಿಡಾ ತಾಲೂಕುಗಳನ್ನು ಸೇರಿಸಿ ಮತ್ತೂಂದು ಜಿಲ್ಲೆಯನ್ನಾಗಿಸಿ ಕಾರವಾರವನ್ನು ಜಿಲ್ಲಾ ಕೇಂದ್ರವಾಗಿ ಮಾಡಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು.

* ಜೀಯು ಹೊನ್ನಾವರ

*****

ಬಳ್ಳಾರಿ ವಿಭಜನೆಗೆ ಅಪಸ್ವರ
ಬಳ್ಳಾರಿ: “ಅಖಂಡ ಬಳ್ಳಾರಿ ಜಿಲ್ಲೆಗೆ ನನ್ನ ಸಹಮತ’ ಎನ್ನುವ ಮೂಲಕ ಆರೋಗ್ಯ ಸಚಿವ ಬಿ.ಶ್ರೀರಾಮುಲು ಜಿಲ್ಲೆ ಇಬ್ಭಾಗಕ್ಕೆ ವಿರೋಧ ವ್ಯಕ್ತಪಡಿ ಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲಿನಿಂದಲೂ ಅಖಂಡ ಬಳ್ಳಾರಿ ಜಿಲ್ಲೆಯ ನ್ನಾಗಿಸಿಕೊಂಡೇ ಹೋರಾಟ ಮಾಡುತ್ತ ಒಗ್ಗಟ್ಟಾಗಿ ಕೆಲಸ-ಕಾರ್ಯ ಮಾಡುತ್ತಾ ಬರಲಾಗಿದೆ. ಈಗಲೂ ಅದನ್ನೇ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಹೀಗಿರುವಾಗ ಇಬ್ಭಾಗದ ಮಾತು ಏಕೆ ಎಂದು ಪ್ರಶ್ನಿಸಿದರು. ಕೆಲವರು ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿಸುವಂತೆ ಹೋರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ಹೂವಿನಹಡಗಲಿ ಅಥವಾ ಹಗರಿಬೊಮ್ಮ ನಹಳ್ಳಿ ಜಿಲ್ಲಾ ಕೇಂದ್ರವಾಗಲಿ ಎಂದು ಹೋರಾಟ ಆರಂಭಿಸಿದ್ದಾರೆ. ವಿಜಯನಗರ ಜಿಲ್ಲೆಯಾಗಬೇಕು ಎಂದು ಒತ್ತಾಯಿಸುವವರು ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ಮನವಿ ಪತ್ರವನ್ನೂ ಸಲ್ಲಿಸಿದ್ದಾರೆ ಎಂದರು.

ಜಿಲ್ಲಾ ಕೇಂದ್ರವಾಗಲು ಹಡಗಲಿ ಸೂಕ್ತ
ಹೂವಿನಹಡಗಲಿ: “ಬಳ್ಳಾರಿ ಜಿಲ್ಲೆ ವಿಭಜನೆ ವಿಷಯವಾಗಿ ಸೂಕ್ತ ಚರ್ಚೆ ಆಗಲಿ. ನಂತರ ಈ ಬಗ್ಗೆ ನಿರ್ಣಯವಾಗಲಿ’ ಎಂದು ಮಾಜಿ ಸಚಿವ ಹಾಗೂ ಶಾಸಕ ಪಿ.ಟಿ.ಪರಮೇಶ್ವರ್‌ ನಾಯ್ಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಒಂದು ಹೊಸ ಜಿಲ್ಲೆ ರಚನೆಯಾಗಬೇಕಾದಲ್ಲಿ ಆ ಭಾಗದ ಸಾಹಿತಿಗಳು, ಶಿಕ್ಷಣ ತಜ್ಞರು, ಕಲಾವಿದರು, ಜನಪ್ರತಿನಿಧಿಗಳು ಸೇರಿ ಹಲವು ಕ್ಷೇತ್ರಗಳವರ ಅಭಿಪ್ರಾಯ ಸಂಗ್ರಹಿಸಬೇಕು. ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ನಂತರ ನಿರ್ಣಯ ಕೈಗೊಳ್ಳಬೇಕು ಎಂದರು. ಏಕಾಏಕಿ ಜಿಲ್ಲೆಯನ್ನು ವಿಭಜನೆ ಮಾಡಿ ಹೊಸ ಜಿಲ್ಲೆ ರಚಿಸುವುದು ಸೂಕ್ತವಾದುದಲ್ಲ. ಎರಡು ದಿನಗಳ ಹಿಂದೆ ಪ್ರಗತಿಪರ ಸಂಘಟನೆಗಳ ಮುಖಂಡರು ಹಡಗಲಿ ಜಿಲ್ಲಾ ಕೇಂದ್ರಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ. ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಬಳ್ಳಾರಿಯೇ “ವಿಜಯನಗರ’ವಾಗಲಿ
ಬಳ್ಳಾರಿ: ಹೊಸಪೇಟೆಯನ್ನು ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿ ಸಬೇಕೆಂಬ ಬೇಡಿಕೆ ಮುಂದಿಟ್ಟು ಮುಖ್ಯಮಂತ್ರಿ ಬಳಿ ತೆರಳಿರುವ ನಿಯೋಗ ಸ್ವಾರ್ಥಿಗಳ ಕೂಟ ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಆ ನಿಯೋಗದಲ್ಲಿದ್ದ ಎಲ್ಲರೂ ಸ್ವಾರ್ಥಿಗಳೇ. ತಮ್ಮ ಸ್ವಹಿತಾಸಕ್ತಿಗೋಸ್ಕರ ಜಿಲ್ಲೆಯನ್ನು ಇಬ್ಭಾಗ ಮಾಡಲು ಮುಂದಾಗಿ ರೋದು ಅಕ್ಷಮ್ಯ ಅಪರಾಧ ಎಂದು ಆರೋಪಿಸಿದರು. “ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿಸಲು ಹೊರಟವರೆಲ್ಲರೂ ಸ್ವಾರ್ಥಿಗಳು. ಇದಕ್ಕೆ ನನ್ನ ವಿರೋಧವಿದೆ. ಈ ಮನವಿ ಬಗ್ಗೆ ಮುಖ್ಯಮಂತ್ರಿ ಪುನರ್‌ ಪರಿಶೀಲನೆ ನಡೆಸಬೇಕು. ಯಾರೋ ಹೋಗಿ ಮನವಿ ಕೊಟ್ಟರೆ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡೋದು ಸರಿಯಲ್ಲ. ಇದು ತುಘಲಕ್‌ ರೀತಿಯ ವರ್ತನೆಯಾಗುತ್ತದೆ’ ಎಂದು ಟೀಕಿಸಿದರು.

ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಹಲವು ವರ್ಷಗಳಿಂದ ಇದ್ದರೂ ಇಲ್ಲಿಯ ರಾಜಕೀಯ ನಾಯಕರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳಲ್ಲಿ ಒಮ್ಮತದ ಅಭಿಪ್ರಾಯ ಇಲ್ಲ. ಇದರಿಂದ ಜಿಲ್ಲಾ ವಿಭಜನೆ ನನೆಗುದಿಗೆ ಬಿದ್ದಿದೆ.
-ಜಗದೀಶ ಶೆಟ್ಟರ್‌, ಜಿಲ್ಲಾ ಉಸ್ತುವಾರಿ ಸಚಿವ

ಭೌಗೋಳಿಕವಾಗಿ ಬಹಳ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯ ವಿಭಜನೆಯಾಗಬೇಕು ಎಂದು ನಾವು ಮೊದಲಿಂದಲೂ ಹೇಳುತ್ತಲೇ ಬಂದಿದ್ದೇವೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಆದರೆ ಯಾವ ಸರ್ಕಾರಗಳೂ ಇದರ ಬಗ್ಗೆ ಆಷ್ಟು ಆಸಕ್ತಿ ತೋರಿಸಲಿಲ್ಲ. ಈಗ ಎಲ್ಲ ನಾಯಕರು ಒಂದಾಗಿ ಸರ್ಕಾರದ ಮುಂದೆ ನಿಯೋಗದ ಮೂಲಕ ಒತ್ತಾಯ ಮಾಡಲು ಸಿದ್ಧ.
-ಸತೀಶ ಜಾರಕಿಹೊಳಿ, ಕಾಂಗ್ರೆಸ್‌ ಶಾಸಕ

ಜಿಲ್ಲೆ ವಿಭಜನೆ ಪ್ರಸ್ತಾಪಕ್ಕೆ ಮೊದಲಿಂದಲೂ ನಮ್ಮ ವಿರೋಧ ಇದೆ. ಈ ನಿಲುವಿನಲ್ಲಿ ನಮ್ಮ ಬದಲಾವಣೆ ಇಲ್ಲ. ಬೆಳಗಾವಿ ಗಡಿ ವಿವಾದ ನ್ಯಾಯಾಲಯದಲ್ಲಿದೆ. ಇದು ಬಗೆಹರಿಯುವವರೆಗೆ ಜಿಲ್ಲಾ ವಿಭಜನೆ ಬೇಡ. ಚಿಕ್ಕೋಡಿ ಜಿಲ್ಲೆ ಮಾಡುವ ಬದಲು ಅಲ್ಲಿನ ಜನರಿಗೆ ಅನುಕೂಲವಾಗುವ ಸರ್ಕಾರದ ಎಲ್ಲ ಮುಖ್ಯ ಕಚೇರಿಗಳನ್ನು ನೀಡಲಿ.
-ಅಶೋಕ ಚಂದರಗಿ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ

ಬಳ್ಳಾರಿ ಜಿಲ್ಲೆ ವಿಭಜಿಸುವ ತೀರ್ಮಾನಕ್ಕೆ ಸಚಿವ ಶ್ರೀರಾಮುಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಕೆಲವು ಶಾಸಕರ ಒತ್ತಡಕ್ಕೆ ಮಣಿದು ಸಿಎಂ ಈ ಕುರಿತು ಆದೇಶ ನೀಡಿದ್ದಾರೆ. ಈ ವಿಚಾರ ಇನ್ನೂ ಸಚಿವ ಸಂಪುಟ ಸಭೆ ಮುಂದೆ ಬಂದಿಲ್ಲ. ಸಂಪುಟ ಸಭೆ ಮುಂದೆ ವಿಚಾರ ಬಂದಾಗ ಸಾಧಕ-ಬಾಧಕಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ.
-ಸಿ.ಟಿ.ರವಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next