ಬೆಂಗಳೂರು: ಕುಡಿತಕ್ಕೆ ದಾಸನಾಗಿದ್ದ ಅಣ್ಣನನ್ನು ಸಹೋದರನೇ ಕೊಂದ ಘಟನೆ ಚುಂಚಘಟ್ಟ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ವಿನಯ್ (23) ಕೊಲೆಯಾದ ಯುವಕ. ಈತನನ್ನು ಕೊಲೆಗೈದ ಸಹೋದರ ಸಂಜಯ್ (21) ಎಂಬಾತನನ್ನು ಕೋಣನಕುಂಟೆ ಪೊಲೀಸರು ಬಂದಿಸಿದ್ದಾರೆ.
ಇಬ್ಬರೂ ಸಹೋದರರು ತಾಯಿ ಜಯಂತಿ ಅವರ ಜತೆ ವಾಸವಿದ್ದರು. ಗುರುವಾರ ರಾತ್ರಿ ನಡೆದ ಜಗಳದಲ್ಲಿ ವಿನಯ್ ಕೊಲೆಯಾಗಿದ್ದು, ಸಂಜಯ್ ಜೈಲು ಪಾಲಾಗಿದ್ದಾರೆ. ಹೀಗಾಗಿ, ತಾಯಿಗೆ ದಿಕ್ಕುತೋಚದೆ ಕಂಗಾಲಾಗಿದ್ದಾರೆ. ಹಲವು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದ ಜಯಂತಿ, ವಿನಯ್ ಹಾಗೂ ಸಂಜಯ್ ಜತೆ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಾರೆ.
ಪಿಯುಸಿ ಅರ್ಧಕ್ಕೆ ಮೊಟಕುಗೊಳಿಸಿದ್ದ ವಿನಯ್, ಟಿ.ವಿ ರಿಪೇರಿ ಕೆಲಸ ಮಾಡಿಕೊಂಡಿದ್ದು ಸ್ನೇಹಿತರ ಜತೆಗೂಡಿ ಮದ್ಯ ಸೇವನೆ ಚಟಕ್ಕೆ ಬಿದ್ದಿದ್ದ. ನಿತ್ಯ ಅತಿಯಾಗಿ ಮದ್ಯ ಸೇವಿಸಿ ಬಂದು ತಾಯಿ ಹಾಗೂ ತಮ್ಮನ ಜತೆ ಜಗಳವಾಡುತ್ತಿದ್ದ. ಮತ್ತೂಂದೆಡೆ ಕಳೆದ ಎರಡು ವರ್ಷಗಳಿಂದ ಕಾಲ್‌ಸೆಂಟರ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂಜಯ್, ಮನೆಯ ನಿರ್ವಹಣೆ ಮಾಡುತ್ತಿದ್ದು, ಅಣ್ಣನ ರಂಪಾಟಗಳಿಂದ ಬೇಸತ್ತಿದ್ದ.
ಗುರುವಾರ ರಾತ್ರಿ ಮದ್ಯ ಸೇವಿಸಿ ಬಂದ ವಿನಯ್, ಕ್ಷುಲ್ಲಕ ಕಾರಣಕ್ಕೆ ತಾಯಿ ಜತೆ ಜಗಳ ತೆಗೆದು, ಕರ್ಟನ್ ಹಾಕಲು ಬಳಸುವ ಕರ್ಟನ್‌ನಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಮಧ್ಯಪ್ರವೇಶಿಸಿದ ಸಂಜಯ್, ವಿನಯ್‌ನಿಂದ ಸರಳು ಕಿತ್ತುಕೊಂಡು ಹಲ್ಲೆ ನಡೆಸಿದ್ದಾನೆ.
ಜಗಳ ಕೊನೆಯಾದ ಬಳಿಕ ತಾಯಿ ಜಯಂತಿ ಊಟ ಮಾಡಿ ತಮ್ಮ ಕೊಠಡಿಯಲ್ಲಿ ಮಲಗಿಕೊಂಡಿದ್ದಾರೆ. ಮನೆಯ ಹಾಲ್‌ನಲ್ಲಿಯೇ ಸಹೋದರರಿಬ್ಬರು ಮಲಗಿಕೊಂಡಿದ್ದು, ತಡರಾತ್ರಿ 1.30 ಸುಮಾರಿಗೆ ಸಹೋದರರ ನಡುವೆ ಮತ್ತೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ಆಕ್ರೋಶಗೊಂಡ ಸಂಜಯ್, ಚಾಕು ತೆಗೆದುಕೊಂಡು ವಿನಯ್ ಬೆನ್ನು ಹಾಗೂ ಎದೆಗೆ ಇರಿದಿದ್ದಾನೆ.
ನೋವಿನಿಂದ ವಿನಯ್ ಕಿರುಚಿಕೊಳ್ಳುತ್ತಿದ್ದಂತೆ ತಾಯಿ ಹಾಗೂ ಅಕ್ಕಪಕ್ಕದ ನಿವಾಸಿಗಳು ಓಡಿ ಬಂದಿದ್ದಾರೆ. ತೀವ್ರ ರಕ್ತಸ್ರಾವದಿಂದ ವಿನಯ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪೊಲೀಸರು ಆರೋಪಿ ಸಂಜಯ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.