Advertisement

ಮಳೆಗಾಲಕ್ಕೂ ಮುನ್ನ ಕಿರು ಸೇತುವೆಗೆ ಬೇಕಿದೆ ತಡೆಗೋಡೆ

08:00 PM Apr 24, 2019 | mahesh |

ಬೆಳ್ತಂಗಡಿ: ಮಳೆಗಾಲದಲ್ಲಿ ತಾ|ನಾದ್ಯಂತ ತಡೆಗೋಡೆ ಇಲ್ಲದಿರುವ ಕಿರುಸೇತುವೆ, ಕಾಲುಸಂಕಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಜನರು ಆತಂಕ ಎದುರಿಸಬೇಕಾಗಿದೆ. ದುರ್ಗಮ ಪ್ರದೇಶ ಒಂದೆಡೆಯಾ ದರೆ, ಕಿರು ಸೇತುವೆಗಳು ತಡೆಗೋಡೆ ಯಿಲ್ಲದೆ ಶಿಥಿಲಾವಸ್ಥೆಯಲ್ಲಿರುವುದ ರಿಂದ ಮಳೆಗಾಲ ಸನ್ನಿಹಿತದಲ್ಲಿ ಮುಂಜಾ ಗೃತೆ ವಹಿಸಬೇಕಾಗಿದೆ. ಸ್ವಲ್ಪ ಆಯ ತಪ್ಪಿದರೂ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಪ್ರದೇಶಗಳು ತಾ|ನ ಹಲವೆಡೆ ಇವೆ. ವಿದ್ಯಾರ್ಥಿಗಳ ಸಹಿತ ವೃದ್ಧರು, ಸಾರ್ವಜನಿಕರು, ದ್ವಿಚಕ್ರ ಸವಾರರು ಆತಂಕದಲ್ಲಿ ಸಂಚರಿಸಬೇಕಾಗಿದ್ದು, ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ.

Advertisement

ಗುರಿಂಗಾನದ ಕಿರು ಸೇತುವೆ
ಲಾೖಲ ಗ್ರಾಮದ ಗುರಿಂಗಾನ 2ನೇ ಕ್ರಾಸ್‌ ರಸ್ತೆಯಲ್ಲಿ ಮುಂದೆ ಸಾಗಿದಾಗ ಸಿಗುವ ಕಿರು ಸೇತುವೆ ಶಿಥಿಲಾ ವಸ್ಥೆಯಲ್ಲಿದೆ. ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಪ್ರಮುಖ ಸಂಪರ್ಕವಾಗಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ಸೇತುವೆ ಮುಳುಗಡೆಯಾಗು ತ್ತಿದೆ. ಕಳೆದ ವರ್ಷ ಜಿ.ಪಂ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ ಗ್ರಾ.ಪಂ.ನಿಂದ ನೂತನ ಸೇತುವೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೂ ಈವರೆಗೆ ಯಾವುದೇ ಅನುದಾನ ದೊರೆತಿಲ್ಲ ಎನ್ನುತ್ತಾರೆ ಗ್ರಾ.ಪಂ. ಅಧಿಕಾರಿಗಳು. ರಸ್ತೆಯು ತೀವ್ರ ಹದಗೆಟ್ಟಿದ್ದು, ಡಾಮರು ಕಾಮಗಾರಿಯಾಗದೆ ಜಲ್ಲಿ ಎದ್ದು ಬಂದು, ವಾಹನ ಸವಾರರು ಆಯ ತಪ್ಪಿದರೆ ಕಲ್ಲು-ಬಂಡೆಗಳಿರುವ ಪ್ರಪಾತಕ್ಕೆ ಉರುಳಿ ಅನಾಹುತ ಸಂಭವಿಸುವ ಭೀತಿ ಇದೆ.

ಮಣ್ಣು ಕುಸಿತ
ಇಂದಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಲ್ಲಾಜೆ ಶಾಲೆ ಸಂಪರ್ಕ ರಸ್ತೆಯ ಕಡಂಬಿಲದಲ್ಲಿ ಮಳೆಗಾಲ ಸಮೀಪದಲ್ಲಿ ರಸ್ತೆ ಬದಿ ಮಣ್ಣು ಕುಸಿತವಾಗುತ್ತದೆ. ಹಲವು ಬಾರಿ ದುರಸ್ತಿ ಕೈಗೊಂಡರೂ ಸಂಪರ್ಕ ನಿರ್ಮಿಸುವುದೇ ಸವಾಲಾಗಿದೆ.

ಚಾರ್ಮಾಡಿ ರಸ್ತೆ ದುರ್ಗಮ
ಚಾರ್ಮಾಡಿ ಹೆದ್ದಾರಿಯಯಲ್ಲಿ ಹಲವು ಕಿರು ಸೇತುವೆಗಳಿದ್ದು, ಈ ಬಾರಿ ಮಳೆಗಾಲಕ್ಕೆ ಆತಂಕ ಎದುರಾಗಿದೆ. ಚಾರ್ಮಾಡಿ ಘಾಟಿ 3ನೇ ತಿರುವಲ್ಲಿ ಕಳೆದ ಬಾರಿ ಗುಡ್ಡ ಕುಸಿತಕ್ಕೊಳಗಾಗಿ ಸಂಪರ್ಕ ಸಮಸ್ಯೆಯಾಗಿತ್ತು. ಈ ಬಾರಿಯೂ ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಮತ್ತೆ ಅನಾಹುತ ಎದುರಾಗುವ ಸಾಧ್ಯತೆ ಇದೆ. ಎ. 15ರಂದು ಕೂಲಿ ಕೆಲಸ ನಿರ್ವಹಿಸುತ್ತಿದ್ದ ಮುಂಡಾಜೆ ಗ್ರಾ.ಪಂ.ನ ಚಾಮುಂಡಿ ನಗರ ನಿವಾಸಿಯೊಬ್ಬರು ಕಡಿರುದ್ಯಾವರ ಗ್ರಾಮದ ಉದ್ದದ ಪಲ್ಕೆ ಎಂಬಲ್ಲಿನ ತಡೆಗೋಡೆ ಇಲ್ಲದ ಕಿರು ಸೇತುವೆಯಿಂದ ಬಿದ್ದು ಮೃತಪಟ್ಟಿದ್ದರು. ದುರಂತ ಸಂಭವಿಸುವುದಕ್ಕೂ ಮುನ್ನ ಕಿರು ಸೇತುವೆಗಳಿಗೆ ಸೂಕ್ತ ಕಾಯಕಲ್ಪ ಒದಗಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.

ಅಡಿಕೆ ಮರದ ಕಾಲು ಸಂಕ
ಮುಂಡಾಜೆ ಗ್ರಾಮದ ಸೋಮಂತಡ್ಕದಿಂದ ದಿಡುಪೆಗೆ ಹೋಗುವ ರಸ್ತೆಯಲ್ಲಿ ಸುಮಾರು 9 ಕಿ.ಮೀ. ಸಾಗಿದಾಗ ಮಿತ್ತಬಾಗಿಲು ಗ್ರಾ.ಪಂ. ವ್ಯಾಪ್ತಿಯ ಕುಕ್ಕಾವು ಪ್ರದೇಶವಿದೆ. ಇಲ್ಲಿಂದ ಕೂಡಬೆಟ್ಟು ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಕಕ್ಕೆನೇಜಿ ಸಮೀಪ ಏಳೂವರೆ ಹೊಳೆ ಸಿಗುತ್ತದೆ. ಇಲ್ಲಿನ ನೂರಾರು ಮನೆಯವರು ಈ ಹೊಳೆ ದಾಟಿಕೊಂಡೇ ಮುಖ್ಯರಸ್ತೆಗೆ ಬರಬೇಕು. ಇಲ್ಲಿ ಸೇತುವೆ ನಿರ್ಮಾಣವಾದರೆ ಅದೆಷ್ಟೋ ವರ್ಷಗಳ ಬೇಡಿಕೆ ಈಡೇರಿದಂತಾಗುತ್ತದೆ. ಆದರೂ ಸಂಸದರು, ಶಾಸಕರು, ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಮನಸ್ಸು ಮಾಡಿಲ್ಲ. ಸೇತುವೆ ಇಲ್ಲದಿದ್ದರೂ ಹೊಳೆ ದಾಟಲು ಗ್ರಾಮಸ್ಥರು ಶ್ರಮದಾನದ ಮೂಲಕ ಅಡಿಕೆ ಮರದ ಕಾಲು ಸಂಕವನ್ನು ನಿರ್ಮಿಸಿ ಹೊಳೆ ದಾಟುತ್ತಿದ್ದಾರೆ. ಇಂತಹಾ ಹಲವು ನಿದರ್ಶನಗಳು ತಾಲೂಕಿನ ಬಾಂಜಾರು, ಕುತ್ರೊಟ್ಟು ಸಹಿತ ಹಳ್ಳಿಪ್ರದೇಶದಲ್ಲಿ ಕಾಣಸಿಗುತ್ತವೆ.

Advertisement

ಕಿರು ಸೇತುವೆ ಅಭಿವೃದ್ಧಿಗೆ ಸರಕಾರಕ್ಕೆ ಪ್ರಸ್ತಾವನೆ
ತಾಲೂಕಿನ 45ಕ್ಕೂ ಹೆಚ್ಚು ಕಿರು ಸೇತುವೆಗಳ ಅಭಿವೃದ್ಧಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಕಡಿರುದ್ಯಾವರ, ಕುಕ್ಕೇಡಿ ಗ್ರಾ.ಪಂ.ಗಳ ಕಿರು ಸೇತುವೆ ಅಭಿವೃದ್ಧಿಪಡಿಸಲಾಗಿದೆ. ನೀತಿಸಂಹಿತೆಯಿಂದ ಹಲವು ಕಾಮಗಾರಿ ತಡವಾಗಿದೆ. ಕಿಂಡಿ ಅಣೆಕಟ್ಟು ಅಥವಾ ಸಣ್ಣ ನೀರಾವರಿ ಪ್ರದೇಶಗಳಲ್ಲಿ ಜನವಸತಿ ಇದ್ದಲ್ಲಿ ಸಂಪರ್ಕಕ್ಕೆ ಕಿರು ಸೇತುವೆಗೆ ಅವಕಾಶವಿದೆ. ಆದರೆ ತಡೆಗೋಡೆ ನಿರ್ಮಿಸುವಂತಿಲ್ಲ.
ಉಳಿದಂತೆ ಕಾಮಗಾರಿ ಪ್ರಗತಿಯಲ್ಲಿದೆ.
– ಹರೀಶ್‌ ಪೂಂಜ, ಶಾಸಕರು

- ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next