Advertisement

ಬಂಗಾರದೆಲೆಯ ಮೇಲೆ ತಂಗಾಳಿ ಬೀಸಿ ಬಂತು..

08:51 AM Nov 14, 2020 | mahesh |

ಶರದೃತುವಿನಾಕಾಶ ಬೆಳದಿಂಗಳಾ ಲಾಸ್ಯ
ಮಂದಾಮಿಲನ ಹಾಸ ನೋಡೇ ಸಖೀ ನೀ..
ಈ ಹಾಡನ್ನು ನಾನೇ ಅದೆಷ್ಟು ಬಾರಿ ಹಾಡಿಲ್ಲ. ಆದರೆ ಶರದೃತು ಎಂದರೆ ಚಳಿಗಾಲದ ಆರಂಭ. ನವರಾತ್ರಿ ಬಳಿಕ ಮೆತ್ತಗೆ ಒಡೆಯಲು ಶುರುವಾಗುವ ಚರ್ಮ, ಹಿಮ್ಮಡಿಯಿಂದಾಗಿ ಹಾಸಿಗೆ ಹೊದಿಕೆಗಳಿಗೆ ವ್ಯಾಸಲೀನ್‌, ಬೊರೋಲೀನ್‌ಗಳ ಕಮಟು, ಇಷ್ಟು ಬಿಟ್ಟು ಬೇರಾವ ಭಾವವೂ ನನ್ನ ಮನದಲ್ಲಿ ಸುಳಿಯುತ್ತಿರಲಿಲ್ಲ.

Advertisement

ನಾನು ನಾರ್ದರ್ನ್ ಐರ್ಲೆಂಡ್‌ಗೆ ಬಂದಿದ್ದು ಅಕ್ಟೋಬರ್‌ ತಿಂಗಳ ಕೊನೆಯ ದಿನ. ಮೊದಲ ಮುಂಜಾವು ಕಿಟಕಿ ಪರದೆ ಸರಿಸಿ ನೋಡಿದರೆ ಎಲ್ಲ ಮರಗಳು ಅರಿಶಿನ ಕುಂಕುಮ ಹಿಡಿದು ಸ್ವಾಗತ ನಿನಗೆ ನಮ್ಮೂರಿಗೆ ಎನ್ನುತ್ತಿದ್ದವು. ಆ ಸೊಗಸು ಇನ್ನೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ.

ನಮ್ಮ ಶರದೃತು ಇಲ್ಲಿನ ಆಟಮ್‌ ಕಾಲ. ಚಿಕ್ಕ ಚೈತ್ರದಂತೆ ಭಾಸವಾಗುತ್ತದೆ. ಜೂನ್‌ ತಿಂಗಳಿಂದ ಸೆಪ್ಟಂಬರ್‌ ಮೊದಲ ವಾರದವರೆಗೆ ಇರುವ ಬೇಸಗೆಯ ಬಿಸಿಯನ್ನೆಲ್ಲ ಈ ಎಲೆಗಳೇ ಹೀರಿಕೊಂಡವೇನೋ ಎಂಬಂತಿರುತ್ತದೆ. ಆ ಸೆಕೆ ತಾಳಲಾಗದೆ ಮರದಿಂದ ಹಣ್ಣು ಹಣ್ಣಾಗಿ ಬೀಳುತ್ತಿವೆ ಎಂಬಂತೆ ಸಿಗರ್ಮೊರ್‌, ಮೇಪಲ್, ಮರದ ಎಲೆಗಳು ಬಣ್ಣ ಬದಲಿಸಿಕೊಂಡು ಒಂದೊಂದಾಗಿ ಉದುರಿ ದಾರಿ ಗುಂಟ ಬಣ್ಣದ ಗುಡಾರ ಹಾಸುತ್ತವೆ.

ನಾ ಇರುವ ಪ್ರದೇಶದಲ್ಲಿ ಮರಗಳ ಎಲೆಗಳು ಹಳದಿ ನವಿರುಗೆಂಪು ಬಣ್ಣಕ್ಕೆ ತಿರುಗಿ, ಉದುರುತ್ತವೆ. ಆದರೆ ಯುನೈಟೆಡ್‌ ಕಿಂಗ್‌ಡಂನ ಇನ್ನು ಕೆಲವು ಭಾಗಗಳಲ್ಲಿ ಇವೇ ಜಾತಿಯ ಮರಗಳ ಎಲೆಗಳು ರಕ್ತಗೆಂಪು ಬಣ್ಣ ಹೊದ್ದು ಎಲೆ ಉದುರಿಸುತ್ತಾ ಬರಿದಾಗಿ ಚಳಿಗೆ ನಲುಗಲು ಸಿದ್ಧವಾಗುತ್ತವೆ.

ಫಾಲ್‌ ಸೀಸನ್‌ ಎಂದು ಕರೆಯಲ್ಪಡುವ ಈ ಕಾಲ ಅದೆಷ್ಟೋ ಕವಿಗಳಿಗೆ ಸ್ಫೂರ್ತಿ ಕೊಟ್ಟು ತನ್ನ ಮೇಲೆ ಪದ್ಯ ಬರೆಯಲು ಪ್ರೇರೇಪಿಸಿದೆ. ಎಷ್ಟೇ ಒಳ್ಳೆಯ ಛಾಯಾ ಗ್ರಾಹಕರಾದರೂ ಕಣ್ಣು ಗ್ರಹಿಸುವಷ್ಟು ಚೆಂದದ ಫಾಲ್‌ /ಆಟಮ್‌ ಚಿತ್ರಗಳನ್ನು ಕ್ಲಿಕ್ಕಿಸಲಾರರು. ಆ ನೋಟ ಬರೀ ಆನಂದಿಸುವಂಥದ್ದು. ಒಮ್ಮೊಮ್ಮೆ ಊರಿನಲ್ಲಿ ಬೇಸಗೆಗೆ ಅರಳುವ ಕಕ್ಕೆ ಹೂ, ಒಮ್ಮೊಮ್ಮೆ ಸೇವಂತಿಗೆ, ಕೆಲವೊಮ್ಮೆ ಚಿನ್ನದ ಎಲೆಗಳನ್ನೇ ಮರಕ್ಕೆ ಕಟ್ಟಿದ್ದಾರೇನೋ ಅನ್ನುವ ಭಾವ ಈ ಹಳದಿ ಮರಗಳನ್ನು ನೋಡಿದರೆ ಸ್ಪುರಿಸುತ್ತದೆ. ಇದೊಂದು ಸೊಗಸಿನ ಕಾಲ.

Advertisement


-ಅಮಿತಾ ರವಿಕಿರಣ್‌, ನಾರ್ದರ್ನ್ ಐರ್ಲೆಂಡ್‌

Advertisement

Udayavani is now on Telegram. Click here to join our channel and stay updated with the latest news.

Next