ಬಳ್ಳಾರಿ: ರಾಜ್ಯದ ವಿದ್ಯುತ್ ಜಾಲಕ್ಕೆ 1700 ಮೆ.ವ್ಯಾ. ವಿದ್ಯುತ್ ಪೂರೈಸಬಲ್ಲ ತಾಲೂಕಿನ ಕುಡತಿನಿ ಪಟ್ಟಣದ ಬಳಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ನೀರಿನ ಕೊರತೆ ಎದುರಾಗಿದ್ದು, ಏಪ್ರಿಲ್ ಮಾಸಾಂತ್ಯಕ್ಕೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳಲಿದೆ.
ಪ್ರಸ್ತುತ ಬಿಟಿಪಿಎಸ್ ಕೆರೆಯಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದು, ಸರಾಸರಿ 41 ಡಿಗ್ರಿ ತಾಪಮಾನದಿಂದ ನೀರು ಆವಿಯಾಗಿ ಖಾಲಿಯಾಗುತ್ತಿದೆ. ತುಂಗಭದ್ರಾ ಜಲಾಶಯದಲ್ಲೂ ನೀರಿನ ಸಂಗ್ರಹದ ಕೊರತೆಯಿದ್ದು, ಮುಂದಿನ ಮಳೆಗಾಲದವರೆಗೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಈಗಾಗಲೇ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತ ಹಾಗೂ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮೊದಲ ಘಟಕ ಸ್ಥಗಿತಗೊಳಿಸಲಾಗಿದೆ. ಈ ಹಿಂದೆ ಸ್ಥಗಿತಗೊಂಡಿದ್ದ 500 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ 2ನೇ ಘಟಕ ಕಳೆದ ವಾರದಿಂದ ವಿದ್ಯುತ್ ಉತ್ಪಾದಿಸುತ್ತಿದೆ.
ಪ್ರಸ್ತುತ 2ನೇ ಘಟಕ ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸರಾಸರಿ 474 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ನೀರಿನ ಕೊರತೆಯಿಂದ 700 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಮೂರನೇ ಘಟಕ ಅನೇಕ ದಿನಗಳಿಂದ ಸ್ಥಗಿತಗೊಂಡಿದೆ.
ನೀರು ಬಿಡುಗಡೆ: ಕರ್ನಾಟಕ ಮತ್ತು ಆಂಧ್ರಪ್ರದೇಶದ ಕೆಲ ನಗರಗಳಿಗೆ ತುಂಗಭದ್ರಾ ಜಲಾಶಯದಿಂದ ಕುಡಿವ ನೀರು ಪೂರೈಕೆಗಾಗಿ ಮಂಗಳವಾರದಿಂದ 10 ದಿನ ನೀರು ಹರಿಸಲಾಗುತ್ತಿದೆ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ. ಕಾಲುವೆಯಲ್ಲಿ ಹರಿಯುವ ನೀರನ್ನು ಕಂಪ್ಲಿ ಬಳಿ ಅಳವಡಿಸಿರುವ ಬೃಹತ್ ಪಂಪ್‌ಗ್ಳಿಂದ ಮೇಲೆತ್ತಿ ಬಿಟಿಪಿಎಸ್ ಕೆರೆಗೆ ಸಾಧ್ಯವಾದಷ್ಟು ನೀರು ತುಂಬಿಸುವ ಕಾರ್ಯ ಮಾಡಲಾಗುವುದು ಎಂದು ಬಿಟಿಪಿಎಸ್ ಇಡಿ ಎಸ್.ಮೃತ್ಯುಂಜಯ ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯಕ್ಕೆ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಬಿಟಿಪಿಎಸ್ ನೀರಿನ ಕೊರತೆಯಿಂದಾಗಿ ಮುಂದಿನ ಮುಂಗಾರಿನವರೆಗೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಬೇಸಿಗೆ ಬಿಸಿಲಿನಿಂದ ವಿದ್ಯುತ್ ಬೇಡಿಕೆಯೂ ಹೆಚ್ಚುತ್ತಿದ್ದು, ಬಿಸಿಲ ಪ್ರಖರತೆ ತಣಿಸಲು ವಿದ್ಯುತ್ ಖರೀದಿಯೇ ಕೆಪಿಸಿಎಲ್‌ಗೆ ಉಳಿದ ದಾರಿ ಎನ್ನುವ ವಾತಾವರಣ ಸೃಷ್ಟಿಯಾಗಿದೆ.
ಬಿಟಿಪಿಎಸ್‌ಗೆ ತುಂಗಭದ್ರಾ ಜಲಾಶಯವೇ ಪ್ರಮುಖ ಜಲ ಮೂಲ. ತುಂಗಭದ್ರಾ ಜಲಾಶಯದಿಂದ ಬಿಟಿಪಿಎಸ್‌ಗೆ ವಾರ್ಷಿಕ 2.03 ಟಿಎಂಸಿ ಅಡಿ ನೀರು ನಿಗದಿಯಾಗಿದೆ. ಆದರೆ, ಜಲಾಶಯದಲ್ಲಿ ನೀರಿನ ಕೊರತೆಯಿಂದ ಪ್ರಸಕ್ತ ವರ್ಷ 1 ಟಿಎಂಸಿ ಅಡಿ ನೀರನ್ನೂ ಬಳಸಿಕೊಂಡಿಲ್ಲ.
– ಎಸ್.ಮೃತ್ಯುಂಜಯ, ಇಡಿ, ಬಿಟಿಪಿಎಸ್
– ಎಂ.ಮುರಳಿಕೃಷ್ಣ