Advertisement
ದಕ್ಷಿಣ ಕನ್ನಡ ಜಿಲ್ಲೆಯ ಹಂಪಿ ಎಂದೇ ಪ್ರಸಿದ್ಧಿ ಪಡೆದಿರುವ ಬಳ್ಪದ ಬೀದಿಗುಡ್ಡೆಯಲ್ಲಿರುವ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿದೆ. ಈ ದೇಗುಲ ಸುಮಾರು 1,200 ವರ್ಷಗಳ ಇತಿಹಾಸ ಹೊಂದಿದ್ದು, ಅಲುಪ ಅರಸರು, ಕದಂಬ ಅರಸರು, ವಿಜಯನಗರ ಅರಸರು ಅಲ್ಲದೇ ಕೆಳದಿ ಅರಸರ ಕಾಲದಲ್ಲಿ ಅತೀ ವೈಭವದಲ್ಲಿದ್ದ ಬಗ್ಗೆ ದಾಖಲೆಗಳು ಕಂಡುಬಂದಿವೆ. ಇಲ್ಲಿಪ್ರಮುಖವಾಗಿ ಶಿಲೆಯ ತ್ರಿಶೂಲವೇ ದೇವರಾಗಿದ್ದು, ದಕ್ಷಿಣ ಭಾರತದ ಪ್ರಮುಖ ಶಕ್ತಿ ಕ್ಷೇತ್ರ ಎಂದು ನಂಬಲಾಗಿದೆ.
ಅದ್ಭುತ ಶಿಲಾ ಕೆತ್ತನೆಗಳು ಇಲ್ಲಿ ಇಲ್ಲವಾದರೂ ಕರಾವಳಿ ಮಟ್ಟಿಗೆ ಇದು ಇನ್ನೊಂದು ಹಂಪಿಯೇ ಆಗಿದೆ. ಆದರೆ ಇಲ್ಲಿನ ವಾಸ್ತು ಶೈಲಿ ದಕ್ಷಿಣ ಭಾರತದ ದೇವಸ್ಥಾನಗಳಲ್ಲೇ ಅತ್ಯಂತ ವಿಶಿಷ್ಟ ಎನಿಸಿದೆ. ಇಲ್ಲಿನ ಇನ್ನೊಂದು ವಿಶೇಷ ಎಂದರೆ ತ್ರಿಶೂಲಕ್ಕೆ ಪೂಜೆ ಸಲ್ಲಿಸುವುದು. ಈ ದೇಗುಲವನ್ನು ಕರ್ನಾಟಕ ಸರಕಾರದ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ಇಲಾಖೆಯು ಕೈಗೆತ್ತಿಗೊಂಡು ಅಭಿವೃದ್ಧಿಪಡಿಸಿದೆ.
Related Articles
ಈ ಪುರಾತನ ದೇಗುಲದ ಅಭಿವೃದ್ಧಿ ಆರಂಭವಾದ್ದು 2006 ನವೆಂಬರ್ ವೇಳೆಗೆ. ದೇವಸ್ಥಾನದ ಗರ್ಭಗುಡಿ ಬಿಟ್ಟು ಹೊರ ಸುತ್ತು ಬಿಚ್ಚುವುದು ಹಾಗೂ ಆವರಣ ಗೋಡೆಯನ್ನು ನಿರ್ಮಿಸುವ ಯೋಜನೆಯನ್ನು ಇಲಾಖೆ ಅಧಿಕಾರಿಗಳು ಹಾಕಿದ್ದರು. 10 ವರ್ಷಗಳಿಂದ ಅಭಿವೃದ್ಧಿ ಕಾರ್ಯನಡೆಯುತ್ತಿದ್ದು, ದೇವಸ್ಥಾನದ ಕೆಲಸ ಕಾರ್ಯಗಳು ಮುಗಿದು ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ.
Advertisement
ಭಕ್ತರ ಉತ್ಸಾಹಇದೀಗ ಇತಿಹಾಸ ಪ್ರಸಿದ್ಧ ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಡಿ. 9ರಿಂದ 14ರ ವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಭಕ್ತರ ಸಭೆ ನಡೆದು ಭರದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಗ್ರಾಮದ ಭಕ್ತರು ಈ ಪುರಾತನ ದೇಗುಲ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವೀಕ್ಷಿಸಲು ಹಾಗೂ ತಮ್ಮೂರಿನ ಅತ್ಯಂತ ಪುರಾತನ ದೇವಸ್ಥಾನ, ಶಕ್ತಿ ಕ್ಷೇತ್ರ ಮತ್ತೆ ವೈಭವದ ಸ್ಥಿತಿಗೆ ಬರುವುದನ್ನು ಕಾಣಲು ಕಾತುರರಾಗಿದ್ದರೆ. ಈ ಕಾರಣದಿಂದ ನಿರಂತರ ಕೆಲಸ ಕಾರ್ಯಗಳಲ್ಲಿ ತಡರಾತ್ರಿವರೆಗೂ ತೊಡಗಿಸಿಕೊಂಡಿದ್ದಾರೆ. ವಿಶಿಷ್ಟ ಶೈಲಿ
ವಿಶಿಷ್ಟ ಶೈಲಿಯ ಶಿಲಾಮಯ ಶ್ರೀ ತ್ರಿಶೂಲಿನಿ ದೇವಸ್ಥಾನ ಒಂದು ಕಾಲದಲ್ಲಿ ಶಕ್ತಿ ಕ್ಷೇತ್ರವಾಗಿ ಅತ್ಯಂತ ಪ್ರಸಿದ್ಧಿ ಪಡೆದಿತ್ತು. ಇದೀಗ ಮತ್ತೆ ಅದೇ ವೈಭವ ತಳೆಯಲು ಸಿದ್ಧವಾಗುತ್ತಿದೆ. ಇದು ಸಂತಸದ ಕ್ಷಣ.
– ಸದಾನಂದ ರೈ ಅರ್ಗುಡಿ,
ಅಧ್ಯಕ್ಷ, ಬ್ರಹ್ಮಕಲಶೋತ್ಸವ ಸಮಿತಿ ಬ್ರಹ್ಮಕಲಶಕ್ಕೆ ಸಿದ್ಧ
ಪುರಾತನ ದೇಗುಲ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶಕ್ಕೆ ಸಿದ್ಧವಾಗಿದೆ. ಭಕ್ತರು ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ಹಗಲಿರುಳು ತೊಡಗಿಸಿಕೊಂಡಿದ್ದಾರೆ. ಸರ್ವರ ಸಹಕಾರ ಪಡೆದು ಸಂಭ್ರಮದಿಂದ ಸಾಂಗವಾಗಿ ಬ್ರಹ್ಮಕಲಶೋತ್ಸವ ನೆರವೇರಲಿದೆ.
– ಶ್ರೀವತ್ಸ,
ಬ್ರಹ್ಮಕಲಶೋತ್ಸವ ಸಮಿತಿ