Advertisement
ಹೃದಯದೊಡತಿಯೇ… ಇಂದು ವೈದ್ಯರ ಬಳಿಗೆ ಹೋಗಿದ್ದೆ. ಕಾರಣ ಸ್ಪಷ್ಟ; ದೇಹ ಮುನಿದುಕೊಂಡಿತ್ತು. ಮನಸ್ಸಿಗೆ ಮಂಕು ಕವಿದಿತ್ತು. ದೇಹಕ್ಕೇನೋ ಔಷಧಿ ನೀಡಿ, ಚಿಕಿತ್ಸೆ ಒದಗಿಸಿ ಗುಣಪಡಿಸಿದೆ. ಆದರೆ ಮನಸ್ಸಿಗೆ…? ಅದಕ್ಕೆ ನೀನೇ ಬೇಕು. ಎಷ್ಟು ಪರಿ ಪರಿಯಾಗಿ ಪ್ರಾರ್ಥಿಸಿಕೊಂಡರೂ ಅದು ಒಪ್ಪಿಕೊಳ್ಳುತ್ತಿಲ್ಲ. ನೀನೇ ಬೇಕೆಂದು ಹಠ ಹಿಡಿದು ಕುಳಿತುಬಿಟ್ಟಿದೆ. ಏನು ಮಾಡಲಿ? ನೀ ಬಂದು, ಮನಸಿಗೆ ಮದ್ದು ನೀಡಿ, ಪುನಃ ಚೈತನ್ಯದಿಂದಿರಲು ಸಹಕರಿಸು. ಅಲ್ಲಿಯವರೆಗೂ ಸಹನೆ ಕಳೆದುಕೊಳ್ಳದೆ ಕಾಯುತ್ತೇನೆ; ನಿನಗಾಗಿ, ನಿನ್ನ ಬರುವಿಕೆಗಾಗಿ!
ನನಗೆ ನೀ ಸ್ನೇಹಿತೆಯಾ…
ಏನಾಗಬೇಕು ಕಾಣೆ, ಹೇಗೆ ತಿಳಿಯಲಿ ನಾ… ನೀವು ಹುಡುಗಿಯರೇ ಹೀಗೆ, ಒಲಿದ ಹುಡುಗನ ಬಗ್ಗೆ ಒಂಚೂರೂ ಯೋಚಿಸುವುದಿಲ್ಲ. ಅವನ ಆಸೆ- ಆಕಾಂಕ್ಷೆಗಳ ಬಗ್ಗೆ ಕೇಳುವುದಿಲ್ಲ. ಅವನ ಕನಸು, ಬಯಕೆಗಳನ್ನು ಗೌರವಿಸುವುದಿಲ್ಲ. ಅವನಿಷ್ಟಗಳನ್ನು ಪರಿಗಣಿಸುವುದಿಲ್ಲ. ನಿಮ್ಮದೇ ಹಠ. ಗೆಲ್ಲಬೇಕೆಂಬ ಉದ್ದೇಶದಿಂದ, ಅವನ ಬೇಕು ಬೇಡಗಳನ್ನು ಗಮನಿಸದೆ ಮನಸ್ಸಿಗೆ ನೋವುಂಟು ಮಾಡುತ್ತೀರಿ.
Related Articles
Advertisement
ಇಷ್ಟಾದರೂ ನಿಮಗೆ ಸಮಾಧಾನವಿಲ್ಲ. ಅವನ ಯಾವುದೋ ಮಾತಿಗೆ ವಿನಾಕಾರಣ ಕೋಪಗೊಂಡು ಮಾತು ಬಿಡುತ್ತೀರಿ. ಆಗಲೇ ಅವನಿಗೆ ಆಕಾಶ ಕಳಚಿಬಿದ್ದಂತಾಗುವುದು. ಒಲಿದವಳು ಮುನಿದಾಗ ಆಗುವ ಯಾತನೆ ಅಷ್ಟಿಷ್ಟಲ್ಲ. ನನ್ನುಸಿರೇ… ನೀನು ಸಿಟ್ಟಾದಾಗ ನನಗಾದ ಆಘಾತವೂ ಹೇಳಲಾರದಷ್ಟು. ಜಗತ್ತೇ ಶೂನ್ಯವಾದಂತೆ ಭಾಸವಾಗಿತ್ತು.
ಜೀವನಕ್ಕೆ ಬೇರೆ ಉಪಾಯಗಳಿರಲಿಲ್ಲ. ನೀನೇ ಪ್ರಾರಂಭ, ನೀನೇ ಅಂತ್ಯ ಅಂದುಕೊಂಡವನಿಗೆ ಇದೊಂದು ಧರ್ಮ ಸಂಕಟದ ಸಂದರ್ಭ. ಸತ್ಯವನ್ನೇ ಹೇಳುತ್ತಿದ್ದೇನೆ, ಎಲ್ಲ ಹುಡುಗಿಯರು ತಮ್ಮ ತಮ್ಮ ಗೆಳೆಯನನ್ನು ಅರ್ಥ ಮಾಡಿಕೊಂಡಾಗಲೇ ಪ್ರೀತಿಯ ಪಯಣ ನಿರಾತಂಕವಾಗಿ ಮುಂದೆ ಸಾಗುವುದು. ನಿನ್ನ ಮೇಲೆ ನನಗೆ ಯಾವುದೇ ದೂರುಗಳಿಲ್ಲ. ನನ್ನೆದೆಯ ಮಂದಿರದ ದೇವತೆ ನೀನು.
ಅನುಗಾಲವೂ ನಿನ್ನ ಭಕ್ತ ನಾನು. ದೇವರೇ ಕೋಪಿಸಿಕೊಂಡರೆ ಭಕ್ತನಿಗೆ ಉಳಿಗಾಲವೆಲ್ಲಿ? ನೀನು ಎದುರಿಗೆ ಬಂದಾಗಲೆಲ್ಲ ಏನೇನೋ ಹೇಳಬೇಕು, ಮನದ ಭಾವ ಬಿಚ್ಚಿಡಬೇಕು, ಎದೆಯ ಅಳಲನ್ನು ತೋಡಿಕೊಳ್ಳಬೇಕು ಎಂದೆಲ್ಲಾ ಅನಿಸುತ್ತದೆ. ಆದರೆ ನೀನು ಎದುರಿಗೆ ಬಂದರೆ ಮಾತ್ರ ಮಾತುಗಳು ಗಂಟಲಿಂದೀಚೆಗೆ ಹೊರಬರಲು ಹಠ ಹೂಡುತ್ತವೆ.
ಅದಕ್ಕೇ ಸಾಲು ಸಾಲು ಪತ್ರಗಳ ಮಹಾಪೂರವನ್ನು ನಿನ್ನ ಬಳಿ ನಾನು ತೇಲಿಬಿಡುವುದು. ಮುಗಿಯದ ರಾತ್ರಿಗೆ ಮಾತುಗಳ ಜೋಗುಳ ಹಾಡಿ, ಕನಸುಗಳ ಚುಕ್ಕು ತಟ್ಟಿ ಮಲಗಿಸಲು ಯಾವಾಗ ಬರಿರ್ತಿಯಾ?
ಇತಿ ನಿನ್ನವನು* ನಾಗೇಶ್ ಜೆ. ನಾಯಕ, ಬೈಲಹೊಂಗಲ