Advertisement

ಬಾಲಕನ ತಲೆಯನ್ನೇ ಛಿದ್ರಗೊಳಿಸಿದ ಸಿಡಿಮದ್ದು!

11:40 AM Jan 16, 2018 | Team Udayavani |

ಬೆಂಗಳೂರು: ಸೆಬಾಸ್ಟಿಯನ್‌ ಫೆಸ್ಟ್‌ ಉತ್ಸವದಲ್ಲಿ ಪಾಲ್ಗೊಂಡಿದ್ದ 12 ವರ್ಷದ ಬಾಲಕನ ತಲೆ ಮೇಲೆ ಪಟಾಕಿ ಸಿಡಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಹಲಸೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿರುವ ಲೂದ್‌ ಚರ್ಚ್‌ ಆವರಣದಲ್ಲಿ ಭಾನುವಾರ ರಾತ್ರಿ ನಡೆದಿದೆ. ತ್ಯಾಗರಾಜನಗರದ ನಿವಾಸಿ ಧನುಷ್‌ (12) ಮೃತ ಬಾಲಕ.

Advertisement

ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಚರ್ಚ್‌ ಆವರಣದಲ್ಲಿ ನಡೆದ ಸಿಡಿಮದ್ದು ಪ್ರದರ್ಶನಕ್ಕೆ ಪೋಷಕರ ಜತೆ ಹೋಗಿದ್ದ ಧನುಷ್‌ ತಲೆ ಮೇಲೆ ರಾಕೆಟ್‌ ಸಿಡಿದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಚರ್ಚ್‌ ಹಾಗೂ ಆಯೋಜಕರಾದ ಸೇಂಟ್‌ ಸೆಬಾಸ್ಟಿಯನ್‌ ಅಸೋಸಿಯೇಷನ್‌ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಏನಿದು ಘಟನೆ?: ಭಾನುವಾರ ಲೂದ್‌ì ಚರ್ಚ್‌ನಲ್ಲಿ ಸೇಂಟ್‌ ಸೆಬಾಸ್ಟಿಯನ್‌ ಅಸೋಸಿಯೇಷನ್‌ ಸಿಡಿಮದ್ದು ಪ್ರದರ್ಶನ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಕನಕಪುರ ಮೂಲದ ಉದ್ಯಮಿ ಸುರೇಶ್‌ ಕುಮಾರ್‌ ಹಾಗೂ ಉಷಾ ದಂಪತಿ ಪುತ್ರ, ಡೆಲ್ಲಿ ಪಬ್ಲಿಕ್‌ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಧನುಷ್‌, ಪೋಷಕರ ಜತೆ ಹೋಗಿದ್ದ.

ಪ್ರದರ್ಶನ ವೀಕ್ಷಿಸುವಾಗ ಮಲ್ಟಿರಾಕೆಟ್‌ಗಳ ಪೈಕಿ ಒಂದು ರಾಕೆಟ್‌ ನೇರವಾಗಿ ಧನುಷ್‌ ತಲೆ ಮೇಲೆ ಬಿದ್ದು ಅಲ್ಲೇ ಸಿಡಿದಿದೆ. ಪರಿಣಾಮ ತಲೆಯ ಹಿಂಭಾಗ ಛಿದ್ರವಾಗಿದ್ದು, ಮೆದುಳು ಹೊರಬಂದಿದೆ. ತೀವ್ರ ರಕ್ತಸ್ರಾವದಿಂದ ಧನುಷ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಲೂದ್‌ì ಚರ್ಚ್‌ನ ಹಿರಿಯ ಅಧಿಕಾರಿಗಳು, “ನಾವು ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದಿರುವುದನ್ನು ಖಾತರಿ ಪಡಿಸಿಕೊಂಡೇ ಕಾರ್ಯಕ್ರಮ ನಡೆಸಲು ಅನುಮತಿ ಕೊಟ್ಟಿದ್ದೇವೆ. ಘಟನೆಗೂ ನಮಗೂ ಯವುದೇ ಸಂಬಂಧವಿಲ್ಲ,’ ಎಂದು ತಿಳಿಸಿದ್ದಾರೆ.

Advertisement

ಮುನ್ನೆಚ್ಚರಿಕೆ ಕೈಗೊಂಡಿರಲಿಲ್ಲ: ಚರ್ಚ್‌ನಲ್ಲಿ ಪ್ರತಿ ವರ್ಷ ಏರ್ಪಡಿಸುವ ಸಿಡಿಮದ್ದು ಪ್ರದರ್ಶನದಿಂದ ಸ್ಥಳೀಯ ಸಾವಿರಾರು ನಿವಾಸಿಗಳು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ನಿಯಮದಂತೆ ಪೊಲೀಸರ ಅನುಮತಿ ಪಡೆದಿದ್ದಾರೆಯೇ ಹೊರತು ಬೇರೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಅಗ್ನಿಶಾಮಕ ವಾಹನ, ಪ್ರಥಮ ಚಿಕಿತ್ಸೆ ಘಟಕ ಅಥವಾ ಆ್ಯಂಬುಲೆನ್ಸ್‌ ಹಾಗೂ ಭದ್ರತೆಗೆ ಪೊಲೀಸರನ್ನು ನಿಯೋಜಿಸಿಕೊಂಡಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಸಿಡಿಮದ್ದು ಪ್ರದರ್ಶನದಿಂದ ತೊಂದರೆಯಾಗುವ ಕುರಿತು ಸ್ಥಳೀಯ ನಿವಾಸಿಗಳು ಚರ್ಚ್‌ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಆದರೆ, “ವರ್ಷದಲ್ಲಿ ಒಮ್ಮೆ’ ಎಂದು ಸಬೂಬು ನೀಡಿದ ಆಡಳಿತ ಮಂಡಳಿ, ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೆ ಪ್ರದರ್ಶನ ಆಯೋಜಿಸಿತ್ತು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅಷ್ಟು ದೊಡ್ಡ ಪಟಾಕಿ ಪ್ರದರ್ಶನ ಸ್ಥಳದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲ. ಆ್ಯಂಬುಲೆನ್ಸ್‌, ಅಗ್ನಿಶಾಮಕ ಸಿಬ್ಬಂದಿ ಹಾಗೂ ಕನಿಷ್ಠ ಪೊಲೀಸ್‌ ಸಿಬ್ಬಂದಿಯನ್ನೂ ನಿಯೋಜಿಸಿರಲಿಲ್ಲ. ಬೇಜವಾಬ್ದಾರಿಯಿಂದ ಕಾರ್ಯಕ್ರಮ ಆಯೋಜಿಸಿದ ಚರ್ಚ್‌ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಕಾರ್ಯಕ್ರಮ ರದ್ದು ಪಡಿಸಬೇಕು.
-ಅನಿಲ್‌ ಕುಮಾರ್‌, ಮೃತ ಧನುಷ್‌ ಸಂಬಂಧಿ

Advertisement

Udayavani is now on Telegram. Click here to join our channel and stay updated with the latest news.

Next