ಚಿತ್ರ: ದಿ ಐಲ್ಯಾಂಡ್ ಆನ್ ದಿ ಬರ್ಡ್ ಸ್ಟ್ರೀಟ್ (1997)
ಅವಧಿ: 107 ನಿಮಿಷ
ನಿರ್ದೇಶಕ: ಸಾರೆನ್ ಕ್ರಾಗ್ ಜಾಕೋಬ್ಸನ್
ಎರಡನೇ ಮಹಾಯುದ್ಧದ ಕಾಲ. ಬಾಂಬು, ಅಮಾನವೀಯ ಮುಖಗಳ ನಡುವೆ ಜೀವ ಹಿಡಿದುಕೊಂಡ ಪುಟಾಣಿ ಆತ. 12 ವರ್ಷದ ಅಲೆಕ್ಸ್, ತಂದೆ, ಚಿಕ್ಕಪ್ಪ ಹಾಗೂ ಸಾಕು ಇಲಿಯೊಂದಿಗೆ ವಾರ್ಸಾದಲ್ಲಿ ಜೀವಿಸುತ್ತಿರುತ್ತಾನೆ. ಇದ್ದಕ್ಕಿದ್ದಂತೆ ನಾಝಿ ಸೈನಿಕರು, ವಾರ್ಸಾ ನಗರಕ್ಕೆ ನುಗ್ಗಿ, ಯಹೂದಿಗಳನ್ನು ಗುಲಾಮರನ್ನಾಗಿಸಲು, ಅವರನ್ನು ಬೇರೊಂದು ತಾಣಕ್ಕೆ ಕರೆದೊಯ್ಯಲು ಒತ್ತಡ ಹಾಕುತ್ತಾರೆ. ಅಲೆಕ್ಸ್ ಹೇಗೋ, ನಾಝಿಗಳ ಕೈಯಿಂದ ತಪ್ಪಿಸಿಕೊಳ್ಳುತ್ತಾನೆ. ತಾನು ವಾಸವಿರುವ ಕೊಳೆಗೇರಿಯಲ್ಲೇ ಅಡಗಿ ಕೂರುತ್ತಾನೆ.
ಆದರೆ, ಈ ಪುಟ್ಟ ಯಹೂದಿಯ ಉಸಿರಾಟ ನಾಝಿಗಳ ಕಿವಿಗೆ ಬೀಳುತ್ತೆ. ಅವನು ಅಡಗಿ ಕುಳಿತ ಜಾಗಕ್ಕೆ ಬಾಂಬ್ ಅನ್ನು ಸ್ಫೋಟಿಸುತ್ತಾರೆ. ಅಷ್ಟರಲ್ಲೇ, ಅಲೆಕ್ಸ್ ಉಪಾಯದಿಂದ ತಪ್ಪಿಸಿಕೊಳ್ಳುತ್ತಾನೆ. ವಾರಗಟ್ಟಲೆ ನೆಲದಡಿಯಲ್ಲಿ, ಭೂತ ಬಂಗಲೆಯಲ್ಲಿ ಕಳೆಯುತ್ತಾನೆ. ಅತ್ತ ಮಗನನ್ನು ಹುಡುಕುತ್ತಾ ತಂದೆ, ಮರಳಿ ಬರುತ್ತಾನೆ. ಮಗನ ಹುಡುಕಾಟದಲ್ಲಿಯೇ ತಂದೆಯೂ ಸಾಕಷ್ಟು ಚಿತ್ರಹಿಂಸೆಗೆ ಗುರಿಯಾಗುತ್ತಾನೆ. ನಂತರ ಅಲೆಕ್ಸ್ ಅಪ್ಪನ ಜತೆಗೂಡಿ, ಫ್ರೆಡ್ಡಿ ಮತ್ತು ಹೆನ್ರಿಕ್ ಎಂಬ ಇಬ್ಬರು ಸ್ನೇಹಿತರ ನೆರವಿನಿಂದ ರಹಸ್ಯ ಸುರಂಗವನ್ನು ಹಾದು, ವಾರ್ಸಾ ನಗರವನ್ನೇ ಬಿಡುತ್ತಾನೆ. ಅಲೆಕ್ಸ್‌ನ ಎಸ್ಕೇಪ್ ಹಾದಿಯ ಪ್ರತಿ ಹಜ್ಜೆಯಲ್ಲೂ ಸಸ್ಪೆನ್ಸ್ ತುಂಬಿರುವ ಈ ಚಿತ್ರ, ಇಸ್ರೇಲಿ ಹುಡುಗನ ನೈಜ ಕತೆಯನ್ನು ಆಧರಿಸಿದೆ.