Advertisement
ಪ್ರಧಾನಿ ಮೋದಿ ಲಕ್ಷದ್ವೀಪದ ಸಮುದ್ರ ಕಿನಾರೆ ಯಲ್ಲಿ ನಡೆದಾಡಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ತಮ್ಮ ಹಾಗೂ ಲಕ್ಷದ್ವೀಪದ ಸೌಂದರ್ಯದ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದರು. ಇದನ್ನು ಮಾಲ್ದೀವ್ಸ್‌ನ ಕೆಲವು ಸಚಿವರು ಟೀಕಿಸಿದ್ದರಿಂದ “ಮಾಲ್ದೀವ್ಸ್ ಬಹಿಷ್ಕರಿಸಿ. ಲಕ್ಷದ್ವೀಪ ನೋಡಿ’ ಎನ್ನುವ ಅಭಿಯಾನ ಆರಂಭವಾಗಿತ್ತು.ಇದರ ಪರಿಣಾಮವಾಗಿ ಲಕ್ಷದ್ವೀಪದ ಕುರಿತು ಗೂಗಲ್‌ನಲ್ಲಿ ಹುಡುಕಾಡಿದವರ ಸಂಖ್ಯೆಯಷ್ಟೇ ಹೆಚ್ಚಲಿಲ್ಲ; ಲಕ್ಷದ್ವೀಪ ಪ್ರವಾಸೋದ್ಯಮ ಕಚೇರಿಗೆ ಪ್ರವಾಸ ಪ್ಯಾಕೇಜ್ ಕುರಿತು ಬರುತ್ತಿರುವ ಕರೆಗಳಿಗೆ ಉತ್ತರಿಸುವುದೇ ಪ್ರಯಾಸ ಎಂಬಂತಾಗಿದೆ. ಪ್ರಧಾನಿ ಭೇಟಿ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನಕ್ಕೆ ಮುನ್ನ ಲಕ್ಷದ್ವೀಪ ಪ್ರವಾಸದ ಪ್ರವಾಸದ ನೀತಿ ನಿಯಮಗಳು, ಪ್ಯಾಕೇಜ್ ಮತ್ತಿತರ ವಿವರಗಳಿಗೆ ಸಂಬಂಧಿಸಿ ದಿನಕ್ಕೆ 10ರಿಂದ 20 ಕರೆಗಳು ಬರುತ್ತಿದ್ದವು. ಅದು ಈಗ ಹಲವಾರು ಪಟ್ಟು ಹೆಚ್ಚಾಗಿದೆ.
ಲಕ್ಷದ್ವೀಪದ ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕರಾದ ಅಬ್ದುಲ್ ಜಲೀಲ್ “ಉದಯವಾಣಿ’ ಯೊಂದಿಗೆ ಮಾತನಾಡಿ, “ನಿಜ, ಮೋದಿ ಪ್ರವಾಸದ ಬಳಿಕ ಬೇಡಿಕೆ ಹೆಚ್ಚಾಗಿದೆ. ಹಿಂದೆ 10ರಿಂದ 20 ವಿಚಾರಣೆಗಳು ಬರು ತ್ತಿದ್ದವು. ಆದರೆ ಈಗ ದಿನಕ್ಕೆ 250ರಿಂದ 300ಕ್ಕಿಂತಲೂ ಕರೆಗಳು ಬರತೊಡಗಿವೆ. ಜತೆಗೆ ಬುಕ್ಕಿಂಗ್ ಪ್ರಮಾಣವೂ ಹೆಚ್ಚಾಗಿದೆ’ ಎಂದು ಹೇಳಿದರು. “ಇದೊಂದು ಒಳ್ಳೆಯ ಟ್ರೆಂಡ್. ದೇಶೀಯ ಪ್ರವಾಸೋದ್ಯಮ ಬೆಳೆಯಲು ಅವಕಾಶ. ಇಲಾಖೆಯೂ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ’ ಎಂದರು. ಈ ಬೆಳವಣಿಗೆಯನ್ನು ನಿರೀಕ್ಷಿಸಿದ್ದಿರಾ ಎಂಬ ಪ್ರಶ್ನೆಗೆ, “ಬೇಡಿಕೆ ಹೆಚ್ಚುವ ನಿರೀಕ್ಷೆಯಿತ್ತು. ಆದರೆ ಇದು ಊಹಿಸಿದ್ದಕ್ಕಿಂತಲೂ ಹೆಚ್ಚಾಗಿದೆ’ ಎಂದವರು ಅಲ್ಲಿನ ಪತ್ರಕರ್ತ ಅಬ್ದುಲ್ ಸಲಾಂ.
Related Articles
“ಹಗಲೆಲ್ಲ ದ್ವೀಪದಲ್ಲಿದ್ದು, ರಾತ್ರಿ ಕ್ರೂಸ್ ಶಿಪ್‌ನಲ್ಲಿ ತಂಗು ವುದು ಸೂಕ್ತ. ಆಗ ಒಂದೇ ಸಮನೆ ಮೂಲ ಸೌಕರ್ಯದ ಕೊರತೆ ಉದ್ಭವಿಸದು. ಜತೆಗೆ ಬಹಳ ಪ್ರಮುಖವಾಗಿ ಲಕ್ಷ ದ್ವೀಪಕ್ಕೆ ವಿಮಾನ ಹಾಗೂ ಹಡಗುಗಳ ಸಂಪರ್ಕ ಸಾಧ್ಯತೆ ಯನ್ನು ಹೆಚ್ಚಿಸಬೇಕು. ಅದೇ ಮೊದಲು ಆಗ ಬೇಕಾದ ಕೆಲಸ’ ಎಂದರು ಅಬ್ದುಲ್ ಸಲಾಂ. 2 ದಿನಗಳಿಂದ ಗೂಗಲ್ ಟ್ರಂಡ್‌ನಲ್ಲಿ ಲಕ್ಷದ್ವೀಪ ಅಗ್ರಸ್ಥಾನದಲ್ಲಿದೆ. ಜತೆಗೆ ಪ್ರವಾಸ ಶೋಧ ಸಂಬಂಧಿ ಜಾಲತಾಣಗಳಲ್ಲಿ ಲಕ್ಷದ್ವೀಪದ ಬಗ್ಗೆ ಶೋಧ 3 ಸಾವಿರಕ್ಕಿಂತಲೂ ಅಧಿಕ ಪಟ್ಟು ಹೆಚ್ಚಿದೆ. ಪುಟ್ಟಪುಟ್ಟ ದ್ವೀಪಗಳೇ ಲಕ್ಷದ್ವೀಪದ ಸೊಗಸು. ಅದಕ್ಕೆ ಧಕ್ಕೆಯಾಗಬಾರದು ಹಾಗೂ ಸಿಕ್ಕಾಪಟ್ಟೆ ಪ್ರವಾಸಿಗರಿಂದ ಜನ ಜಂಗುಳಿಯಂತಾಗಿ ಉಳಿದ ಪ್ರವಾಸಿ ತಾಣಗಳಂತೆ ಆಗುತ್ತದೋ ಎಂಬ ಭಯವೂ ಸ್ಥಳೀಯರಲ್ಲಿ ಮೂಡಿದೆ.
Advertisement
ಕೊಚ್ಚಿಯೊಂದೇ ಮಾರ್ಗಪ್ರಸ್ತುತ ಕೊಚ್ಚಿ ಮೂಲಕವೇ ಲಕ್ಷದ್ವೀಪ ತಲುಪಬೇಕಿದೆ. ದಿನವೂ ನಾಲ್ಕು ಹಡಗುಗಳು ಹಾಗೂ ಒಂದು ವಿಮಾನ ಸೌಕರ್ಯವಿದೆ. ವಿಮಾನದಲ್ಲಿ ಸುಮಾರು ಒಂದರಿಂದ ಒಂದೂವರೆ ತಾಸು ತಗಲಿದರೆ, ಹವಾನಿಯಂತ್ರಿತ ವ್ಯವಸ್ಥೆಯಿಂದ ಕೂಡಿರುವ ಹಡಗಿನಲ್ಲಿ ಸುಮಾರು 14ರಿಂದ 18 ತಾಸುಗಳ ಪ್ರಯಾಣವಿದೆ. ಅಗತ್ತಿ ಹಾಗೂ ಬಂಗಾರಂ ದ್ವೀಪಗಳಿಗೆ ಕೊಚ್ಚಿಯಿಂದ ನೇರವಾದ ವಿಮಾನ ಸೌಕರ್ಯವಿದೆ. ಅಗತ್ತಿಯಲ್ಲಿ ಮಾತ್ರ ವಿಮಾನ ನಿಲ್ದಾಣವಿದೆ. ಲಕ್ಷದ್ವೀಪಕ್ಕೆ ಪ್ರವಾಸಕ್ಕೆ ತೆರಳುವವರು ಕೊಚ್ಚಿಯಲ್ಲಿರುವ ಲಕ್ಷದ್ವೀಪದ ಆಡಳಿತ ಕಚೇರಿಯಿಂದ ಸೂಕ್ತ ಪ್ರವೇಶ ಪತ್ರವನ್ನು ಪಡೆದು ಪ್ರಯಾಣಿಸಬೇಕು. -ಅರವಿಂದ ನಾವಡ