Advertisement

ತ್ಯಾಮಗೊಂಡ್ಲು ಪ.ಪಂ.ಗಾಗಿ ಚುನಾವಣೆಗಳ ಬಹಿಷ್ಕಾರ

05:59 PM May 10, 2022 | Team Udayavani |

ನೆಲಮಂಗಲ: ಪಟ್ಟಣ ಪಂಚಾಯಿತಿ ಆಗುವ ಅರ್ಹತೆ ಹೊಂದಿರುವ ತ್ಯಾಮಗೊಂಡ್ಲು ಗ್ರಾಪಂ ಅನ್ನು ಶತಾಯಗತಾಯ ಪಟ್ಟಣ ಪಂಚಾಯಿತಿಯ ನ್ನಾಗಿಸುವಲ್ಲಿ ಗ್ರಾಮಸ್ಥರು ಒಗ್ಗಟ್ಟಿನ ಮಂತ್ರ ಜಪಿಸುತ್ತ ಈ ಬಾರಿ ಘೋಷಣೆಯಾಗಿರುವ ಚುನಾವಣೆಗೆ ಯಾರೂ ನಾಮಪತ್ರ ಸಲ್ಲಿಸಬಾರದು ಎಂದು ತೀರ್ಮಾನಿಸಿದ್ದಾರೆ.

Advertisement

ತಾಲೂಕಿನ ತ್ಯಾಮಗೊಂಡ್ಲು ಗ್ರಾ.ಪಂಗೆ 2020 ಡಿಸೆಂಬರ್‌ನ ಸಾರ್ವತ್ರಿಕ ಗ್ರಾ.ಪಂ ಚುನಾವಣೆ, 2021 ಮಾರ್ಚ್‌ನ ಉಪ ಚುನಾವಣೆ ಸೇರಿದಂತೆ ಎರಡೂ ಚುನಾಚಣೆಯಲ್ಲೂ ಒಂದು ನಾಮಪತ್ರ ಸಲ್ಲಿಸದೇ ಬಹಿಷ್ಕಾರ ಮಾಡಿದ್ದರು. ಈ ಬಾರಿ 2022ರ ಉಪ ಚುನಾವಣೆಯೂ ಮೇ 5ರಿಂದ 10 ನಾಮಪತ್ರ ಸಲ್ಲಿಕೆ ಅವಕಾಶ ನೀಡಿದ್ದು, 20ರಂದು ಮತದಾನದ ದಿನಾಂಕ ಎಂದು ಡೀಸಿ ಚುನಾವಣೆ ವೇಳಾಪಟ್ಟಿಯನ್ನು ಘೋಷಿಸಿದ್ದಾರೆ. ಆದರೆ, ಗ್ರಾಮಸ್ಥರು ಈ ಬಾರಿಯೂ ಯಾರೂ ನಾಮಪತ್ರ ಸಲ್ಲಿಸದೆ ಚುನಾವಣೆ ಬಹಿಷ್ಕಾರ ಮಾಡಿ, ಪ.ಪಂಗಾಗಿ ಹೋರಾಟವನ್ನು ಮುಂದುವರಿಸಲು ತೀರ್ಮಾನಿಸಿದ್ದಾರೆ. ಇದೂವರೆಗೂ ನಾಮಪತ್ರವನ್ನು ಯಾರೂ ಸಲ್ಲಿಸಿಲ್ಲ.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ: ಬೆಂ. ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸುವ ವಿಚಾರವಾಗಿ ಡೀಸಿ, ಏ.28ರಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ, ತ್ಯಾಮಗೊಂಡ್ಲು ಗ್ರಾಮದ ಸುತ್ತಲಿನ ಮಣ್ಣೆ ಗ್ರಾಪಂನ ಬೀರಗೊಂಡನಹಳ್ಳಿ, ತಿಪ್ಪಶೆಟ್ಟಹಳ್ಳಿ, ತಾವರೆಕೆರೆ ಗ್ರಾಮಗಳು, ಕಳಲುಘಟ್ಟ ಗ್ರಾಪಂನ ಗುಂಡೇನಹಳ್ಳಿ, ಹನುಮಂತೇಗೌಡನಪಾಳ್ಯ, ಸುಬ್ರಮಣ್ಯನಗರ ಮತ್ತು ದೊಡ್ಡಬೆಲೆ ಗ್ರಾಪಂನ
ಕಾರೇಹಳ್ಳಿ, ದೊಡ್ಡಚನ್ನೋಹಳ್ಳಿ ಗ್ರಾಮಗಳನ್ನು ಸೇರಿಸಿಕೊಂಡು 2021ರ ಜನಗಣತಿಯ ಸರಾಸರಿ ಬೆಳವಣಿಗೆ ಆಧಾರದಲ್ಲಿ 15000 ಜನಸಂಖ್ಯೆಯನ್ನು ಮೀರಿರುವುದರಿಂದ ಪಟ್ಟಣ ಪಂಚಾಯಿತಿ ಪ್ರಸ್ತಾವನೆಯನ್ನು ಮರು ಪರಿಶೀಲಿಸಿ, ಸೂಕ್ರ ಕ್ರಮ ಕೈಗೊಳ್ಳಬೇಕೆಂದು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.

ಆಯೋಗಕ್ಕೆ ಮನವಿ: ತಾಲೂಕಿನ ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಈಗಾಗಲೇ ಮನವಿ ಸಲ್ಲಿಸಿ, ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದ್ದರಿಂದ ಹಾಲಿ ಹೊರಡಿಸಿರುವ ಗ್ರಾಮ ಪಂಚಾಯಿತಿ ಉಪ ಚುನಾವಣೆಯನ್ನು ರದ್ದುಪಡಿಸಿ, ಮುಂದೂಡುವಂತೆ ಕೋರಿದ್ದಾರೆ ಎಂದು ಮಾನ್ಯ ಡೀಸಿ ರಾಜ್ಯ ಚುನಾವಣಾ ಆಯೋಗಕ್ಕೆ ಮುಂದಿನ ಕ್ರಮಕ್ಕಾಗಿ ಮೇ 4ರಂದು ಪತ್ರ ಬರೆದಿದ್ದಾರೆ.

ನಿರಂತರ ಹೋರಾಟ: ಕಳೆದ ಎರಡು ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡಿ, ನಮ್ಮ ಪಟ್ಟಣ ಪಂಚಾಯಿತಿ ಹೋರಾಟವನ್ನು ನಡೆಸುತ್ತಿದ್ದೇವೆ. ಈ ಬಾರಿಯು ಸಚಿವ ಎಂಟಿಬಿ ನಾಗರಾಜು ಅವರನ್ನು ಮತ್ತು ಜಿಲ್ಲಾಧಿಕಾರಿಗಳನ್ನು ಕಳೆದ ಒಂದು ವಾರದಿಂದ ನಿರಂತರವಾಗಿ ಸಂಪರ್ಕಿಸಿ, ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶ ಮಾಡಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿದೆ. ಆದ್ದರಿಂದ ಈ ಬಾರಿಯ ಗ್ರಾ.ಪಂ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದೇವೆ ಎಂದು ತ್ಯಾಮಗೊಂಡ್ಲು ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್‌ ಪ್ರಸಾದ್‌ ಪ್ರತಿಕ್ರಿಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next