1992, ಡಿಸೆಂಬರ್ 6. ಈ ದಿನಕ್ಕೆ ಮುಂಚಿತವಾಗಿಯೇ, ನಾನು ಮಂಗಳೂರಿನಿಂದ ಅಯೋಧ್ಯೆ ತಲುಪಿದ್ದೆ. ನನ್ನಂತೆಯೇ ಅಪಾರ ಸಂಖ್ಯೆಯಲ್ಲಿ ಕರಸೇವಕರು ಅಲ್ಲಿಗೆ ಬಂದಿದ್ದರು. ಮರ್ಯಾದಾ ಪುರುಷೋತ್ತಮನಿಗೆ ತನ್ನ ಜನ್ಮ ಸ್ಥಳದಲ್ಲೇ ದೇಗುಲವಿಲ್ಲವಲ್ಲ ಎಂಬ ನೋವು ನಮ್ಮದಾಗಿತ್ತು. ಆ ಜಾಗದಲ್ಲಿ ಕಟ್ಟಿದ ಪರಕೀಯ ಕಟ್ಟಡವನ್ನು ಉರುಳಿಸಿ, ಅಲ್ಲಿ ದೇಗುಲ ಕಟ್ಟುವ ಉತ್ಸಾಹ ನಮ್ಮನ್ನು ಅಷ್ಟು ದೂರ ಕರೆದೊಯ್ದಿತ್ತು.
ನಮ್ಮಲ್ಲಿ ಅನೇಕರು ಗುಮ್ಮಟದ ಮೇಲೆ ಹತ್ತಿ, ಎಷ್ಟೇ ಪೆಟ್ಟು ಕೊಟ್ಟರೂ, ಅದು ಉರುಳಿರಲಿಲ್ಲ. ಆಗ ಅಲ್ಲಿದ್ದ ಪಶ್ಚಿಮ ಬಂಗಾಳದ ಆರ್ಕಿಟೆಕ್ಟ್ ಒಬ್ಬರು, “ಗುಮ್ಮಟ ಅಷ್ಟು ಸುಲಭದಲ್ಲಿ ಬೀಳುವುದಿಲ್ಲ. ಕಾಲಿಗೆ ಪೆಟ್ಟು ಕೊಟ್ಟರೆ, ತಲೆ ಉರುಳುತ್ತೆ’ ಎನ್ನುವ ಮೂಲಕ, ನಮ್ಮೆಲ್ಲರ ಉದ್ದೇಶವನ್ನು ಸುಲಭವಾಗಿಸಿದರು. ಒಂದಿಷ್ಟು ಮಂದಿ ಕೆಳಗಿನಿಂದ, ಕಂಬಗಳನ್ನು ಉರುಳಿಸಲು ಶುರುಮಾಡಿದೆವು. ಕಂಬ ಸಡಿಲವಾಗುತ್ತಿದ್ದಂತೆ, ಗುಂಬಜ್ ಆಧಾರ ಕಳೆದುಕೊಂಡು, ಕೆಳಕ್ಕೆ ಬಿತ್ತು.
ಹಾಗೆ ಬಿದ್ದ ಕಟ್ಟಡವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ. ಅದು ನಿಜಕ್ಕೂ ಮಸೀದಿ ಆಗಿರಲಿಲ್ಲ. ಒಳಾಂಗಣದಲ್ಲಿ ದೇಗುಲದ ಮಾದರಿಯನ್ನು ಇಟ್ಟುಕೊಂಡು ಕಟ್ಟಿದ ಮೊಘಲ್ ಶೈಲಿಯ ಕಟ್ಟಡವಾಗಿತ್ತು. ಕೆಳಕ್ಕೆ ಉರುಳಿಬಿದ್ದ ಗುಂಬಜ್‌ನ ಚೂರುಗಳನ್ನೆಲ್ಲ ಆಚೆಗೆ ಹಾಕಿ, ಬುನಾದಿಯನ್ನು ಅಗೆಯತೊಡಗಿದವು. ಹಾಗೆ ಉತVನನ ಮಾಡಿದಷ್ಟೂ, ನಮಗೆ ಅದರ ಕೆಳಭಾಗದಲ್ಲಿ ಅಪೂರ್ವ ಶಿಲೆಗಳು ಕಾಣಿಸಿಕೊಂಡವು. ಮೂರ್ತಿಗಳು ಇದ್ದವು.
ರಾಮಾಯಣದ ಶಿಲ್ಪಗಳಿದ್ದ, ಕಂಬಗಳನ್ನು ಆ ಕಟ್ಟಡಕ್ಕೆ ಫೌಂಡೇಶನ್ ಆಗಿ ಬಳಸಿಕೊಳ್ಳಲಾಗಿತ್ತು. ಅವನ್ನೆಲ್ಲ ಒಂದೊಂದಾಗಿ ಮೇಲೆತ್ತಿದೆವು. ಕಟ್ಟಡ ಬಿದ್ದ ಸಂಜೆಯಿಂದ, ಇಡೀ ರಾತ್ರಿ ಕೆಲಸ ನಡೆದು, ಬೆಳಗ್ಗಿನವರೆಗೂ, ಕೆಳಗ್ಗಿದ್ದ ಮೂರ್ತಿಗಳು, ಕಂಬಗಳನ್ನು ಹೊರತೆಗೆದವು. ಒಂದೊಂದು ಶಿಲೆಗಳು 15- 20 ಕಿಲೋ ತೂಗುತ್ತಿದ್ದವು. ಕಂಬಗಳನ್ನು ಮೇಲೆತ್ತಲು ಐದಾರು ಮಂದಿ ಗಟ್ಟಿ ಆಳುಗಳೇ ಬೇಕಿತ್ತು. ಅವನ್ನೆಲ್ಲವನ್ನೂ ಹೊತ್ತುಕೊಂಡು, ಅರ್ಧ ಕಿ.ಮೀ. ದೂರದಲ್ಲಿ ನ್ಯಾಸ ಮಂದಿರದಲ್ಲಿ ಸಾಲಾಗಿ ಜೋಡಿಸಿದೆವು.
ನಾವು ಹೀಗೆ ಶ್ರಮಹಾಕುವಾಗ, ಅಲ್ಲಿದ್ದ “ಅರ್ಧ ಸೈನಿಕ್ ಬಲ್’ನ ಸಿಬ್ಬಂದಿಯೂ ನೆರವಾಗಿದ್ದು ವಿಶೇಷ. ಅವರಲ್ಲಿ ಅನೇಕರು ಶ್ರೀರಾಮನ ಭಕ್ತರಾಗಿದ್ದರು. ನಮ್ಮ ಕೋಟ್ ಅನ್ನು, ಲುಂಗಿಯನ್ನು ಧರಿಸಿ, ಅವರೂ ಉತ್ಖನನ ಕೆಲಸದಲ್ಲಿ ತೊಡಗಿದರು. ಆ ಕಟ್ಟಡದ ಕೆಳಗೆ, ಹಿಂದಿನ ಕಾಲದ ದೇಗುಲದ ಸಾಕಷ್ಟು ಶಿಲಾವಸ್ತುಗಳು ಸಿಕ್ಕವು. ಒಂದು ಟೆಂಟಿನಲ್ಲಿ ಬಾಲರಾಮನಿಗೆ ತಾತ್ಕಾಲಿಕ ದೇಗುಲ ಕಟ್ಟಿಯಾಗುತ್ತಿದ್ದಂತೆಯೇ, ಕೇಂದ್ರ ಸರ್ಕಾರ ಆ ವಿವಾದಿತ ಜಾಗವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.
* ಮಂಜುನಾಥ್ ಕಾಸರಗೋಡು, ಪ್ರತ್ಯಕ್ಷದರ್ಶಿ