ಬೆಂಗಳೂರು: ನಗರದಲ್ಲಿ ಇನ್ಮುಂದೆ ಕೊಳವೆಬಾವಿ ಕೊರೆಸಲು ಜನ ದುಪ್ಪಟ್ಟು ಬೆಲೆ ತೆರಬೇಕು. ಇದು ಡೀಸೆಲ್ ಬೆಲೆ ಏರಿಕೆ ಎಫೆಕ್ಟ್! ನಿರಂತರ ಡೀಸೆಲ್ ಬೆಲೆ ಏರಿಕೆ ಪರಿಣಾಮ ಪ್ರಯಾಣ ದರ, ಉದ್ಯಮ, ಸರಕು-ಸಾಗಣೆ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೂ ಆಗುತ್ತಿದೆ. ಈಗ ಬೋರ್‌ವೆಲ್ ಕೊರೆಯುವ ಯಂತ್ರಗಳಿಗೂ ಇದರ ಬಿಸಿ ತಟ್ಟಿದ್ದು, ಏಕಾಏಕಿ ದುಪ್ಪಟ್ಟು ದರ ವಿಧಿಸಲು ಕರ್ನಾಟಕ ರಿಗ್ ಓನರ್ ಅಸೋಸಿಯೇಷನ್ ಸಂಘ ನಿರ್ಧರಿಸಿದೆ.
ಪರಿಷ್ಕೃತ ದರ ಸೆ.17ರಿಂದ ಅನ್ವಯ ಆಗಲಿದೆ. ಈ ಸಂಬಂಧ ರಿಗ್ ಮಾಲಿಕರು ಮತ್ತು ಏಜೆನ್ಸಿಗಳು ಒಕ್ಕೊರಲಿನ ತೀರ್ಮಾನ ಕೈಗೊಂಡಿದ್ದಾರೆ. ಪ್ರತಿ ಅಡಿ ಕೊಳವೆಬಾವಿ ಕೊರೆಯಲು ಈಗಿರುವ ದರ 60 ರೂ. ಇದ್ದು, ಇನ್ಮುಂದೆ 110 ರೂ. ಆಗಲಿದೆ. ಅದರಲ್ಲೂ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಅಂತರ್ಜಲ ಮಟ್ಟ ಸಾವಿರ ಅಡಿ ತಲುಪಿದೆ. ಹಾಗಾಗಿ, ಈ ದುಬಾರಿ ದರ ಅಕ್ಷರಶಃ ಗ್ರಾಹಕರ ಕೈ ಸುಡಲಿದೆ.
ನಗರದಲ್ಲಿ 150ಕ್ಕೂ ಅಧಿಕ ರಿಗ್ ಯಂತ್ರಗಳಿದ್ದು, ಸುಮಾರು 300 ಏಜೆಂಟರುಗಳಿದ್ದಾರೆ. ನಿತ್ಯ ನಗರದಲ್ಲಿ ಅಧಿಕೃತವಾಗಿಯೇ 60ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಯಲಾಗುತ್ತದೆ. ಡೀಸೆಲ್ ದರ ಕಳೆದ ಒಂದು ವರ್ಷದಿಂದ ಏರಿಕೆ ಕ್ರಮದಲ್ಲೇ ಸಾಗಿದೆ. ಕೊಳವೆಬಾವಿ ಕೊರೆಯಲು ಪ್ರತಿ ಅಡಿಗೆ 1ರಿಂದ 1.25 ಲೀ. ಡೀಸೆಲ್ ಖರ್ಚಾಗುತ್ತದೆ.
ದರ ಇಳಿಕೆ ಆಗಬಹುದು ಹಾಗೂ ಜನರಿಗೆ ಹೊರೆ ಆಗಬಾರದು ಎಂದು ಇದುವರೆಗೂ ಕಾದುನೋಡಿದೆವು. ಆದರೆ, ಈವರೆಗೆ ಯಾವುದೇ ಪೂರಕ ಬೆಳವಣಿಗೆ ಆಗಲಿಲ್ಲ. ಹಾಗಾಗಿ, ಅನಿವಾರ್ಯವಾಗಿ ದರ ಏರಿಕೆ ಮಾಡಬೇಕಾಗಿದೆ ಎಂದು ಅಸೋಸಿಯೇಷನ್ ನಿರ್ದೇಶಕ ಎಸ್.ಆರ್. ಅನಿಲ್‌ಕುಮಾರ್ ತಿಳಿಸುತ್ತಾರೆ. ಕಳೆದ ಮೂರು ದಿನಗಳಿಂದ ಎಲ್ಲ ರಿಗ್ ಮಾಲಿಕರು ಮತ್ತು ಏಜೆಂಟರಿಗಾಗಿ ಕಾಯುತ್ತಿದ್ದೆವು.
ಶುಕ್ರವಾರ ಎಲ್ಲರೂ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಒಂದೇ ವೇದಿಕೆ ಅಡಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದರಿಂದ ಸಾಮಾನ್ಯವಾಗಿ ನಾಗರಬಾವಿ ಸುತ್ತ ಕೊಳವೆಬಾವಿ ಕೊರೆಯಲು ಅಂದಾಜು 80 ಸಾವಿರ ರೂ. ಹಾಗೂ ಕೆ.ಆರ್. ಪುರ, ಹೆಬ್ಟಾಳ ಸುತ್ತ 1.50ರಿಂದ 2 ಲಕ್ಷ ರೂ. ಖರ್ಚಾಗುತ್ತಿತ್ತು. ಈಗ ಇದಕ್ಕೆ 30ರಿಂದ 50 ಸಾವಿರ ರೂ. ಹೆಚ್ಚುವರಿ ಹೊರೆ ಆಗಲಿದೆ ಎಂದು ಸಂಘದ ಸದಸ್ಯರೊಬ್ಬರು ಮಾಹಿತಿ ನೀಡಿದರು.