Advertisement
ನಗರದಲ್ಲಿ ಪ್ರತಿ ದಿನ ಹಲವಾರು ಕಾರ್ಯಕ್ರಮಗಳು ಆಯೋಜನೆಯಾಗುತ್ತಲೇ ಇರುತ್ತವೆ. ಇದರಿಂದ ಎಲ್ಲ ಸಭಾಂಗಣಗಳು ಪ್ರತಿದಿನ ಗಿಜಿ ಗುಡುತ್ತಲೇ ಇರುತ್ತದೆ. ಎಷ್ಟೆಂದರೆ ಪ್ರಮುಖ ಸಭಾಂಗಣಗಳಲ್ಲಿ ಕೆಲವೊಮ್ಮೆ ಐದಾರು ತಿಂಗಳುಗಳ ಹಿಂದೆಯೇ ಬುಕ್ ಮಾಡಲು ಪ್ರಯತ್ನಿಸಿದರೂ ಸಭಾಂಗಣ ಸಿಗದಂತಹ ಪರಿಸ್ಥಿತಿ ಇರುತ್ತದೆ. ಆದರೆ ಈಗ ನಗರದ ಹಲವು ಸಭಾಂಗಣಗಳಲ್ಲಿ ಮುಂಗಡ ಕಾಯ್ದಿರಿಸುವಿಕೆಯ ಸಂಖ್ಯೆ ಇಳಿಮುಖವಾಗಿದೆ.
ಈಗಾಗಲೇ ಎಪ್ರಿಲ್ ತಿಂಗಳ 11,29, ಮತ್ತು ಮೇ ತಿಂಗಳ 2, 6, 12, 13 ಮುಂತಾದ ದಿನಾಂಕಗಳು ಶುಭ ಕಾರ್ಯಗಳಿಗೆ ಪ್ರಶಸ್ತವಾಗಿವೆ. ಮದುವೆ ಸಮಾರಂಭಗಳಿಗಾಗಿ ಈ ದಿನಾಂಕಗಳಿಗೆ ಹಾಲ್ ಗಳನ್ನು ಕೆಲವು ತಿಂಗಳುಗಳ ಹಿಂದೆಯೇ ಕಾಯ್ದಿರಿಸಲಾಗಿದೆ. ಅದು ಬಿಟ್ಟು ಅನೇಕ ಸಂದರ್ಭಗಳಲ್ಲಿ ಎಲ್ಲ ಹಾಲ್ ಗಳಲ್ಲಿಯೂ ನಿರಂತರ ಸಭೆ- ಸಮಾರಂಭಗಳು ನಡೆಯುತ್ತಿದ್ದರೂ ಚುನಾವಣೆ ಘೋಷಣೆಯಾದ ಬಳಿಕ ಹಾಲ್ ಬುಕ್ ಮಾಡುವುದು ತೀರಾ ಕಡಿಮೆಯಾಗಿದೆ ಎನ್ನುತ್ತಾರೆ ಪ್ರಮುಖ ಹಾಲ್‌ಗಳ ಸಿಬಂದಿ. ಹಾಲ್‌ಗಳಲ್ಲಿ ನಗದನ್ನು ನೇರವಾಗಿ ತೆಗೆದುಕೊಳ್ಳದೆ ನೆಫ್ಟ್, ಡಿಡಿಗಳ ಮುಖಾಂ ತರವೇ ತೆಗೆದುಕೊಳ್ಳುವುದರಿಂದ ಆಯೋಜಕರಿಗೆ ಬಿಲ್ ಪಾವತಿಸಲು ಸಮಸ್ಯೆಯಾಗುವುದಿಲ್ಲ.
Related Articles
ನಗರದ ಪ್ರಮುಖ ಸಭಾಂಗಣವಾದ ಪುರಭವನದಲ್ಲಿ ಬುಕ್ಕಿಂಗ್ ಯಥಾಪ್ರಕಾರವಿದೆ. ಕೆಲವು ಹಾಲ್‌ಗಳಲ್ಲಿ ಮೇ 12ರಂದು ವಿವಾಹ, ಮೆಹಂದಿ ಕಾರ್ಯಕ್ರಮವಿದೆ. ಅಲ್ಲದೆ ಚುನಾವಣೆ ಪೂರ್ವದಲ್ಲಿ ನಿಗದಿ ಪಡಿಸಿದಂತೆ ನಗರದ ಇತರ ಕೆಲವು ಹಾಲ್‌ಗಳಲ್ಲಿಯೂ ಚುನಾವಣೆಯಂದು ಸಮಾರಂಭಗಳು ಜರಗುತ್ತಿವೆ.
Advertisement
ನೀತಿ ಸಂಹಿತೆ ಬಗ್ಗೆಯೂ ವಿಚಾರಣೆಮಾದರಿ ನೀತಿ ಸಂಹಿತೆ ಜಾರಿಗೊಂಡ ಬಳಿಕ ಸಭೆ ಸಮಾರಂಭ ಆಯೋಜನೆ, ವಸ್ತುಗಳ ಸಾಗಾಟಕ್ಕೆ ಅನುಮತಿ ಅಗತ್ಯದ ಬಗ್ಗೆ ಸುದ್ದಿಗಳು ಹರಡುತ್ತಿವೆ. ಈ ಹಿನ್ನೆಲೆಯಲ್ಲಿ ಮೊದಲೇ ಸಭಾಂಗಣ ಕಾಯ್ದಿರಿಸಿದವರು ಕೂಡ ಕೆಲವು ಹಾಲ್ ಗಳಲ್ಲಿ ವಿಚಾರಿಸುತ್ತಾರೆ. ಆದರೆ ಪೂರಕ ದಾಖಲೆಯಿದ್ದಲ್ಲಿ ಕಾರ್ಯಕ್ರಮ ಆಯೋಜನೆಗೆ ವಸ್ತುಗಳ ಸಾಗಾಟಕ್ಕೆ ಸಮಸ್ಯೆಯಾಗುವುದಿಲ್ಲ. ಹಾಲ್ ಬುಕ್ಕಿಂಗ್ ಪ್ರಕ್ರಿಯೆ ಕಡಿಮೆಯಾಗಿದ್ದರೂ, ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮಗಳ್ಯಾವುವೂ ಮಾದರಿ ಚುನಾವಣೆ ನೀತಿ ಸಂಹಿತೆ ಯಿಂದಾಗಿ ರದ್ದುಗೊಂಡಿಲ್ಲ ಎನ್ನುತ್ತಾರೆ ನಗರದ ವಿವಿಧ ಸಭಾಂಗಣಗಳ ಸಿಬಂದಿ. ಏರೆಗಾವುಯೇ ಕಿರಿಕಿರಿ…
ಸಭೆ ಸಮಾರಂಭಗಳ ಆಯೋಜನೆಗೆ ಅನುಮತಿ ಬೇಕೇ ಬೇಡವೇ ಎಂಬ ಗೊಂದಲದಲ್ಲಿ ಈಗಲೂ ಸಾರ್ವಜನಿಕರು ಇದ್ದಾರೆ. ಅನುಮತಿ ಪತ್ರ (ಎನ್‌ಒಸಿ) ತೆಗೆದುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂಬುದಾಗಿ ಈ ಹಿಂದೆ ಅಪರ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. ಅಲ್ಲದೆ ಕಾರ್ಯಕ್ರಮ ಆಯೋಜನೆ ಸಂದರ್ಭ ಖರೀದಿಸಿದ-ಸಾಗಿಸಿದ ಎಲ್ಲ ವಸ್ತುಗಳಿಗೂ ಪೂರಕ ದಾಖಲೆಗಳಿದ್ದರೆ ಏನೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಅನುಮತಿ ಪತ್ರಕ್ಕಾಗಿ ವೃಥಾ ಅಲೆದಾಟ, ಸಮಾರಂಭಗಳಿಗೆ ನೀತಿ ಸಂಹಿತೆಯಿಂದಾಗಿ ಏನಾದರೂ ಸಮಸ್ಯೆಯಾದರೆ
ಕಷ್ಟ ಎಂಬ ಲೆಕ್ಕಾಚಾರದಲ್ಲಿ ಕಾರ್ಯಕ್ರಮ ಆಯೋಜಕರಿದ್ದಾರೆ. ಇದಕ್ಕಾಗಿಯೇ ಸ್ವಲ್ಪ ತಡವಾದರೂ ಅಡ್ಡಿ ಇಲ್ಲ ಚುನಾವಣೆ ಬಳಿಕವೇ ಕಾರ್ಯಕ್ರಮ ಆಯೋಜಿಸುವುದು ಒಳಿತು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಯಥಾ ಪ್ರಕಾರವಿದೆ
ಪುರಭವನದಲ್ಲಿ ಕಾರ್ಯ ಕ್ರಮಗಳು ನಡೆಯುತ್ತಲೇ ಇವೆ. ಬುಕ್ಕಿಂಗ್ ಕೂಡ ನಡೆಯುತ್ತಿದೆ. ಚುನಾವಣಾ ನೀತಿಸಂಹಿತೆ ಇಲ್ಲಿ ಕಾರ್ಯಕ್ರಮ ಹಮ್ಮಿ ಕೊಳ್ಳುವುದಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಅಲ್ಲದೆ ಇಂಡೋರ್ ಕಾರ್ಯಕ್ರಮಗಳಿಗೆ ಅನುಮತಿ ಬೇಡ ಎಂದೂ ಸಂಬಂಧ ಪಟ್ಟವರು ಹೇಳಿದ್ದಾರೆ.
-ಹರೀಶ್, ಮ್ಯಾನೇಜರ್,
ಪುರಭವನ ಮಂಗಳೂರು. ಧನ್ಯಾ ಬಾಳೆಕಜೆ