ಬೆಂಗಳೂರಿನ ಬಸವನಗುಡಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಗಣಿ. ಇಲ್ಲಿ ನಡೆಯುವ ಪ್ರಸಿದ್ಧ ಕಡಲೆಕಾಯಿ ಪರಿಷೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಹಾಗೆಯೇ ಬಸವನಗುಡಿಯಲ್ಲಿ ಇನ್ನೊಂದು ಪರಿಷೆ ನಡೆಯುತ್ತದೆ. ಅದುವೇ ಪುಸ್ತಕ ಪರಿಷೆ. “ತಮಗೊಂದು ಪುಸ್ತಕ ಉಚಿತವಾಗಿ ಹಾಗೂ ತಮ್ಮಿಂದಷ್ಟು ಪುಸ್ತಕ ಪರಿಷೆಗಾಗಿ’ ಎಂಬ ನೂತನ ಪರಿಕಲ್ಪನೆಯೊಂದಿಗೆ ಸೃಷ್ಟಿ ವೆಂಚರ್ ಸಂಸ್ಥೆ ಈ ಪರಿಷೆಯನ್ನು ಎಂಟು ವರ್ಷದ ಹಿಂದೆ ಪ್ರಾರಂಭಿಸಿತು. ಈಗ ಪರಿಷೆಗೆ ಒಂಬತ್ತರ ಹರೆಯ.
ಮೊದಲ ವರ್ಷ ಐದು ಸಾವಿರ ಪುಸ್ತಕದಿಂದ ಆರಂಭವಾದ ಈ ಪರಿಷೆ ಎರಡನೇ ವರ್ಷದಲ್ಲಿ ಏಳು ಸಾವಿರ, ನಂತರ ಹನ್ನೆರಡು ಸಾವಿರ ಹೀಗೆ ಏರುತ್ತಾ ಇಂದು ಒಂದು ಕೋಟಿ ಪುಸ್ತಕಗಳ ಪರಿಷೆ ನಡೆಸುವ ಯೋಜನೆ ಹಾಕಿಕೊಂಡಿದೆ.
ಮಾರ್ಚ್ ತಿಂಗಳ 4, 5 ಮತ್ತು 6 ನೇ ದಿನಾಂಕದಂದು ಬಸವನಗುಡಿ ನ್ಯಾಷನಲ್ ಕಾಲೇಜ್ ಆಟದ ಮೈದಾನದಲ್ಲಿ ಕೋಟಿ ಪುಸ್ತಕಗಳ ಅದ್ಭುತ ಪರಿಷೆಗೆ ಪುಸ್ತಕಪ್ರಿಯರು ಸಾಕ್ಷಿಯಾಗಲಿದ್ದಾರೆ. ಕಳೆದ ಎಂಟು ವರ್ಷಗಳಿಂದ ನಿಮ್ಮ ಮನೆಯಲ್ಲಿರುವ ಪುಸ್ತಕಗಳನ್ನು ಕೊಂಡು ಹೋಗಿ ಅಲ್ಲಿ ಕೊಟ್ಟರೆ ಅಲ್ಲಿ ನಿಮಗೊಂದು ಪುಸ್ತಕವನ್ನು ಉಚಿತವಾಗಿ ನೀಡುತ್ತಿದ್ದರು. ಆದರೆ ಈ ವರ್ಷ ಪರಿಷೆಗೆ ಹೋದವರಿಗೆಲ್ಲಾ ಒಂದು ಪುಸ್ತಕ ಉಚಿತವಾಗಿ ನೀಡುವ ಯೋಜನೆಯನ್ನು ಸೃಷ್ಟಿ ವೆಂಚರ್ ಹಮ್ಮಿಕೊಂಡಿದೆ. ಇದೊಂದು ಅರಿವಿನ ಪ್ರದರ್ಶನ. ಪುಸ್ತಕಗಳಿಂದ ಪುಸ್ತಕಗಳಿಗಾಗಿ ಪುಸ್ತಕಗಳಿಗೋಸ್ಕರ ಎಂಬಂತೆ ಈ ಪರಿಷೆ ನಡೆಯುತ್ತದೆ. ಜನರಲ್ಲಿ ಪುಸ್ತಕ ಪ್ರೀತಿ ಬೆಳೆಸಲು ಹಾಗೂ ವಿದ್ಯಾರ್ಥಿಗಳಲ್ಲಿ ಪುಸ್ತಕದ ಬಗ್ಗೆ ಜಾಗೃತಿ ಮೂಡಿಸಲು ಇಂಥ ಪರಿಷೆಗಳ ಅಗತ್ಯದೆ ಎಂದು ಸೃಷ್ಟಿ ವೆಂಚರ್ ಸಂಚಾಲಕ ಲೋಕೇಶ್ ಹೇಳುತ್ತಾರೆ.
ಪರಿಷೆಯ ಮೂರು ದಿನವೂ ಬೆಳಗ್ಗೆ 9 ರಿಂದ ರಾತ್ರಿ 9 ರವೆರಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿಗಳು ನಡೆಯುತ್ತವೆ. ಪುಸ್ತಕಪ್ರಿಯರು ಕಣ್ಣು ಕಿವಿಗಳಿಗೆ ಹಬ್ಬ ಮಾಡಿಕೊಂಡು ಮನಸ್ಸಿನ ತುಂಬಾ ಸಂಭ್ರಮವನ್ನು ತುಂಬಿಕೊಂಡು ವಾಪಸಾಗಬಹುದು. ಈ ಬಾರಿಯ ಪರಿಷೆಯಲ್ಲಿ ಮತ್ತೂ ಒಂದು ವಿಶೇಷವಿದೆ. ಪರಿಷೆಯ ಮೂರು ದಿನವೂ ಭಾಗವಹಿಸುವ ವಿದ್ಯಾರ್ಥಿಗಳಿಗೆ “ಪುಸ್ತಕ ಬಂಧು ಉತ್ತೇಜನ’ ಎಂಬ ಹೆಸರಿನಲ್ಲಿ ಬಹುಮಾನವೂ ಉಂಟು. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜಿನ ಹೆಸರನ್ನು ಅಲ್ಲಿನ ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಸ್ಪರ್ಧೆಯ ಕೊನೆಯ ದಿನದ ಸಂಜೆ ಆ ಹೆಸರುಗಳನ್ನು ಚೀಟಿಗಳಲ್ಲಿ ಬರೆದು ಲಕ್ಕಿ ಡ್ರಾ ನಡೆಸಲಾಗುತ್ತದೆ. ಲಕ್ಕಿ ಡ್ರಾನಲ್ಲಿ ಹತ್ತು ಜನರನ್ನು ಅಂದರೆ ಐದು ಜನ ಶಾಲಾ ವಿದ್ಯಾರ್ಥಿಗಳು ಮತ್ತು ಐದು ಜನ ಕಾಲೇಜು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತಲಾ ಐದು ಸಾವಿರ ನಗದು ಬಹುಮಾನ ಮತ್ತು ಸರ್ಟಿಫಿಕೆಟ್ ನೀಡಲಾಗುತ್ತದೆ. ಇನ್ನೇಕೆ ತಡ? ಬನ್ನಿ ಪುಸ್ತಕ ಪರಿಷೆಗೆ ಹೋಗೋಣ…
– ವೀಣಾ ಚಿಂತಾಮಣಿ
ಸಂಪ್ರದಾಯದ ಕುರುಹು
ಸಾಮಾಜಿಕ ಜಾಲತಾಣಗಳು ಮತ್ತು ಟಿವಿ ಚಾನೆಲ್‌ಗಳ ಭರಾಟೆಯ ನಡುವೆ ಪುಸ್ತಕ ಓದುವ ಅಭಿರುಚಿಯೇ ಕಡಿಮೆಯಾಗುತ್ತಿದೆ ಎನ್ನುವ ಅಭಿಪ್ರಾಯವಿದೆ. ಅದೇನೇ ಇರಲಿ, ಈ ಸಂದರ್ಭದಲ್ಲಿ ಸೃಷ್ಟಿ ವೆಂಚರ್ ಸಂಸ್ಥೆ ಜನರಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಲು ಮುಂದಾಗಿದೆ. ಪುಸ್ತಕ ಓದುವುದರಿಂದ ಬುದ್ಧಿ ವಿಶಾಲವಾಗುವುದರ ಜೊತೆಗೆ ಈ ಹವ್ಯಾಸ ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಪುಸ್ತಕಗಳು ನಮ್ಮ ಸಂಸ್ಕೃತಿ ಸಂಪ್ರದಾಯದ ಕುರುಹು. ಪುಸ್ತಕಗಳನ್ನು ಉಳಿಸಿ ಬೆಳೆಸಿ ಓದುವ ಅಭಿರುಚಿಯನ್ನು ಹೆಚ್ಚಿಸಿಕೊಳುÉವುದು ನಮ್ಮ ಕರ್ತವ್ಯ ಕೂಡಾ. ಈ ನಿಟ್ಟಿನಲ್ಲಿ ಪುಸ್ತಕ ಪರಿಷೆ ಪುಸ್ತಕಪ್ರಿಯರಿಗೆ ನಿಜವಾದ ಪರಿಷೆಯೇ ಆಗಬಹುದು.