Advertisement

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

12:44 AM Sep 23, 2020 | mahesh |

ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆಯ ವಿಚಾರವಾಗಿ ದೇಶಾದ್ಯಂತ ವಾದ-ಪ್ರತಿವಾದ, ಚರ್ಚೆಗಳು ಜೋರಾಗಿವೆ. ಈ ವಿಷಯದಲ್ಲಿ ರಾಜಕೀಯ ಆರಂಭವಾಗಿದೆ. ಅಕಾಲಿ ದಳದ ನಾಯಕಿ ಹರ್‌ಸಿಮ್ರತ್‌ ಕೌರ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ಒಂದು ವೇಳೆ ಮಸೂದೆಗಳಲ್ಲಿ ಏನಾದರೂ ಕೊರತೆಯಿದ್ದರೆ, ಅದನ್ನು ಸರಿಪಡಿಸಲು ಮುಕ್ತ ಮನಸ್ಸಿನ ಅಗತ್ಯಬೇಕು. ಸತ್ಯವೇನೆಂದರೆ, ಈ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲಿವೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. “ಒಂದು ದೇಶ, ಒಂದು ಮಾರುಕಟ್ಟೆ’ ಎನ್ನುವುದು ಕೃಷಿ ಹಾಗೂ ಕೃಷಿಕನನ್ನು ಬಂಧನದಿಂದ ಮುಕ್ತಗೊಳಿಸುವ ಘೋಷವಾಕ್ಯ ವಾಗಿದೆ. ಈ ಮುಕ್ತಿಯು ಶುಭಸಂಕೇತವೇ ಅಥವಾ ಬಂಧನದ ಸಂಕೇತವೇ ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ನನ್ನ ಪ್ರಕಾರ ರೈತನನ್ನು ಆತನ ಸೀಮೆಯ ಸರಹದ್ದಿನಿಂದ ಮುಕ್ತಗೊಳಿಸಿ ರಾಷ್ಟ್ರೀಯ ಪಾಲುದಾರಿಕೆಯಲ್ಲಿ ಒಂದಾಗಿಸುವ ಕೇಂದ್ರ ಸರಕಾರದ ಈ ನಡೆ ಸ್ವಾಗತಾರ್ಹ.

ಈ ಬದಲಾವಣೆಯಿಂದ ಕೃಷಿ ಮಾರುಕಟ್ಟೆಗಳು ಮುಚ್ಚುವುದಿಲ್ಲ. ಅವು ಮೊದಲಿನಂತೆಯೇ ಸಕ್ರಿಯವಾಗಿ ಇರಲಿವೆ. ಅಲ್ಲಿ ರೈತರು, ದಲ್ಲಾಳಿಗಳು, ವ್ಯಾಪಾರಿಗಳು, ಸರಕಾರಿ ಖರೀದಿ ಏಜೆನ್ಸಿಗಳ ಉಪಸ್ಥಿತಿ ಮೊದಲಿನಂತೆಯೇ ಇರಲಿದೆ. ಆದರೆ ಈಗ ಆ ಮಾರುಕಟ್ಟೆಯೇ ಮಾಲಕನಲ್ಲ. ಇನ್ಮುಂದೆ ಮಂಡಿಗಳು/ಮಾರುಕಟ್ಟೆಗಳು ತಮ್ಮ ಉಪಯೋಗವನ್ನು ಸಾಬೀತುಪಡಿಸುವ ಸವಾಲು ಎದುರಿಸಲಿವೆ. ಖರೀದಿದಾರರ ಹೆಚ್ಚಳ ಕಾಣಿಸಿಕೊಳ್ಳಲಿರು ವುದರಿಂದ ಎಪಿಎಂಸಿಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.

ಈ ಹೊಸ ವ್ಯವಸ್ಥೆಯು ಈ ಹಿಂದೆ ರೈತರಿಗೆ ಎಂದೂ ದೊರೆಯದಂಥ ಅವಕಾಶದ ಬಾಗಿಲನ್ನು ತೆರೆದಿದೆ. ಇಲ್ಲಿಯವರೆಗೂ ರೈತರ ಗೋಧಿ ಮತ್ತು ಭತ್ತವನ್ನು ಖರೀದಿಸುವ ಅವಕಾಶ ಪರವಾನಿಗೆ ಪಡೆದ ಏಜೆಂಟರಿಗಷ್ಟೇ ಇತ್ತು. ಆದರೆ, ರೈತರಿಗೆ ಯಾವತ್ತೂ ಕೂಡ ಎಪಿಎಂಸಿಯ ಬೆಲೆ ಕೈಗೆ ದಕ್ಕುತ್ತಿರಲಿಲ್ಲ. ಅನ್ಯ ಕಡೆ ಮಾರಾಟ ಮಾಡುವ ದಾರಿಯೂ ಅವರಿಗೆ ಅಷ್ಟಾಗಿ ಇರಲಿಲ್ಲ. ಹಿಟ್ಟು ತಯಾರಿಸುವ ಕಂಪೆನಿಯೊಂದು ಹಳ್ಳಿಗೆ ತೆರಳಿ ನೇರವಾಗಿ ರೈತನಿಂದ ಖರೀದಿಸುವ ಸಾಧ್ಯತೆಯೂ ಇರಲಿಲ್ಲ. ಅದು ಮಾರುಕಟ್ಟೆ ಮತ್ತು ಏಜೆಂಟರ ಮೂಲಕವೇ ಹೆಜ್ಜೆಯಿಡಬೇಕಿತ್ತು. ಖರೀದಿಯ ಮೇಲೆ ಶುಲ್ಕವನ್ನೂ ಕಟ್ಟಬೇಕಿತ್ತು.

ಈಗ ನೇರವಾಗಿಯೇ ರೈತನಿಂದ ಖರೀದಿ ನಡೆಯುವ ಅವಕಾಶ ಎದುರಾಗಿದೆ ಎಂದರೆ, ಇದರಿಂದ ತೊಂದರೆ ಆಗುವುದು ಯಾರಿಗೆ? ಅದೇ ಏಜೆಂಟರು ಮತ್ತು ಮಾರುಕಟ್ಟೆಯಲ್ಲಿ ಕುಳಿತ ಶಕ್ತಿಗಳಿಗೆ. ಇದರಿಂದ ರೈತರಿಗೆ ಸಮಸ್ಯೆ ಎಲ್ಲಿದೆ? ನಾನು ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ, ಅಲ್ಲಿ ಬಾಳೆ ಬೆಳೆಯುವ ಗ್ರಾಮಗಳಿಗೆ ತೆರಳುವ ಅವಕಾಶ ಸಿಕ್ಕಿತ್ತು. ಶ್ರಾವಸ್ತಿ ವ್ಯಾಪ್ತಿಯ ಗ್ರಾಮಗಳಲ್ಲೆಲ್ಲ ಬಾಳೆ ಹಣ್ಣು ಬೆಳೆಯುವ ಟ್ರೆಂಡ್‌ ಹೆಚ್ಚಾಗಿಬಿಟ್ಟಿದೆ. ಇದರಿಂದಾಗಿ, ಅಲ್ಲೆಲ್ಲ ಸಮೃದ್ಧಿಯ ವಾತಾವರಣ ಸೃಷ್ಟಿಯಾಗಿಬಿಟ್ಟಿದೆ. ಆ ಬೆಳೆಗಾರರು ಮಾರುಕಟ್ಟೆ ಗಳಿಗೆ ಹೋಗುವುದಿಲ್ಲ. ಅಲ್ಲಿ ಸ್ಥಳೀಯ ಮಾರು ಕಟ್ಟೆಯೇ ಇಲ್ಲ. ಮಹಾರಾಷ್ಟ್ರದ ಭುಸಾವಲ್‌ ಮತ್ತು ಇತರ ದೊಡ್ಡ ರಾಷ್ಟ್ರೀಯ ಮಾರುಕಟ್ಟೆ ಗಳಿಂದ ನೇರವಾಗಿ ಆನ್‌ಲೈನ್‌ನಲ್ಲೇ ಬೆಲೆ ನಿಗದಿಯಾಗಿ, ಈ ಗ್ರಾಮಗಳಿಂದ ಟ್ರಕ್ಕುಗಳು ಹೊರಟುಬಿಡುತ್ತಿದ್ದವು. ಎಲ್ಲವೂ ನೇರ ಮಾರಾಟ ವ್ಯವಸ್ಥೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನೂರಾರು ಬೆಳೆಗಾರರು ಹೂವುಗಳನ್ನು ಬೆಳೆಯುತ್ತಾರೆ. ಅಲ್ಲಿ ಮಾರುಕಟ್ಟೆ ಎಲ್ಲಿದೆ? ಈ ರೈತರೆಲ್ಲ ಸೇರಿ, ತಮ್ಮದೇ ಸಹಕಾರಿ ಸಂಘಟನೆಯನ್ನು ರಚಿಸಿಕೊಂಡಿದ್ದಾರೆ. ಆ ಭಾಗದಿಂದ ಪ್ರತಿದಿನ ಮೂರ್ನಾಲ್ಕು ಟ್ರಕ್ಕುಗಳು ಲೋಡ್‌ ಆಗಿ ಮುಂಬಯಿ-ಪುಣೆಗೆ ತೆರಳುತ್ತವೆ.

Advertisement

ಹೊಸ ಸಾಧ್ಯತೆಗಳ ದ್ವಾರ
ಇನ್ನುಮುಂದೆ ದೇಶಾದ್ಯಂತ ಸಾಧ್ಯತೆಗಳ ಹೊಸ ದ್ವಾರವೇ ತೆರೆದುಕೊಳ್ಳಲಿದೆ. ಒಂದು ವೇಳೆಗೆ ರೈತನೊಬ್ಬ ಹಳೆಯ ಮಾರುಕಟ್ಟೆ ವ್ಯವಸ್ಥೆಯಲ್ಲೇ ಇರಲು ಬಯಸುತ್ತಾನೆಂದರೆ, ಅದಕ್ಕೂ ಅವಕಾಶ ಇದೆ. ಆ ಮಾರುಕಟ್ಟೆ ಎಲ್ಲೂ ಹೋಗುವುದಿಲ್ಲ, ಬಹುತೇಕ ಸಂದರ್ಭಗಳಲ್ಲಿ ದಾಸ್ತಾನುದಾರರು ರೈತರಿಂದ ಬೆಳೆ ಖರೀದಿಸಿ ಶೇಖರಿಸಿಟ್ಟು ಬಿಡುತ್ತಿದ್ದರು. ಹೆಚ್ಚಿನ ಬೆಲೆ ಬಂದಾಗ ಮಾರುಕಟ್ಟೆಗೆ ಬಿಡುತ್ತಿದ್ದರು. ಬಹುತೇಕ ಸಂದರ್ಭಗಳಲ್ಲಿ ಬ್ರೋಕರ್‌ಗಳು ಹಾಗೂ ಸ್ಥಳೀಯ ಸಾಲದಾತರ ಅಪವಿತ್ರ ಮೈತ್ರಿಯಿಂದ ಹೀಗೆ ಆಗುತ್ತದೆ. ಈಗ ಏಜೆಂಟರ ಪಾತ್ರ ಕಡಿಮೆಯಾಗುತ್ತಾ ಹೋಗುತ್ತ ದಾದ್ದರಿಂದ ದಾಸ್ತಾನಿನಲ್ಲಿ ಬೆಳೆ ಶೇಖರಿಸಿಟ್ಟು ಬೆಲೆ ಹೆಚ್ಚಿಸುವ ಪ್ರವೃತ್ತಿಯಲ್ಲೂ ಇಳಿಕೆಯಾಗುತ್ತದೆ. ನೇರವಾಗಿ ರೈತರಿಂದಲೇ ಖರೀದಿ ಪ್ರಕ್ರಿಯೆ ಆರಂಭವಾದರೆ ದಾಸ್ತಾನುಕೋರರಿಗಂತೂ ನಷ್ಟವಾಗಲಿದೆ.

ಇಂದು ರಾಜ್ಯ ಸರಕಾರಗಳು, ಕಲೆಕ್ಟರ್‌ಗಳ ಅಗಣಿತ ಪ್ರಯತ್ನದ ಹೊರತಾಗಿಯೂ ಸರಕಾರಿ ಗೋಧಿ ಖರೀದಿ ಬಹುತೇಕ ಏಜೆಂಟರ ಮೂಲಕವೇ ಆಗುತ್ತಿದೆ. ಈ ಕಾರಣದಿಂದಲೇ ಈ ವರ್ಗ “ರೈತನಿಗೆ ಬೇರೆ ದಾರಿ ಎಲ್ಲಿದೆ? ಆತ ಏನು ಮಾರಾಟ ಮಾಡಿದರೂ ತಮಗೇ ಮಾರಬೇಕು’ ಎನ್ನುವ ನಿಶ್ಚಿಂತೆಯಲ್ಲಿತ್ತು. ಆದರೆ ಈಗಿನ ಅಧ್ಯಾದೇಶದಿಂದಾಗಿ ರೈತರ ಖರೀದಿದಾರರ ವ್ಯಾಪ್ತಿ ಅಧಿಕವಾಗಲಿದೆ. ಈಗ ದೊಡ್ಡ ಕಂಪೆನಿಗಳು ಧಾನ್ಯಗಳ ಖರೀದಿ ಸಾಲಿನಲ್ಲಿ ಬರಲಿವೆ. ಬ್ರಿಟಿಷರ ಕಾಲದಿಂದಲೂ ನಡೆದು ಬರುತ್ತಿದ್ದ ಮಧ್ಯವರ್ತಿಗಳು, ಏಜೆಂಟರ ಏಕಾಧಿಕಾರ ಮೊದಲ ಬಾರಿ ಮುರಿಯಲಿದೆ.

ಮಹಾರಾಷ್ಟ್ರ ಮತ್ತು ಗುಜರಾತ್‌ನ ಮಾದರಿ ಯಲ್ಲೇ ರೈತರು ಸಹಕಾರಿ ಸಂಸ್ಥೆಗಳ ದಿಕ್ಕಿನಲ್ಲಿ ಹೆಜ್ಜೆಯಿಡಬೇಕು. ಸರಕಾರದ ಸಹಕಾರವಿಲ್ಲದೆ ರೈತರು ಆಲೂಗಡ್ಡೆ, ಈರುಳ್ಳಿ, ಆಹಾರ ಧಾನ್ಯಗಳು, ದ್ವಿದಳ ಧಾನ್ಯಗಳ ತಮ್ಮದೇ ಆದ ಉತ್ಪಾದಕ ಸಹಕಾರಿ ಘಟಕಗಳನ್ನು ರೂಪಿಸಲು ಮುಂದಾದರೆ, ಕೃಷಿ ಕ್ರಾಂತಿಯ ದಿನಗಳು ದೂರವಿಲ್ಲ. ಇದರಿಂದಾಗಿ ಸಬ್ಸಿಡಿಯ ಮೇಲೆ ಆಧರಿತವಾದ ಅಸಹಾಯಕ ಕ್ಷೇತ್ರ ಎಂದು ಕರೆಸಿಕೊಳ್ಳುವ ಗ್ರಾಮೀಣ ಕ್ಷೇತ್ರ, ಸಶಕ್ತ ಕ್ಷೇತ್ರವಾಗಿ ಬೆಳೆದು ನಿಲ್ಲುತ್ತದೆ. ಈ ವಿಚಾರವಾಗಿ ಮಾತನಾಡುತ್ತಾ, ಬಾರಾಬಂಕಿಯ ಪ್ರಗತಿಶೀಲ ರೈತ, ಪದ್ಮಶ್ರಿ ರಾಮಶರಣ್‌ ವರ್ಮಾ ಅವರು ಇದನ್ನು “ಮಾರುಕಟ್ಟೆಯಿಂದ ಮುಕ್ತಿಪಡೆಯುವ, ಕೃಷಿಕರ ಸ್ವಾತಂತ್ರ್ಯದ ಬಹುದೊಡ್ಡ ಅವಕಾಶ’ ಎಂದು ಕರೆಯುತ್ತಾರೆ. ರೈತ ನಾಯಕರಾಗಿದ್ದ ಚರಣ್‌ ಸಿಂಗ್‌ ಅವರು ಈಗೇನಾದರೂ ಇದ್ದಿದ್ದರೆ, ಕೃಷಿ ಕ್ಷೇತ್ರದಲ್ಲಿ ಮಧ್ಯವರ್ತಿಗಳ ಹಾಗೂ ಸಾಲದಾತರ ಏಕಾಧಿಕಾರ ಮುರಿಯುತ್ತಿರುವ ಈ ಬೆಳವಣಿಗೆ ನೋಡಿ ಅವರ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಇದು ನಿಜವಾಗಲೂ ರೈತರ ಸ್ವಾತಂತ್ರ್ಯದ ದಾರಿಯ, ಆರಂಭ!

ಚರ್ಚೆಗೆ ಆಹ್ವಾನ
ಕೇಂದ್ರ ಸರಕಾರ ತರಲು ಉದ್ದೇಶಿಸಿರುವ ಕೃಷಿ ಮಸೂದೆಗಳ ವಿಚಾರದಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಈ ಬಗ್ಗೆ ನಿಮ್ಮ ಅನಿಸಿಕೆಯೇನು? ಉದಯವಾಣಿ ಸಂಪಾದಕೀಯದಲ್ಲಿ ಈ ವಿಚಾರವಾಗಿ ಮುಕ್ತ ಚರ್ಚೆಗೆ ಆಹ್ವಾನವಿದ್ದು. edit@udayavani.comಗೆ ನಿಮ್ಮ ಅಭಿಪ್ರಾಯ ತಿಳಿಸಬಹುದು.
ಲೇಖನ ಮಿತಿ 500 ಪದಗಳು.

(ಕೃಪೆ:ಅಮರ್‌ ಉಜಾಲಾ)
ಆರ್‌. ವಿಕ್ರಂ ಸಿಂಗ್‌, ಜಿಲ್ಲಾಧಿಕಾರಿ, ಉ.ಪ್ರ.

Advertisement

Udayavani is now on Telegram. Click here to join our channel and stay updated with the latest news.

Next