ಚನ್ನಪಟ್ಟಣ: ಸುಮಾರು 8 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಗುರುತರ ಸೇವೆ ಸಲ್ಲಿಸಿದ ಪೊಲೀಸ್ ಶ್ವಾನ “ಜಾಕಿ’ ಅನಾರೋಗ್ಯದಿಂದ ಸಾವನ್ನಪ್ಪಿದೆ. ಪಟ್ಟಣದ ಜಿಲ್ಲಾ ಶಸಸ್ತ್ರ ಮೀಸಲು ಪಡೆಯಲ್ಲಿ ನಿರಂತರವಾಗಿ ತನ್ನ ಖಡಕ್ ಸೇವೆಯಿಂದ ಪ್ರಸಿದ್ಧಿ ಪಡೆದಿದ್ದ ಜಾಕಿ ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಾ ಸಾವು ಬದುಕಿನ ಜತೆ ಹೋರಾಟ ನಡೆಸುತಿತ್ತು. ಜಾಕಿ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದ ವೈದ್ಯರು, ಕೆಲ ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆಗೆ ಜಾಕಿಯ ದೇಹ ಸ್ಪಂದಿಸದೆ ದೇಹಸ್ಥಿತಿ ಗಂಭೀರತೆ ಪಡೆದುಕೊಂಡಿತ್ತು. ಪಟ್ಟಣದ ಪಶು ವೈದ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯಿತು.
2011ರಲ್ಲಿ ಸೇರ್ಪಡೆ: ಲ್ಯಾಬ್ರಡಾರ್ ತಳಿಯ 7 ತಿಂಗಳ ಮರಿಯನ್ನು ತಂದಿದ್ದ ಪೊಲೀಸ್ ಇಲಾಖೆ ಬೆಂಗಳೂರಿನ ಸಿಎಆರ್ ದಕ್ಷಿಣದಲ್ಲಿ 10 ತಿಂಗಳು ತರಬೇತಿ ಮುಗಿಸಿ, 2011ರಲ್ಲಿ ಇಲಾಖೆಗೆ ನೇಮಿಸಿಕೊಂಡಿತ್ತು. ಇಲಾಖೆಗೆ ಆಗಮಿಸುತ್ತಿದ್ದಂತೆ ತನ್ನ ಚಾಕಚಕ್ಯತೆ ಮೂಲಕ ಜಾಕಿ ಹೆಸರು ಪಡೆದುಕೊಂಡ ಶ್ವಾನ ಜಾಕಿ ಎಂದರೆ ಪೊಲೀಸ್ ಇಲಾಖೆಯಲ್ಲಿ ಒಂದು ಶಕ್ತಿ ಎಂಬಂತಾಗಿತ್ತು. ದೆಹಲಿ ಮಟ್ಟದಲ್ಲೂ ಹೆಸರು ಪಡೆದಿತ್ತು.
ಬಾಂಬ್ ಪತ್ತೆ ಕಾರ್ಯಕ್ಕೆ ನಿಸ್ಸೀಮ: ಬಾಂಬ್ ಪತ್ತೆ ಮಾಡುವುದರಲ್ಲಿ ನಿಸ್ಸೀಮನಾಗಿದ್ದ ಜಾಕಿ ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪ್ರಧಾನಿ ಮೋದಿ ಅವರು ಭಾಗವಹಿಸಿದ ಬಹಿರಂಗ ಸಭೆಗಳಲ್ಲಿ ಸಭೆ ನಡೆಯುವ ಹಿಂದಿನ ದಿನ ಬಾಂಬ್ ಪತ್ತೆ ಕಾರ್ಯಕ್ಕೆ ಕರೆದೊಯ್ಯಲಾಗುತ್ತಿತ್ತು.
ವರ್ಷದ ಹಿಂದೆ ರಾಮನಗರದ ಗೌಸಿಯಾ ಕಾಲೇಜಿಲ್ಲಿ ಹುಸಿ ಬಾಂಬ್ ಕರೆಯೊಂದರಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲದೆ ಶಿಕ್ಷಕ ವರ್ಗವೇ ದಂಗಾಗಿ ಹೋದ ಸಂದರ್ಭದಲ್ಲಿ ಕಾಲೇಜಿಗೆ ಕರೆದೊಯ್ದು ಶೋಧಿಸಿತ್ತು. ಸಿಬ್ಬಂದಿಗಳಾದ ಶಿವಕುಮಾರ್, ರವಿ ಜಾಕಿಯ ಉಸ್ತುವಾರಿ ಹೊತ್ತಿದ್ದರು. ಸಕಲ ಗೌರವಗಳೊಂದಿಗೆ ಜಾಕಿಯ ಅಂತ್ಯಸಂಸ್ಕಾರವನ್ನು ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ನೆರವೇರಿಸಲಾಯಿತು. ಪೊಲೀಸ್ ಉಪವಿಭಾಗಾಧಿಕಾರಿ ಮಲ್ಲೇಶ್, ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಮಹೇಶ್ ಹಾಗೂ ಹಲವು ಪೊಲೀಸ್ ಅಧಿಕಾರಿಗಳು ಹಾಜರಿದ್ದರು.