ಕಲಬುರಗಿ: ತಣ್ಣೀರು ಎಂದರೆ ಸಾಕು, ಗದಗದ ನಡುಗುತ್ತಿದ್ದ. ಅಂತಹವನು ಈಗ ತಣ್ಣೀರಿನಲ್ಲಿಯೇ ಕಳೆದು ಹೋಗಿದ್ದಾನೆ. ದೇವರೇ ಹ್ಯಾಂಗಾರ ಮಾಡಪ್ಪೋ ನನ್ನ ಮಗ ಮನಿಗಿ ಬರಲಿ. ಅವನಿಗಿ ಉಳಿಸಿ ಕೊಡಪ್ಪೋ, ಯಾರಾದ್ರೂ ಬಂದು ಹೇಳಿ..ನನ್ನ ಮಗ ಸಿಕ್ಕಾನಂತ.
ಹೀಗೆ ಹೆತ್ತಮ್ಮ ಸಂಗೀತಾ ಮೆಹತರ್ ನೋವು ತೋಡಿ ಕೊಳ್ಳುತ್ತಿರುವುದನ್ನು ನೋಡಿದರೆ ಕರುಳು ಚುರಕ್ ಎನ್ನುತ್ತಿತ್ತು. ಹೆತ್ತಮ್ಮನ ಕಣ್ಣೀರು ಇಂಗಿ ಹೋಗಿದ್ದು ಒಂದೆಡೆ ಆದರೆ, ಇನ್ನೊಂದೆಡೆ ಹೆತ್ತಪ್ಪ ರಾಕೇಶ ಮೇಹತಾರ್ ಎದೆ ಗೂಡು ಒಡೆದು ಹೋಗಿ ಸದ್ದೆ ಹೊರಡದೇ ಮೌನವಾಗಿತ್ತು. ಇಡೀ ಮನೆಯಲ್ಲಿ ನೀರವ ಮೌನ ಆವರಿಸಿತ್ತು.
ಐದು ದಿನ ಕಳೆದರೂ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಪಾಲಿಕೆ ಕಾರ್ಮಿಕರು, ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಯುವಕರು ಹುಡುಕಾಡಿದರೂ ಕೃಷ್ಣನ ದೇಹ ಸಿಗುತ್ತಿಲ್ಲ. ಇದರಿಂದ ಇಡೀ ಕುಟುಂಬದ ಆತ್ಮಸ್ಥೈರ್ಯ ಅಡಗಿ ಹೋಗಿದೆ. ಆದರೂ ಎಲ್ಲೋ ಒಮ್ಮೆ ದೇಹ ಸಿಕ್ಕರೂ ಸಿಗಬಹುದು ಎನ್ನುವ ಉಮೇದಿಯಿಂದ ಸರಕಾರ ಕಡೆಗೆ, ಪಾಲಿಕೆಯ ಕಡೆಗೆ, ಅಧಿಕಾರಿಗಳ ಕಡೆಗೆ, ಪೊಲೀಸರ ಕಡೆಗೆ ಆಸೆ ಕಣ್ಣಿನಿಂದ ಕುಟುಂಬ ಇದಿರು ನೋಡುತ್ತಿದೆ.
ಕಕ್ಕಾಬಿಕ್ಕಿ ನೋಟ: ತಮ್ಮೊಂದಿಗೆ ಸದಾ ಆಡುತ್ತಿದ್ದ, ಗುದ್ದಾಡುತ್ತಿದ್ದ ತಮ್ಮನಿಲ್ಲದೆ ಅಣ್ಣ ಆಶೀಷ್, ಅಣ್ಣನಿಲ್ಲದೆ ಸಚಿನ್ ಮತ್ತು ಅಕ್ಷರಾ ಮಾತ್ರ ಮನೆಗೆ ಬಂದು ಹೋಗುವವರನ್ನು ಹಾಗೂ ಅತ್ತು ಅತ್ತು ಬಳಲಿರುವ ಅಮ್ಮ, ಅಪ್ಪ ಮುಖ ನೋಡುವುದು ಮಾತ್ರ ಅಕ್ಷಮ್ಯ. ಎಂತಹವರಿಗೂ ಈ ಮಕ್ಕಳ ಪರಿಸ್ಥಿತಿ ನೋಡಿದರೆ ದೇವರ ಮೇಲೆ ಸಿಟ್ಟು ಬರಿಸುವಂತಿತ್ತು.. ಛೇ ಎನ್ನುತ್ತಲೇ ಮಕ್ಕಳ ಮುಖ ನೋಡಬೇಕಾಗಿತ್ತು.
24ರ ಘಟನೆ: ಜೂ.24ರಂದು ಆಟವಾಡುತ್ತಿದ್ದಾಗ ಗಾಜಿಪುರದ ಮೆಹತರ್ ಗಲ್ಲಿಯಲ್ಲಿನ ಚರಂಡಿಯಲ್ಲಿ ಬಿದ್ದ 7 ವರ್ಷದ ಬಾಲಕ ಕೃಷ್ಣ ಶುಕ್ರವಾರಕ್ಕೆ 5 ದಿನಗಳು ಕಳೆದಿವೆ. ಇದೊಂದು ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ ಪ್ರಕರಣ. ಕಳೆದ ಐದು ದಿನಗಳಿಂದ ನಿರಂತರವಾಗಿ ಬಾಲಕನ ದೇಹ ಹುಡುಕುವ ಕೆಲಸ ನಡೆಯುತ್ತಿದೆ. ಆದರೂ ದೇಹ ಸಿಗುತ್ತಿಲ್ಲ.