ಶಿರಸಿ: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಭವಿಷ್ಯ ನುಡಿದಿದ್ದಾರೆ.
ಶನಿವಾರ ನಗರದ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಜರುಗಿದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಸಂಘಟನೆ ಆಧಾರದಲ್ಲಿ ಚುನಾವಣೆ ನಡೆಸುವ ಶಕ್ತಿ ಇಲ್ಲಿಯ ಜನತೆಯಲ್ಲಿದೆ. ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಮಿಷ, ವಿಶೇಷ ಅಪೇಕ್ಷೆಗಳಿಲ್ಲದೆ, ಕೇವಲ ಸಂಘಟನೆ, ರಾಷ್ಟ್ರ ಭಕ್ತಿಯ ಕಾರ್ಯವೆಂದು ಭಾವಿಸಿ ಇಲ್ಲಿಯ ಜನರು ಸಂಘಟನೆಯಲ್ಲಿ ತೊಡಗಿಕೊಳ್ಳುವುದು ವಿಶೇಷವಾಗಿದೆ ಎಂದರು.
ಕಾಮಗಾರಿಗಳ ಪಟ್ಟಿಯನ್ನಾಧರಿಸಿ ಅಭಿವೃದ್ಧಿ ಕುರಿತು ಲೆಕ್ಕಾಚಾರ ಮಾಡುವುದು ಸಮಂಜಸವಲ್ಲ. ಕಾಮಗಾರಿಗಳನ್ನು ಅಭಿವೃದ್ಧಿ ಎಂದು ಅರಿಯುವ ರೋಗಗ್ರಸ್ಥ ಕಣ್ಣುಗಳು ಸಮಾಜದ ದಿಕ್ಕನ್ನು ತಪ್ಪಿಸುತ್ತಿವೆ. ಇದಕ್ಕೆ ಉತ್ತರವಾಗಿ ಕಾರ್ಯಕರ್ತರು ದೇಶದ ಬೌದ್ಧಿಕ ವಿಕಾಸಗಳನ್ನು ರೋಗಗ್ರಸ್ಥ ಮನಸ್ಸುಗಳಿಗೆ ಅರಿಕೆ ಮಾಡಿಕೊಡಬೇಕು ಎಂದರು.
ನನ್ನ ಮೊದಲನೆ ಚುನಾವಣೆಯಿಂದ ಇಂದಿನವರೆಗೂ ಭಾವನೆಗಳಿಗೆ ನಾಲಿಗೆ ನೀಡಿಲ್ಲ. ಅಭ್ಯರ್ಥಿ ಅನಂತಕುಮಾರ ಆದರೂ ಪಕ್ಷ ಮತ್ತು ಸಂಘಟನೆಗೆ ಗೆಲುವು ದೊರಕಬೇಕು. ಆಗ ಮಾತ್ರ ಸಿದ್ಧಾಂತ, ತತ್ವಗಳು ಜೀವಂತವಾಗಿರುತ್ತದೆ. ಒಮ್ಮೆ ಅನಂತಕುಮಾರ ಸೋತರೆ ಯಾವುದೇ ನಷ್ಟ ಆಗೊಲ್ಲ. ಬದಲಾಗಿ ಸಂಘಟನೆಗೆ ಬಹುದೊಡ್ಡ ಹೊಡೆತ ಬೀಳುತ್ತದೆ. ಹೆಗಡೆ ಬರಲಿ, ಇನ್ಯಾರೇ ಬರಲಿ ಗೆಲುವು ಪಕ್ಷದ್ದಾಗಬೇಕು ಎಂದರು. ಪಕ್ಷಕ್ಕಿಂತ ಮಿಗಿಲಾಗಿ ಸಾವಿರಾರು ಅನಾಮಧೇಯ ಸಂಘ ಪರಿವಾರದ ಕಾರ್ಯಕರ್ತರು ಚುನಾವಣೆ ಪೂರ್ವದಲ್ಲಿಯೇ ಸಂಘಟನೆ ಕಾರ್ಯ ಆರಂಭಿಸಿದ್ದಾರೆ. ಜಗತ್ತಿನ ಮಧ್ಯದಲ್ಲಿ ಭಗವಾಧ್ವಜ ಹಾರಾಡುವ ನಿರೀಕ್ಷೆಯ ದಿನ ಹತ್ತಿರ ಬಂದಿದ್ದರಿಂದ ಹಗಲು ರಾತ್ರಿ ಶ್ರಮವಹಿಸಿದ್ದಾರೆ ಎಂದರು. ಬಿಜೆಪಿ ಪ್ರಮುಖರಾದ ಪ್ರಮೋದ ಹೆಗಡೆ, ಸುನೀಲ್ ಹೆಗಡೆ, ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ವಿವೇಕಾನಂದ ವೈದ್ಯ, ದಿನಕರ ಶೆಟ್ಟಿ, ಆರ್. ಡಿ. ಹೆಗಡೆ, ವಿನೋದ ಪ್ರಭು, ಎನ್.ಜಿ. ನಾಯ್ಕ, ವಿಕ್ರಮಾದಿತ್ಯ ಇನ್ನಿತರರು ಇದ್ದರು.