ಹುಣಸೂರು: 70 ವರ್ಷದಿಂದ ದೇಶವನ್ನು ಆಳಿದ ಕಾಂಗ್ರೆಸ್ಸಿಗರು ರಾಜ್ಯದಲ್ಲಿ ಇದುವರೆಗೂ ದಲಿತ ಮುಖ್ಯಮಂತ್ರಿ ಮಾಡಲೇ ಇಲ್ಲ, ಕಾಂಗ್ರೆಸ್‌ನಿಂದ ದಲಿತರು ಉದ್ಧಾರ ಸಾಧ್ಯವೇ ಎಂದು ಬಿಜೆಪಿ ಮುಖಂಡ, ಛಲವಾದಿ ಮಹಾಸಭಾದ ಸಂಸ್ಥಾಪಕ ಕೆ.ಶಿವರಾಂ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಬಡ್ತಿ ಮೀಸಲಾತಿ ಬೇಡವೆಂದರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಗ್ರೀವಾಜ್ಞೆ ತಂದು ರಾಷ್ಟ್ರಪತಿ ಅಂಕಿತ ಹಾಕಿಸಿದರೂ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಈ ಮೈತ್ರಿ ಸರ್ಕಾರ ಇನ್ನೂ ಜಾರಿಗೆ ತಂದಿಲ್ಲ.
ಕಾಂಗ್ರೆಸ್ಸಿಗರೂ ಪ್ರಶ್ನಿಸುತ್ತಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ದಲಿತರ ಬಗ್ಗೆ ಕಾಳಜಿ ಇಲ್ಲದ್ದರಿಂದಾಗಿ ಜಾರಿಗೆ ಮುಂದಾಗಿಲ್ಲ, ಇದರಿಂದಾಗಿ ರಾಜ್ಯದ 20 ಸಾವಿರಕ್ಕೂ ಹೆಚ್ಚು ಮಂದಿ ದಲಿತ ನೌಕರರು ಬೀದಿಪಾಲಾಗಿದ್ದಾರೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಕೇಂದ್ರ ಸಚಿವ ಅನಂತಕುಮಾರ್ ಮಾತಿನ ಭರದಲ್ಲಿ ಆಡಿದ ವಿವಾದಾತ್ಮಕ ಹೇಳಿಕೆಗೆ ಈಗಾಗಲೇ ಕ್ಷಮೆ ಕೋರಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಬದಲಾವಣೆ ಮಾಡುತ್ತಾರೆಂಬ ಕಾಂಗ್ರೆಸ್-ಜೆಡಿಎಸ್ ಅಪಪ್ರಚಾರ ನಡೆಸುತ್ತಿದ್ದು, ಇನ್ನು ದಲಿತ ಮುಖಂಡರೇ ಇದನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಇದನ್ನು ದಲಿತರು ನಂಬದೆ ದಲಿತರ ಪರವಾಗಿರುವ ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕೋರಿದರು.
ಅಂಬೇಡ್ಕರ್ ಪುಣ್ಯಸ್ಥಳ ಅಭಿವೃದ್ಧಿ: ಅಂಬೇಡ್ಕರ್‌ರ ಪವಿತ್ರವಾದ ಸಂವಿಧಾನದ ಬಗ್ಗೆ ಮೋದಿಗೆ ಅಪಾರ ಗೌರವ ಹೊಂದಿದ್ದರಿಂದಲೇ ಅವರಿಗೆ ಸಂಬಂಧಿಸಿದ ಐದು ಪುಣ್ಯ ಸ್ಥಳಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡಿದ್ದಾರೆ. ಮೋದಿ ಮತ್ತೂಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿ ಬೆಂಬಲಿಸಬೇಕು. ಈ ಮೂಲಕ ಪ್ರತಾಪ್ ಸಿಂಹ ಅವರನ್ನು ಪುನರಾಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಅದೃಷ್ಟದ ಮೇಲೆ ನಂಬಿಕೆ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲು ಶ್ರೀನಿವಾಸಪ್ರಸಾದ್ ಅವರು ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಯಡಿಯೂರಪ್ಪರ ಸೂಚನೆಯಂತೆ ಚಾಮರಾಜನಗರ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿದ್ದೆ. ಆದರೆ, ಕಡೆಗಳಿಗೆಯಲ್ಲಿ ತಾನೇ ಸ್ಪರ್ಧಿಸುತ್ತೇನೆಂದು ಹೇಳಿದ್ದರಿಂದ ನಾನು ಹಿಂದೆ ಸರಿದೆ.
ಪಕ್ಷವು ಕೋಲಾರದಲ್ಲಿ ಸ್ಪರ್ಧಿಸಿ ಎಂದು ಸೂಚಿಸಿದರೂ ತಾವು ಒಪ್ಪಲಿಲ್ಲ. ತಮಗೆ ಅದೃಷ್ಟದ ಮೇಲೆ ನಂಬಿಕೆ ಇದ್ದು, ಮುಂದೆ ಪಕ್ಷದಲ್ಲಿ ಒಳ್ಳೆಯ ಅವಕಾಶವಿದೆ. ರಾಜ್ಯದೆಲ್ಲೆಡೆ ಸಂಚರಿಸಿ, ಸಂಘಟನೆಯೊಂದಿಗೆ ಮತಯಾಚಿಸುತ್ತಿದ್ದೇನೆ. ಮುಂದೆ ಉತ್ತಮ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ರಾಜು, ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಅಪ್ಪಣ್ಣ, ನಗರ ಅಧ್ಯಕ್ಷ ರಾಜೇಂದ್ರ, ಜಿಪಂ ಮಾಜಿ ಸದಸ್ಯ ರಮೇಶಕುಮಾರ್ ಇತರರಿದ್ದರು.