Advertisement

ಮೈತ್ರಿ ಸರ್ಕಾರದ ವಿರುದ್ಧ ಜನಾಂದೋಲನಕ್ಕೆ ಬಿಜೆಪಿ ಸಜ್ಜು

10:59 PM Jun 05, 2019 | Lakshmi GovindaRaj |

ಬೆಂಗಳೂರು: ರಾಜ್ಯ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನಕ್ಕಿಂತ ರಾಜ್ಯ ಮೈತ್ರಿ ಸರ್ಕಾರದ ವೈಫ‌ಲ್ಯ, ಭ್ರಷ್ಟಾಚಾರ, ತಾರತಮ್ಯ ಧೋರಣೆ, ಅಭಿವೃದ್ಧಿ ಕಡೆಗಣನೆ ವಿಚಾರಗಳನ್ನು ಮುಂದಿಟ್ಟುಕೊಂಡು ಜನಾಂದೋಲನ ಮೂಡಿಸಲು ಬಿಜೆಪಿ ಸಜ್ಜಾಗಿದೆ.

Advertisement

ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಜೂ.7ರಿಂದ ಮೂರು ದಿನ ಬರ ಪರಿಶೀಲನಾ ಪ್ರವಾಸ ಕೈಗೊಂಡರೆ, ಮತ್ತೂಂದೆಡೆ ಜೆಎಸ್‌ಡಬ್ಲೂ ಸಂಸ್ಥೆಗೆ ಭೂಮಿ ಪರಭಾರೆ ನಿರ್ಧಾರ, ಬರ ನಿರ್ವಹಣೆ ವೈಫ‌ಲ್ಯ, ನೆರೆಪೀಡಿತ ಕೊಡಗು ಪ್ರದೇಶದಲ್ಲಿ ಪುನರುಜ್ಜೀವನ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳದಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಜೂ.13ರಿಂದ ನಿರಂತರವಾಗಿ 3 ದಿನ ಧರಣಿ, ಸತ್ಯಾಗ್ರಹ ನಡೆಸಲು ಬುಧವಾರ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿಯವರು ಜೂ.21ರಂದು ಗುರಮಿಠ್ಕಲ್‌ ಕ್ಷೇತ್ರದಲ್ಲಿ ಶಾಲಾ ವಾಸ್ತವ್ಯ ಹೂಡಲಿದ್ದು, ಅದಕ್ಕೂ ಮೊದಲೇ ಯಡಿಯೂರಪ್ಪ ಅವರು ಜೂ. 9ರಂದು ಗುರಮಿಠ್ಕಲ್‌ ಕ್ಷೇತ್ರದಲ್ಲಿ ಬರ ಪರಿಶೀಲನೆ ಪ್ರವಾಸ ಹಮ್ಮಿಕೊಂಡಿರುವುದು ಕುತೂಹಲ ಮೂಡಿಸಿದೆ. ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೆಲ ಶಾಸಕರು, ಹೊಸ ಸಂಸದರು ಕೆಲ ಸಲಹೆ ನೀಡಿದ್ದು,ಸಲಹೆಗಳು ಇಂತಿವೆ:

– ಸಂಸತ್‌ನ ಮಳೆಗಾಲದ ಅಧಿವೇಶನದ ಬಳಿಕ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಎಲ್ಲ ಸಂಸದರು, ಶಾಸಕರೊಂದಿಗೆ ಒಂದು ದಿನ ಸಭೆ ನಡೆಸಿ ರಾಜ್ಯದ ಅಭಿವೃದ್ಧಿ ಕುರಿತಂತೆ ನೀಲನಕ್ಷೆ ಸಿದ್ಧಪಡಿಸಬೇಕು.

– ಕರ್ನಾಟಕದ ಯೋಜನೆಗಳ ಬಗ್ಗೆ ಚರ್ಚಿಸಿ ಕೇಂದ್ರದಿಂದ ಹೆಚ್ಚು ಅನುದಾನ ಪಡೆಯುವ ಸಲುವಾಗಿ 2 ತಿಂಗಳಿಗೊಮ್ಮೆ ಎಲ್ಲ ಸಂಸದರು, ಶಾಸಕರು ಸೇರಿ ಸಭೆ ನಡೆಸಬೇಕು.

Advertisement

– ದೆಹಲಿಯಲ್ಲಿ ಸಂಸತ್‌ ಅಧಿವೇಶನ ನಡೆಯುವಾಗ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಸಂಸದರ ಸಭೆ ನಡೆಸಿ ಚರ್ಚಿಸಬೇಕು.

ಸರ್ಕಾರ, ಸಚಿವರ ವಿರುದ್ಧ ಆಕ್ರೋಶ: ಮೈತ್ರಿ ಸರ್ಕಾರವು ಅನುದಾನ ಹಂಚಿಕೆಯಲ್ಲಿ ತಾರತಮ್ಯ ತೋರುತ್ತಿದ್ದು, ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಹಕಾರ ಸಿಗುತ್ತಿಲ್ಲ ಎಂದು ಬಿಜೆಪಿ ಶಾಸಕರು ಸಭೆಯಲ್ಲಿ ಅಳಲು ತೋಡಿಕೊಂಡಿದ್ದಾರೆ.

ಶಾಸಕರಾಗಿ ಅನುದಾನ ಕೇಳಿದರೆ 25 ಲಕ್ಷ ರೂ.ನೀಡುತ್ತಾರೆ. ಗುತ್ತಿಗೆದಾರರೇ ನಮ್ಮ ಶಿಫಾರಸು ಪತ್ರ ಹಿಡಿದು ಹೋದರೆ ಕೋಟ್ಯಂತರ ರೂ.ಅನುದಾನಕ್ಕೆ ಮಂಜೂರಾತಿ ನೀಡುತ್ತಿದ್ದಾರೆ. ಆ ಮೂಲಕ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಅಭಿವೃದ್ಧಿ ಕಾಮಗಾರಿಗಳಲ್ಲಿ ತಾರತಮ್ಯ ತೋರುತ್ತಾರೆ.

ಟೆಂಡರ್‌ ಹಂಚಿಕೆಯಾದರೂ ಕೆಲಸ ಆರಂಭಿಸಲು ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದರ ವಿರುದ್ಧ ಹೋರಾಟ ನಡೆಸೋಣ ಎಂಬುದಾಗಿ ಯಡಿಯೂರಪ್ಪ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.

ಮೂರು ತಿಂಗಳು ಕಾಯೋಣ?: ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸರ್ಕಾರ ರಚನೆ ಪ್ರಯತ್ನಕ್ಕಿಂತ ಪ್ರಬಲ ಪ್ರತಿಪಕ್ಷವಾಗಿ ಮೈತ್ರಿ ಸರ್ಕಾರದ ವಿರುದ್ಧ ಕಾರ್ಯ ನಿರ್ವಹಿಸಲು ಆದ್ಯತೆ ನೀಡಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ. ಒಂದೊಮ್ಮೆ ಮೈತ್ರಿ ಸರ್ಕಾರ ತಾನಾಗಿಯೇ ಬಿದ್ದರೆ ಮುಂದಿನ ನಡೆ ಬಗ್ಗೆ ನಂತರ ಚಿಂತಿಸೋಣ. ಇನ್ನೂ ಎರಡು, ಮೂರು ತಿಂಗಳ ಕಾಲ ಕಾಯೋಣ ಎಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಬಿಎಸ್‌ವೈ ಬರ ಪರಿಶೀಲನೆ ಪ್ರವಾಸ ವಿವರ
ಜೂ.7- ಬೆಳಗ್ಗೆ 11ಕ್ಕೆ ಬಾಗಲಕೋಟೆ ಜಿಲ್ಲೆಯ ಬದಾಮಿ. ಮಧ್ಯಾಹ್ನ 3ಕ್ಕೆ ಹುನಗುಂದ.
ಜೂ.8- ಬೆಳಗ್ಗೆ 11ಕ್ಕೆ ಕೊಪ್ಪಳ ವಿಧಾನಸಭಾ ಕ್ಷೇತ್ರ. ಮಧ್ಯಾಹ್ನ 3 ಲಿಂಗಸುಗೂರು ವಿಧಾನಸಭಾ ಕ್ಷೇತ್ರ.
ಜೂ.9- ಬೆಳಗ್ಗೆ 11ಕ್ಕೆ ಯಾದಗಿರಿ. ಮಧ್ಯಾಹ್ನ 3ಕ್ಕೆ ಗುರಮಿಠ್ಕಲ್‌ ವಿಧಾನಸಭಾ ಕ್ಷೇತ್ರ.

ಜಿಂದಾಲ್‌ಗೆ ಭೂಮಿ ಪರಭಾರೆ ವಿರುದ್ಧ ಹೋರಾಟ: ಜೆಡಬ್ಲೂಎಸ್‌ ಕಂಪನಿಗೆ 3,667 ಎಕರೆ ಭೂಮಿಯನ್ನು ಕಡಿಮೆ ಬೆಲೆಗೆ ಪರಭಾರೆ ಮಾಡಲು ಸರ್ಕಾರ ಮುಂದಾಗಿರುವುದು ಖಂಡನೀಯ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಹಗಲು ದರೋಡೆಗಿಳಿದಂತೆ ಮೈತ್ರಿ ಸರ್ಕಾರವು ಬೆಲೆಬಾಳುವ ಭೂಮಿಯ ಪರಭಾರೆಗೆ ಮುಂದಾಗಿದೆ. ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಸೇರಿದಂತೆ ಕಾಂಗ್ರೆಸ್‌ನ ಹಲವರು ಇದನ್ನು ವಿರೋಧಿಸಿದ್ದಾರೆ.

ಯಾವುದೇ ಕಾರಣಕ್ಕೂ ಕಬ್ಬಿಣದ ಅದಿರು ನಿಕ್ಷೇಪವಿರುವ ಭೂಮಿಯನ್ನು ಜೆಎಸ್‌ಡಬ್ಲೂ ಸಂಸ್ಥೆಗೆ ಪರಭಾರೆ ಮಾಡಲು ಅವಕಾಶ ನೀಡದಂತೆ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಸುರೇಶ್‌ ಅಂಗಡಿಯವರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಮೂರು ದಿನ ಧರಣಿ- ಸತ್ಯಾಗ್ರಹ: ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅರವಿಂದ ಲಿಂಬಾವಳಿ, ಬರ ನಿರ್ವಹಣೆಯಲ್ಲಿ ವೈಫ‌ಲ್ಯ, ಜೆಎಸ್‌ಡಬ್ಲೂ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ನಿರ್ಧಾರ, ಬಿಜೆಪಿ ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಹಾಗೂ ಮೈತ್ರಿ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಜೂ.13ರಿಂದ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಧರಣಿ- ಸತ್ಯಾಗ್ರಹ ನಡೆಸಲಾಗುವುದು. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುವ ಧರಣಿಯಲ್ಲಿ ರಾಜ್ಯದ ಎಲ್ಲ ಬಿಜೆಪಿ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮೈತ್ರಿ ಸರ್ಕಾರದ ಹಲವು ಸಚಿವರ ಕಮೀಷನ್‌ ದಂಧೆ, ವರ್ಗಾವಣೆ ದಂಧೆ ಹಾಗೂ ಅನುದಾನ ತಾರತಮ್ಯದ ವಿರುದ್ಧ ಹೋರಾಟ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಸಂಘಟನಾತ್ಮಕ ವಿಷಯವಾಗಿದ್ದು, ಕೇಂದ್ರ ಹಾಗೂ ಉಳಿದ ರಾಜ್ಯಗಳ ಮಾದರಿಯಲ್ಲೇ ರಾಜ್ಯದಲ್ಲೂ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆಯಲಿದೆ.
– ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next