Advertisement

ಬಿಜೆಪಿ ಹಿಂದಿನ ಹಿಡಿತ ಬಿಗಿಗೊಳಿಸುವ ಪಟ್ಟು

10:55 AM Mar 23, 2018 | |

ರಾಜ್ಯದಲ್ಲಿ ಅಧಿಕಾರ ಹಿಡಿದೇ ತೀರಬೇಕೆಂಬ ಛಲದಲ್ಲಿ ಪ್ರಧಾನಿಯಾದಿಯಾಗಿ ಬಿಜೆಪಿಯ ಘಟಾನುಘಟಿ ನಾಯಕರು ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ. ಇತ್ತ ಐದು ವರ್ಷಗಳ ಅವಧಿಯಲ್ಲಿ ತಾನು ಕೊಟ್ಟ ಕೊಡುಗೆಗಳನ್ನು ಮುಂದಿರಿಸಿಕೊಂಡು ಕಾಂಗ್ರೆಸ್‌ ಮತ ಕೇಳಲು ಸಜ್ಜಾಗಿದೆ. ಇನ್ನೊಂದೆಡೆ ಇಬ್ಬರು ಹಾಲಿ ಶಾಸಕರ ಬಂಡಾಯದಿಂದ ಬೆಂಡಾಗಿರುವ ಜೆಡಿಎಸ್‌, ಅಲ್ಲಲ್ಲಿ ಸಭೆ, ಸಂವಾದ ನಡೆಸುತ್ತಾ ಪಕ್ಷದ ಬಲವರ್ಧನೆಗೆ ಹೆಣಗಾಡುತ್ತಿದೆ. ಒಟ್ಟಾರೆ ರಾಜಧಾನಿಯಲ್ಲಿ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿರುವ ಈ ಸಮಯದಲ್ಲಿ ಮೂರೂ ಪಕ್ಷಗಳ ತಂತ್ರ, ಪ್ರತಿತಂತ್ರ, ಪ್ರಚಾರ, ಕಾರ್ಯವೈಖರಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ…

Advertisement

ಬೆಂಗಳೂರು: ರಾಜ್ಯದಲ್ಲೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆ ಮೇಲಿನ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿ, ಆ ಮೂಲಕ 2008ರ ಫ‌ಲಿತಾಂಶವೇ ಈ ಬಾರಿ ವಿಧಾನಸಭೆ ಚುನಾವಣೆಯಲ್ಲೂ ಮುರುಕಳಿಸುವಂತೆ ಮಾಡಲು ಬಿಜೆಪಿ ಸತತ ಪ್ರಯತ್ನ ನಡೆಸುತ್ತಿದೆ.

ನಗರ ಜಿಲ್ಲೆಯ 28 ಕ್ಷೇತ್ರಗಳ ಪೈಕಿ, 2008ರ ಚುನಾವಣೆಯಲ್ಲಿ 17 ಸ್ಥಾನ ಗೆದ್ದು ಇತಿಹಾಸ ಬರೆದಿದ್ದ ಬಿಜೆಪಿ, 2013ರ ಚುನಾವಣೆಯಲ್ಲಿ 11 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿತ್ತು. 2008ರಲ್ಲಿ 10 ಸ್ಥಾನ ಗಳಿಸಿದ್ದ ಕಾಂಗ್ರೆಸ್‌, 2013ರಲ್ಲಿ 13 ಸ್ಥಾನ ಗೆದ್ದು ಬೀಗಿತ್ತು. ಈ ಬಾರಿ ಬೆಂಗಳೂರು ನಗರ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಪಡೆಯುವ ಗುರಿ ಹೊಂದಿರುವ ಬಿಜೆಪಿ, ರಾಜ್ಯ, ರಾಷ್ಟ್ರೀಯ ನಾಯಕರನ್ನೂ ರಾಜಧಾನಿಗೆ ಕರೆಸಿ ಶಕ್ತಿ ಪ್ರದರ್ಶನ ನಡೆಸುತ್ತಿದೆ.

ವರ್ಷದಿಂದಲೇ ಸಿದ್ಧತೆ: ಒಂದು ವರ್ಷದ ಹಿಂದೇ ಸಿದ್ಧತೆ ಆರಂಭಿಸಿರುವ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ಸರಣಿ ಹೋರಾಟ ಮಾಡಿಕೊಂಡು ಬಂದಿದೆ. ಕಳೆದ ಆಗಸ್ಟ್‌ನಿಂದ ಬಹುತೇಕ ಎಲ್ಲ ಬೂತ್‌ಗಳಲ್ಲೂ ಕಮಿಟಿಗಳು ರಚನೆಯಾಗಿದ್ದು, ತಳಮಟ್ಟದಿಂದಲೇ ಕೆಲಸ ಆರಂಭಿಸಿದೆ. ಇನ್ನೊಂದೆಡೆ ಬಿಬಿಎಂಪಿ ವಿರುದ್ಧ ಆರೋಪ ಪಟ್ಟಿ ಬಿಡುಗಡೆ, ಕಾಂಗ್ರೆಸ್‌ ಸರ್ಕಾರದ ವಿರುದ್ಧ “ಬೆಂಗಳೂರು ರಕ್ಷಿಸಿ’ ಪಾದಯಾತ್ರೆ ಹೋರಾಟದ ಮೂಲಕ ಜನರನ್ನು ತಲುಪಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ನ ಹಲವು ಪ್ರಮುಖರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ.

2008ರಲ್ಲಿ ಗೆದ್ದ 17 ಕ್ಷೇತ್ರಗಳೊಂದಿಗೆ ಇನ್ನಷ್ಟು ಕ್ಷೇತ್ರಗಳನ್ನೂ ಗೆಲ್ಲಬೇಕು ಎಂಬ ಪ್ರಯತ್ನದಲ್ಲಿದೆ. ಆರ್‌.ಅಶೋಕ್‌, ಅರವಿಂದ ಲಿಂಬಾವಳಿ ನೇತೃತ್ವ ವಹಿಸಿದ್ದು, ಕೇಂದ್ರ ಸಚಿವರಾದ ಅನಂತಕುಮಾರ್‌ ಮತ್ತು ಡಿ.ವಿ.ಸದಾನಂದಗೌಡ ಕೂಡ ಸಕ್ರಿಯರಾಗಿದ್ದಾರೆ.

Advertisement

ಮೋದಿ, ಶಾ ಆಪ್ತರ ಉಸ್ತುವಾರಿ?: ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಚುನಾವಣಾ ತಂತ್ರಗಾರಿಕೆ ರೂಪಿಸುವಲ್ಲಿ ಚಾಣಾಕ್ಷರಾದ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರಾದ ಕೇಂದ್ರ ಸಚಿವ ಜೆ.ಪಿ.ನಡ್ಡಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಆಪ್ತ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೋಪೇಂದ್ರ ಯಾದವ್‌ ಅವರನ್ನು ಬೆಂಗಳೂರು ನಗರ ಜಿಲ್ಲೆಗೆ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗುತ್ತಿದೆ. ಈಗಾಗಲೇ ಜೆ.ಪಿ.ನಡ್ಡಾ ಒಂದು ಸುತ್ತಿನ ಸಭೆ ನಡೆಸಿದ್ದು, ಭೂಪೇಂದ್ರ ಯಾದವ್‌ ಶೀಘ್ರ ನಗರಕ್ಕೆ ಬರಲಿದ್ದಾರೆ ಎಂದು ಮೂಲಗಳು ಹೇಳಿವೆ.

* ಎಂ. ಪ್ರದೀಪ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next