Advertisement

ಬಿಜೆಪಿ ಸೇರುವುದು ಖಚಿತ: ಬಸನಗೌಡ ಪಾಟೀಲ ಯತ್ನಾಳ

06:35 AM Feb 05, 2018 | Team Udayavani |

ವಿಜಯಪುರ: “ನಾನು ಬಿಜೆಪಿ ಸೇರುವುದು ಖಚಿತ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಸೇರುವುದಿಲ್ಲ’ ಎಂದು ಮಾಜಿ ಕೇಂದ್ರ ಸಚಿವ, ಮೇಲ್ಮನೆ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದ್ದಾರೆ.

Advertisement

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ನನ್ನ ರಾಜಕೀಯದ ಕೆಟ್ಟ ದಿನಗಳು ಮುಗಿದಿದ್ದು ಸಂಕ್ರಮಣದ ನಂತರ ರಾಜಕೀಯ ಏರಿಕೆ ಆರಂಭವಾಗಿದೆ. ಭವಿಷ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರಭಾವಿ ನಾಯಕನಾಗಲಿರುವ ನನ್ನನ್ನು ಗೌರವಯುತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಸುಮ್ಮನೇ ಇರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. 

ನನ್ನ ಶಕ್ತಿ, ಸಾಮರ್ಥ್ಯ ಅರಿತಿರುವ ಪಕ್ಷದ ನಾಯಕರು ಉತ್ತರ ಕರ್ನಾಟಕದ ಹೊಣೆ ಹೊರುವಂತೆಯೂ ಹೇಳಿದ್ದಾರೆ. ಹೀಗಾಗಿ, ನನ್ನ ಕೈ ಬಲಪಡಿಸಲು ಶಕ್ತಿ ಇರುವ ನನ್ನ ಬೆಂಬಲಿಗರಿಗೆ ಟಿಕೆಟ್‌ ನೀಡುವಂತೆ ಕೋರಿದ್ದೇನೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಿಂದಲೇ ಸ್ಪ ರ್ಧಿಸುವುದು ಖಚಿತ, ಚಿಹ್ನೆ ಯಾವುದೆಂದು ನಿರೀಕ್ಷಿಸಿ’ ಎಂದರು.

“ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿ ಬಿಜೆಪಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂಬ ನಿರೀಕ್ಷೆ ನನಗಿದೆ. ಬಿಜೆಪಿ ಹಾಲಿದ್ದಂತೆ, ರಾಜ್ಯದಲ್ಲಿ ಅದರ ನಾಯಕತ್ವ ವಹಿಸಿರುವ ಯಡಿಯೂರಪ್ಪ ಅವರು ಜೇನು ಇದ್ದಂತೆ. ನಾನು ಸೇರಿದರೆ ಸಾವಯವ ಬೆಲ್ಲ ಬೆರೆತಂತೆ ಆಗುತ್ತದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗಾಗಿ ನನ್ನ ಶಕ್ತಿ ಬಳಸಿಕೊಳ್ಳಲು ಪಕ್ಷದ ರಾಷ್ಟ್ರೀಯ ನಾಯಕರು ನಿರ್ಧರಿಸಿದ್ದಾರೆ’ ಎಂದರು.

“ಜಲ ಸಂಪನ್ಮೂಲ ಸಚಿವ ಡಾ.ಎಂ.ಬಿ. ಪಾಟೀಲ ಸಚಿವರಾಗಿ ಮಾಡಿರುವ ಕೆಲಸವನ್ನು ಮೆಚ್ಚಿದ್ದೇನೆ, ಅಷ್ಟೇ. ಇದರಲ್ಲಿ ರಾಜಕೀಯ ಒಳ ಒಪ್ಪಂದದ ಮಾತಿಲ್ಲ. ಹಾಗಂತ, ನಾನು ಕಾಂಗ್ರೆಸ್‌ ಸೇರುವ ಮಾತೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

Advertisement

ಕಾಗೋಡು ವಿರುದ್ಧ ಹಕ್ಕುಚ್ಯುತಿ ಮಂಡನೆ:
ಗೋಮಾಳವನ್ನು ವಕ್ಫ್ ಆಸ್ತಿಯಾಗಿ ಕಬಳಿಸಿರುವ ಪ್ರಕರಣದ ತನಿಖೆ ಮಾಡಿಸುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸದನದಲ್ಲಿ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಿಸಿಲ್ಲ. ಹೀಗಾಗಿ, ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next