ಹೊಸದಿಲ್ಲಿ/ಅಹಮದಾಬಾದ್: ಮುಸ್ಲಿಮರು ಬಿಜೆಪಿ ವತಿಯಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಎಂಬ ಮಾತುಗಳನ್ನು ಪ್ರಸಕ್ತ ಸಾಲಿನ ಗುಜರಾತ್ ಚುನಾವಣೆ ಸುಳ್ಳಾಗಿಸಿದೆ. 2011ರಲ್ಲಿ ಪ್ರಧಾನಿ ಮೋದಿ ಮುಖ್ಯಮಂತ್ರಿ ಯಾಗಿದ್ದಾಗ ಆಯೋಜಿಸಿದ್ದ “ಸದ್ಭಾವನಾ ಮಿಷನ್’ ಅಲ್ಪಸಂಖ್ಯಾತರನ್ನು ಬಿಜೆಪಿಯತ್ತ ಆಕರ್ಷಿಸುವ ಉದ್ದೇಶವನ್ನೇ ಹೊಂದಿತ್ತು. ಇದಾದ ಬಳಿಕ 2012ರಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡಲಾಗಿತ್ತು. ಅದರಲ್ಲಿ ಪ್ರಮುಖರು ಜಯಸಾಧಿಸಿದ್ದರು ಕೂಡ. ಇದೀಗ ಸದ್ಯದಲ್ಲೇ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಮುದಾಯದ ನಾಯಕರು ಸ್ಪರ್ಧಿಸಲು ಮುಂದೆ ಬರುತ್ತಿದ್ದಾರೆ.
ಇತ್ತೀಚೆಗೆ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಕೂಡ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿ ಸಲಾಗಿದೆ. ಜಮಲಾಪುರ್- ಖಾಡಿಯಾ, ವೇಜಾಲ್ಪುರ್, ವಗ್ರ, ವಾನ್ಕನೇರ್, ಭುಜ್ ಮತ್ತು ಅಬ್ದಾಸಾ ಕ್ಷೇತ್ರಗಳಲ್ಲಿ ಸಮು ದಾಯದವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ.
ರಾಹುಲ್ ಭೇಟಿ ಇಲ್ಲ: ಬಿಜೆಪಿಯ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಯುವ ನಾಯಕರಾದ ಜಿಗ್ನೇಶ್ ಮೇವಾನಿ, ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೂರ್‌ರನ್ನು ಕಾಂಗ್ರೆಸ್ ಆಹ್ವಾನಿಸಿತ್ತು. ಈ ಪೈಕಿ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಮಂಗಳವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗುವುದಾಗಿ ವದಂತಿ ಇತ್ತು. ಆದರೆ ಅದನ್ನು ಮೇವಾನಿ ನಿರಾಕರಿಸಿದ್ದಾರೆ.
ಪ್ರಗತಿ ಕಾಣದ ಮಾತುಕತೆ: ಪಟೇಲರಿಗೆ ಮೀಸಲು ನೀಡುವ ಹೋರಾಟ ಸಮಿತಿ ಮುಖ್ಯಸ್ಥ ಹಾರ್ದಿಕ್ ಪಟೇಲ್ ಮತ್ತು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ನಾಯಕರ ನಡುವಿನ ಮಾತುಕತೆ ಯಾವುದೇ ಪ್ರಗತಿ ಕಂಡಿಲ್ಲ. ಪಟೇಲ್ ಸಮುದಾಯಕ್ಕೆ ಶೇ.20ರಷ್ಟು ಮೀಸಲು ನೀಡುವ ಬಗ್ಗೆ ಪ್ರಸ್ತಾಪ ಇರಿಸಲಾಗಿತ್ತು. ಈ ಬಗ್ಗೆ ನ.7ರಂದು ಮುಂದಿನ ಮಾತುಕತೆ ನಡೆಯಲಿದೆ. ಇದೇ ವೇಳೆ ನ.1-ನ.3ರ ವರೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದಾರೆ.