Advertisement
ಈ ವೇಳೆ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿ ಸದಸ್ಯ ಡಾ.ಎಚ್.ಎನ್.ಚಂದ್ರಶೇಖರ್ ತಾವು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.
Related Articles
Advertisement
ಸಭೆ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವ ತಯಾರಿ ಸಭೆ ನಡೆದಿದೆ. ಈಗಾಗಲೇ ಒಂದು ಹಂತದ ಚುನಾವಣಾ ತಯಾರಿ ಡಿಸೆಂಬರ್‌ನಲ್ಲೇ ನಡೆದಿತ್ತು. ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನು ಮಾಡಿದ್ದೇವೆ. ಬಿಜೆಪಿ ಕೇಂದ್ರ ಕಾರ್ಯಾಲಯದಿಂದ ಬಂದಿರುವ ಸೂಚನೆಗಳ ಅನುಷ್ಠಾನಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಚುನಾವಣೆ ಸಂಬಂಧ ಕ್ಷೇತ್ರದಲ್ಲಿ ಜವಾಬ್ದಾರಿ ಹಂಚಿಕೆ, ವಿಧಾನಸಭಾ ಕ್ಷೇತ್ರ, ಜಿಲ್ಲೆ, ತಾಲೂಕು, ಹೋಬಳಿ ಮತ್ತು ಬೂತ್ ಮಟ್ಟದ ಸಂಘಟನೆಗೆ ಒತ್ತು ನೀಡುವ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಪ್ರತಿ ಮತಗಟ್ಟೆಯನ್ನು ಸದೃಢ ಮತಗಟ್ಟೆಯನ್ನಾಗಿ ಮಾಡಲಿದ್ದೇವೆ.
ವಿವಿಧ ಸಂಘಟನೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಎಲ್ಲರನ್ನೂ ಭೇಟಿ ಮಾಡಿ ಕೇಂದ್ರದ ಎನ್‌ಡಿಎ ಸರ್ಕಾರದ ಸಾಧನೆಯನ್ನು ತಿಳಿಸಲಿದ್ದೇವೆ. ಫೆಬ್ರವರಿ ಅಂತ್ಯದಲ್ಲಿ ಬೂತ್ ಸಶಕ್ತಿಕರಣ ಸಭೆ ನಡೆಸಲಿದ್ದೇವೆ. ಅಷ್ಟರೊಳಗೆ ವಿಧಾನಸಭಾ ಕ್ಷೇತ್ರ, ವಾರ್ಡ್ ಹಾಗೂ ಜಿಲ್ಲಾ ಮಟ್ಟದ ಸಭೆ ನಡೆಸಲಿದ್ದೇವೆ. ಒಟ್ಟಾರೆಯಾಗಿ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ಆರಂಭಿಸಿದ್ದೇವೆ ಎಂದು ವಿವರಿಸಿದರು.
ನಾನೂ ಟಿಕೆಟ್ ಆಕಾಂಕ್ಷಿ – ಚಂದ್ರಶೇಖರ್: ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪ್ರತಿಕ್ರಿಯಿಸಿರುವ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿ ಸದಸ್ಯ ಎಚ್.ಎನ್.ಚಂದ್ರಶೇಖರ್, ನಾನೂ ಸಹ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿಯ ಟಿಕೆಟ್ ಆಕಾಂಕ್ಷಿ. ಡಿ.ವಿ.ಸದಾನಂದಗೌಡರು ಹಾಲಿ ಸಂಸದರು ಹಾಗೂ ಕೇಂದ್ರ ಸಚಿವರಾಗಿದ್ದಾರೆ.
ಕಳೆದ ಬಾರಿ ಇದೇ ಕ್ಷೇತ್ರದಿಂದ ನನಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದೆ. ಈ ಬಾರಿಯೂ ಟಿಕೆಟ್ ನೀಡುವಂತೆ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ಸೇರಿದಂತೆ ಎಲ್ಲ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇನೆ ಎಂದು ಹೇಳಿದರು. ನಾನು ಬೆಂಗಳೂರು ಉತ್ತರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ.
ಸ್ಥಳೀಯ ವಿದ್ಯಾಮಾನ ಹಾಗೂ ರಾಷ್ಟ್ರ ರಾಜಕಾರಣವನ್ನು ಗಮನದಲ್ಲಿ ಇಟ್ಟುಕೊಂಡು ಈ ಬಾರಿ ಯಾರಿಗೆ ಟಿಕೆಟ್ ನೀಡಬೇಕು ಎಂದು ವರಿಷ್ಠರು ತೀರ್ಮಾನಿಸಲಿದ್ದಾರೆ. ನಾನು ಟಿಕೆಟ್ ಆಕಾಂಕ್ಷಿ ಎಂಬುದು ಸದಾನಂದಗೌಡ ಅವರಿಗೂ ಗೊತ್ತು. ರೈತ ಮೋರ್ಚಾ ಕಾರ್ಯಕಾರಿಣಿ ಸಭೆ ಇದ್ದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಿದ್ಧತಾ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.