ಬೆಂಗಳೂರು: ಮೂರು ದಶಕಕ್ಕೂ ಹೆಚ್ಚು ಸಮಯದಿಂದ ಬಿಜೆಪಿ ಪಾರುಪತ್ಯದಲ್ಲಿರುವ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಹೇಗಾದರೂ ಮಾಡಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಹರಸಾಹಸ ಮಾಡುತ್ತಿದ್ದು, ಇದರಿಂದ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.
ಉತ್ತರಹಳ್ಳಿ ಕ್ಷೇತ್ರದ ಬಹುಭಾಗ ಒಳಗೊಂಡಿದ್ದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ 2008ರಲ್ಲಿ ಸೃಷ್ಟಿಯಾಯಿತು. ಪುನರ್‌ವಿಂಗಡಣೆ ವೇಳೆ ಗ್ರಾಮೀಣ ಭಾಗದ ಹಲವು ಪ್ರದೇಶಗಳು ಸೇರಿಕೊಂಡರೂ ಬಿಜೆಪಿ ಭದ್ರಕೋಟೆ ಅಲುಗಾಡಿಲ್ಲ. ಪಕ್ಷದ ಅಭ್ಯರ್ಥಿ ಎಂ.ಕೃಷ್ಣಪ್ಪ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಸತತ ಮೂರನೇ ಬಾರಿ ಗೆಲ್ಲುವತ್ತ ದೃಷ್ಟಿ ಹರಿಸಿದ್ದಾರೆ.
ಕಾಂಗ್ರೆಸ್‌ನಿಂದ ಆರ್.ಕೆ.ರಮೇಶ್ ಟಿಕೆಟ್ ಗಿಟ್ಟಿಸಿದ್ದರೆ, ಜೆಡಿಎಸ್‌ನಿಂದ 2013ರ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಆರ್.ಪ್ರಭಾಕರರೆಡ್ಡಿ ಮತ್ತೆ ಸ್ಪರ್ದೆಯಲ್ಲಿದ್ದಾರೆ. ಇವರೊಂದಿಗೆ ಆರಕ್ಷಣ್ ವಿರೋಧಿ ಪಾರ್ಟಿ, ಎಐಎಂಇಪಿ, ರಾಷ್ಟ್ರೀಯ ಮಾನವ್ ವಿಕಾಸ್ ಪಾರ್ಟಿ, ಸಂಪೂರ್ಣ ಭಾರತ್ ಕ್ರಾಂತಿ ಪಾರ್ಟಿ, ರಿಪಬ್ಲಿಕನ್ ಸೇನಾ ಅಭ್ಯರ್ಥಿಗಳು ಮತ್ತು ಪಕ್ಷೇತರರು ಕಣದಲ್ಲಿದ್ದಾರೆ. ಕಳೆದ ಬಾರಿ ಬಿಜೆಪಿ-ಜೆಡಿಎಸ್ ಮಧ್ಯೆ ನೇರ ಸ್ಪರ್ಧೆ ಇದ್ದರೆ, ಈ ಬಾರಿ ತ್ರಿಕೋನ ಸ್ಪರ್ಧೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಬಲಗೊಂಡಿದೆ ಕಾಂಗ್ರೆಸ್: 2008ರಲ್ಲಿ ಎರಡನೇ ಸ್ಥಾನ ಪಡೆದಿದ್ದ ಕಾಂಗ್ರೆಸ್ 2013ರ ಚುನಾವಣೆ ವೇಳೆಗೆ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಜೆಡಿಎಸ್ ಎರಡನೇ ಸ್ಥಾನಕ್ಕೇರಿತ್ತು. ಆದರೆ, 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಸಂಸದರಾದ ಮೇಲೆ ಕಾಂಗ್ರೆಸ್ ಚೇತರಿಸಿಕೊಂಡಿದೆ. ಮೇಲಾಗಿ ಸಚಿವ ಡಿ.ಕೆ.ಶಿವಕುಮಾರ್ ಆಪ್ತ, ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಈ ಬಾರಿ ಕಾಂಗ್ರೆಸ್‌ನ ಶಕ್ತಿ ಹೆಚ್ಚಿಸಿದೆ.
ಆದರೆ, ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಸುಷ್ಮಾ ರಾಜಗೋಪಾಲ ರೆಡ್ಡಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಮತ್ತು ಮತ್ತೂಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಷ್ಮಾ ಅವರ ಪತಿ ಎಚ್.ಪಿ.ರಾಜಗೋಪಾಲರೆಡ್ಡಿ ಪತ್ನಿಯ ಪರವಾಗಿ ಬೊಮ್ಮನಹಳ್ಳಿ ಕ್ಷೇತ್ರದ ಬಗ್ಗೆ ಹೆಚ್ಚು ಗಮನಹರಿಸುತ್ತಿರುವುದು ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸ್ವಲ್ಪ ಹಾನಿಯುಂಟುಮಾಡುವ ಸಾಧ್ಯತೆ ಇದೆ.
ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಗೆ ಬರುವ ಪಾಲಿಕೆಯ ಎಂಟು ವಾರ್ಡ್‌ಗಳ ಪೈಕಿ ಆರು, 8 ಜಿಪಂ ಕ್ಷೇತ್ರಗಳ ಪೈಕಿ ಐದು ಸ್ಥಾನ ಹೊಂದಿರುವುದು, ಹೆಬ್ಬಗೋಡಿ ನಗರಸಭೆ ಮತ್ತು ಜಿಗಣಿ ಪುರಸಭೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಪಕ್ಷಕ್ಕೆ ಹೆಚ್ಚು ಬಲ ತಂದುಕೊಟ್ಟಿದೆ. ಇನ್ನು ಪಾಲಿಕೆಯ ಎರಡು ಕ್ಷೇತ್ರಗಳು ಮತ್ತು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಶಕ್ತಿ ಹೊಂದಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಇಲ್ಲದಿದ್ದರೂ ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಜೆಡಿಎಸ್ ಕೂಡ ಸಾಕಷ್ಟು ಮತದಾರರನ್ನು ಹೊಂದಿದೆ. ಹೀಗಾಗಿ ಈ ಬಾರಿ ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಾನ ಪೈಪೋಟಿ ನೀಡಲಿದೆ. ಮೂವರು ಅಭ್ಯರ್ಥಿಗಳ ಮಧ್ಯೆ ತೀವ್ರ ಸ್ಪರ್ಧೆ ಕಾಣಿಸಿಕೊಂಡರೆ ಅದರ ಲಾಭ ಬಿಜೆಪಿಗೆ ಆಗಬಹುದು ಎಂಬ ಲೆಕ್ಕಾಚಾರ ಕೇಳಿಬರುತ್ತಿದೆ.
* ಪ್ರದೀಪ್‌ಕುಮಾರ್ ಎಂ.