ಮಂಗಳೂರು: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಈ ಹಿಂದೆ ಚುನಾವಣ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳೆಲ್ಲ ಹುಸಿಯಾಗಿದ್ದು, ಈಗ ಮತ್ತದೇ ಸುಳ್ಳು ಭರವಸೆಯೊಂದಿಗೆ ಲೋಕಸಭೆ ಚುನಾವಣೆ ಎದುರಿಸುತ್ತಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯು ಜನರ ಬದುಕಿಗೆ ಹತ್ತಿರವಾಗಿದೆ. ಆದರೆ ಬಿಜೆಪಿ ಪ್ರಣಾಳಿಕೆಯು ಜನರ ಭಾವನೆಯ ಮೇಲೆ ಚೆಲ್ಲಾಟವಾಡುವಂತಿದೆ. ಹಿಂದೆ ನೀಡಿದ ಭರವಸೆಯನ್ನೇ ಮತ್ತೂಮ್ಮೆ ಹೇಳಲಾಗಿದೆ ಎಂದು ಟೀಕಿಸಿದರು.
ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಜಿಎಸ್‌ಟಿ, ಆಧಾರ್ ವ್ಯವಸ್ಥೆ ಯನ್ನು ಜಾರಿಗೊಳಿಸಲು ತೀರ್ಮಾನಿಸಿತ್ತು. ಆ ಸಮಯ ಬಿಜೆಪಿ ವಿರೋಧಿಸಿತ್ತು. ಆದರೆ ಈಗ ಅದೇ ವ್ಯವಸ್ಥೆ ಜಾರಿಗೆ ತಂದಿದೆ. ದೇಶದ ಏಕತೆ, ಗೌರವ ಕಾಪಾಡಿಕೊಳ್ಳುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ದೇಶದ ಭದ್ರತೆಯ ವಿಚಾರವು ತಲೆ ತಗ್ಗಿಸುವಂತಿದೆ. ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ ಕೇಳುತ್ತಿದೆ ಎಂದರು.
ಕೇಂದ್ರ ಸರಕಾರದಿಂದ ಜಿಲ್ಲೆಗೆ ಅನ್ಯಾಯವಾಗಿದೆ. ವಿಜಯ ಬ್ಯಾಂಕ್ ವಿಲೀನ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣ ಸೇರಿದಂತೆ ಇಲ್ಲಿಯ ಜನರ ಭಾವನೆಗೆ ಧಕ್ಕೆಯಾಗಿದೆ ಎಂದು ತಿಳಿಸಿದರು.
ಉಳಾಯಿಬೆಟ್ಟಿನಲ್ಲಿ ನಡೆದ ಕೋಮು ಗಲಭೆಯ ಆರೋಪಿಗಳು ಸೇರಿದಂತೆ ವಿಚಾರಣೆಯ ಹಂತದಲ್ಲಿದ್ದ ಒಟ್ಟು 142 ಪ್ರಕರಣಗಳನ್ನು ರಾಜ್ಯ ಸರಕಾರ ವಜಾಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಪ್ರಕರಣವನ್ನು ಹಿಂಪಡೆದಿಲ್ಲ. ಏನಿದ್ದರೂ ಅದು ಹಿಂದಿನ ಸರಕಾರದ ತೀರ್ಮಾನ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗೃಹ ಸಚಿವರಿಂದ ಪಡೆಯುತ್ತೇನೆ ಎಂದರು.
ಮುಖಂಡರಾದ ಹರೀಶ್ ಕುಮಾರ್, ಡಾ| ಎಂ.ಎನ್. ರಾಜೇಂದ್ರ ಕುಮಾರ್, ಅಭಯಚಂದ್ರ ಜೈನ್, ಇಬ್ರಾಹಿಂ ಕೋಡಿಜಾಲ್, ಸಂತೋಷ್ ಕುಮಾರ್ ಶೆಟ್ಟಿ, ಕಳ್ಳಿಗೆ ತಾರಾನಾಥ ಶೆಟ್ಟಿ, ಮೊಹಮ್ಮದ್ ಹನೀಫ್, ನಜೀರ್ ಬಜಾಲ್ ಉಪಸ್ಥಿತರಿದ್ದರು.