ಕೆಂಗೇರಿ: ಕೆಪಿಸಿಸಿ ಸದಸ್ಯೆ ಕಲ್ಪನಾ ಯಲಿಗಾರ್ ಮತ್ತು ಬೆಂಬಲಿಗರರನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬಿಜೆಪಿಗೆ ಬರಮಾಡಿಕೊಂಡರು.
ಯಶವಂತಪುರ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿಗೆ ಬಿಜೆಪಿ ಬಾವುಟ ನೀಡಿ, ಶಾಲು ಹೊದಿಸುವ ಮೂಲಕ ಸದಾನಂದಗೌಡರು ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಅವರು, ದೇಶ ಪ್ರಥಮ ಎಂದು ನಂಬಿರುವ ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಭಾರತ ದೇಶದ ನಾಗರಿಕರು. ಪ್ರಧಾನಿ ಮೋದಿ ಅವರ ಆಡಳಿತ ಮೆಚ್ಚಿಕೊಂಡು ಇಂದು 100ಕ್ಕೂ ಹೆಚ್ಚು ಮಹಿಳೆಯರು ಪಕ್ಷ ಸೇರಿದ್ದಾರೆ ಎಂದರು.
ಬಿಜೆಪಿ ಸೇರಿದ ಕಲ್ಪನಾ ಯಲಿಗಾರ್ ಮಾತನಾಡಿ, ಕೆಪಿಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೇನೆ. ಕಾಂಗ್ರೆಸ್ನಲ್ಲಿ ಸ್ವಾರ್ಥ ರಾಜಕಾರಣ ತುಂಬಿದೆ. ದೇಶ ಮೊದಲು ಎಂದು ಮೋದಿಜಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಬೆಂಬಲಿಸಲು ಬಿಜೆಪಿಗೆ ಸೇರಿದ್ದೇವೆ ಎಂದರು.
ಯಶವಂತಪುರ ಕ್ಷೇತ್ರದ ಬಿಜೆಪಿ ಮಂಡಲಾಧ್ಯಕ್ಷ ಸಿ.ಎಂ.ಮಾರೇಗೌಡ, ಪಾಲಿಕೆ ಸದಸ್ಯ ವಿ.ವಿ.ಸತ್ಯನಾರಾಯಣ, ಮಾಜಿ ಸದಸ್ಯ ರ.ಅಂಜನಪ್ಪ, ಜೆ.ರಮೇಶ್, ಸಂತೋಷ್, ನವೀನ್ ಯಾದವ್, ಸುಬ್ಬಲಕ್ಷ್ಮಮ್ಮ ಇತರರು ಇದ್ದರು.