ಬೆಂಗಳೂರು: ಸಾಕಷ್ಟು ಭ್ರಷ್ಟಾಚಾರ ನಡೆಸಿ ಮೈಸೂರು ವಿಶ್ವವಿದ್ಯಾಲಯ ಹಾಗೂ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಕಪ್ಪು ಚುಕ್ಕೆ ತಂದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಮಂಡಳಿ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದರೆ ಸದನದೊಳಗೆ ಹಾಗೂ ಹೊರಗೆ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಎಚ್ಚರಿಕೆ ನೀಡಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ಅಂಕಪಟ್ಟಿ, ಎಂಜಿನಿಯರಿಂಗ್, ಅರೆವೈದ್ಯಕೀಯ, ಕಲೆ, ವಿಜ್ಞಾನ ಸೇರಿದಂತೆ 150 ವಿಷಯಗಳಿಗೆ ಸಂಬಂದ ಪಟ್ಟಂತೆ ದೇಶ, ವಿದೇಶಗಳಲ್ಲಿ ದೂರಶಿಕ್ಷಣ ಕೇಂದ್ರ ಆರಂಭಿಸಿ ಭಾರೀ ಅವ್ಯವಹಾರ ನಡೆಸಿದ ಆರೋಪ ರಂಗಪ್ಪ ಅವರ ಮೇಲಿದೆ. ಅವರನ್ನು ಉನ್ನತ ಶಿಕ್ಷಣ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲು ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.
ನಾನಾ ತನಿಖಾ ವರದಿಗಳು, ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ವರದಿಯು ಭಾರೀ ಭ್ರಷ್ಟಾಚಾರ ನಡೆದಿರುವುದನ್ನು ಬಯಲು ಮಾಡಿವೆ. ರಂಗಪ್ಪ ಅವರು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ರಂಗಪ್ಪ ನೇಮಕ ಸಾಧ್ಯತೆ ಕಾರಣದಿಂದಲೇ ಜಿ.ಟಿ.ದೇವೇಗೌಡರು ತಮಗೆ ಉನ್ನತ ಶಿಕ್ಷಣ ಖಾತೆ ಬೇಡ ಎಂದಿರಬೇಕು. ಈ ಹಿಂದೆ ಗೃಹ ಇಲಾಖೆಯ ಸಲಹೆಗಾರರಾಗಿದ್ದ ಕೆಂಪಯ್ಯ ಅವರ ಬಗ್ಗೆ ಆರೋಪಿಸುತ್ತಿದ್ದ ಕುಮಾರಸ್ವಾಮಿಯವರು ಇದೀಗ ಭ್ರಷ್ಟಾಚಾರ ಆರೋಪ ಹೊತ್ತ ರಂಗಪ್ಪ ಅವರನ್ನು ನೇಮಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಮಾತನಾಡಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 2013-14ನೇ ಸಾಲಿನಿಂದಲೇ ಮಾನ್ಯತೆ ಕಳೆದುಕೊಂಡಿದ್ದು, ಐದು ವರ್ಷಗಳಿಂದ ಕೋಮಾದಲ್ಲಿದೆ. 2009ರಲ್ಲಿ ಕುಲಪತಿಯಾದ ಪ್ರೊ.ಕೆ.ಎಸ್.ರಂಗಪ್ಪ, ನಂತರದ ಕುಲಪತಿ ಎಂ.ಜಿ.ಕೃಷ್ಣನ್ ಸೇರಿ ವಿವಿಯ ಘನತೆ ಹಾಳು ಮಾಡಿದ್ದಾರೆ. ರಾಜ್ಯ, ರಾಷ್ಟ್ರದ ಗಡಿ ಮೀರಿ ನೇಪಾಳ, ಶ್ರೀಲಂಕಾ, ಯುಎಇ, ಅಮೆರಿಕಾದಲ್ಲೂ ಶೈಕ್ಷಣಿಕ ಪಾಲುದಾರಿಕೆ ಹೆಸರಿನಲ್ಲಿ ಸಾವಿರಾರು ಕೇಂದ್ರಗಳು, ಅಧ್ಯಯನ ಕೇಂದ್ರಗಳನ್ನು ತೆರೆದಿದ್ದಾರೆ. ಇವು ಸರ್ಟಿಫಿಕೇಟ್ ಮಾರಾಟ ಕೋರ್ಸ್‌ನಂತೆ ಕಾರ್ಯ ನಿರ್ವಹಿಸಿವೆ ಎಂದು ದೂರಿದರು.
ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಹಿಂದೆಯೇ ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್ ಅವರಿಗೆ ಪತ್ರ ಬರೆಯಲಾಗಿತ್ತು. ಇಷ್ಟೆಲ್ಲಾ ಆರೋಪ ಹೊತ್ತ ರಂಗಪ್ಪ ಅವರು ಕಳೆದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ, 15,000 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಆ ಮೂಲಕ ಜನ ತಿರಸ್ಕರಿಸಿದ್ದಾರೆ. ಹೀಗಿದ್ದರೂ ಅವರನ್ನು ಉನ್ನತ ಶಿಕ್ಷಣ ಇಲಾಖೆಯಲ್ಲಿ ಉನ್ನತ ಸ್ಥಾನ ನೀಡಲು ಮುಂದಾಗುವುದು ಸರಿಯಲ್ಲ. ಕೇಂದ್ರ ಸರ್ಕಾರ ಯಾವುದೇ ಸಂದರ್ಭದಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬಹುದು ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ರಾಜ್ಯ ಸಹ ಸಂಚಾಲಕ ಶ್ರೀನಾಥ್, ಸಹ ವಕ್ತಾರ ಆನಂದ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ ಉಪಸ್ಥಿತರಿದ್ದರು.
ಈವರೆಗೆ ಅಪ್ಪ- ಮಕ್ಕಳ ರಾಜಕಾರಣ ಎನ್ನಲಾಗುತ್ತಿತ್ತು. ಇನ್ನು ಮುಂದೆ ಬೀಗರ ರಾಜಕಾರಣ ಎನ್ನಬೇಕಾಗುತ್ತದೆ. ಏಕೆಂದರೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಬೀಗರಾದ ಡಿ.ಸಿ.ತಮ್ಮಣ್ಣ ಸಚಿವರಾಗಿದ್ದಾರೆ. ಮತ್ತೂಬ್ಬ ಬೀಗರಾದ ರಂಗಪ್ಪ ಅವರಿಗೂ ಉನ್ನತ ಸ್ಥಾನ ನೀಡಲು ಪ್ರಯತ್ನ ನಡೆದಿದೆ. ರಂಗಪ್ಪ ಅವರನ್ನು ನೇಮಿಸಿಕೊಳ್ಳುವುದಕ್ಕೆ ಕಾರಣವಾದರೂ ಏನು
ಎಂಬುದನ್ನು ಮುಖ್ಯಮಂತ್ರಿಗಳು ತಿಳಿಸಬೇಕು.
● ಗೋ.ಮಧುಸೂದನ್, ವಿಧಾನ ಪರಿಷತ್ ಮಾಜಿ ಸದಸ್ಯ