ಮೈಸೂರು: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದರೆ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರನ್ನು ಹತ್ಯೆಗೈದ ಹಂತಕರಿಗೆ ಶಿಕ್ಷೆ ಖಚಿತ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರವಸೆ ನೀಡಿದ್ದಾರೆ.
2016ರಲ್ಲಿ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಮನೆಗೆ ಶುಕ್ರವಾರ ಭೇಟಿ ನೀಡಿದರು. ಅಲ್ಲದೇ ಪಕ್ಷದ ವತಿಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿಯೂ ಭರವಸೆ ನೀಡಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ.
ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ರಾಜು ತಾಯಿ ಚಂದ್ರಮ್ಮ ಈ ಸಂದರ್ಭದಲ್ಲಿ ಶಾ ಅವರಲ್ಲಿ ಮನವಿ ಮಾಡಿಕೊಂಡರು. ಅಮಿತ್ ಶಾ ಭೇಟಿ ವೇಳೆ ಕೇಂದ್ರ ಸಚಿವ ಅನಂತ್ ಕುಮಾರ್, ಸಂಸದ ಪ್ರತಾಪ್ ಸಿಂಹ ಜತೆಗಿದ್ದರು.
ಶಾ ವಿರುದ್ಧ ದೂರು ದಾಖಲಿಸುತ್ತೇವೆ: ದಿನೇಶ್ ಗುಂಡೂರಾವ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕ್ಯಾತಮಾರನಹಳ್ಳಿ ರಾಜು ಮನೆಗೆ ಭೇಟಿ ನೀಡಿದ್ದ ವೇಳೆ 5 ಲಕ್ಷ ರೂಪಾಯಿ ಪರಿಹಾರ ನೀಡುವ ಭರವಸೆ ನೀಡಿದ್ದರು. ಇದು ನೀತಿ ಸಂಹಿತೆ ಉಲ್ಲಂಘನೆ. ಈ ನಿಟ್ಟಿನಲ್ಲಿ ಶಾ ವಿರುದ್ಧ ಕಾಂಗ್ರೆಸ್ ದೂರು ನೀಡಲಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.