ಬೆಳಗಾವಿ: ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಈಗಾಗಲೇ ಮಾನಸಿಕವಾಗಿ ಸರಕಾರದಿಂದ ಬಹಳ ದೂರ ಸರಿದಿದ್ದಾರೆ. ಅವರು 10 ಜನ ಶಾಸಕರನ್ನು ಕರೆದುಕೊಂಡು ಬಂದರೆ ಬಿಜೆಪಿ ಸರ್ಕಾರ ರಚಿಸುತ್ತದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರಿಗೆ ಬಿಜೆಪಿಗೆ ಬರಲು ಮನಸ್ಸಿದೆ. ಒಂದು ವೇಳೆ ಅವರು ತಮ್ಮ ಬೆಂಬಲಿತ ಶಾಸಕರ ಜೊತೆ ಬಂದರೆ ಸ್ವಾಗತ ನೀಡುತ್ತೇವೆ ಎಂದರು.
ಈ ಸರಕಾರ ಅಭದ್ರವಾಗಿದೆ. ಹೀಗಾಗಿ, ನಾವು ಅಪರೇಷನ್ ಕಮಲ ಮಾಡುವುದಿಲ್ಲ. ನಾವಾಗೇ ಸರಕಾರ ಬೀಳಿಸುವುದಿಲ್ಲ. ಈಗಿನ ರಾಜಕೀಯ ಬೆಳವಣಿಗೆಯಲ್ಲಿ ಸಮ್ಮಿಶ್ರ ಸರಕಾರ ಬಹಳ ದಿನ ಬಾಳುವುದಿಲ್ಲ. ಅವರಲ್ಲೇ ಅಸಮಾಧಾನ ಬಹಳಷ್ಟಿದೆ. ನಾವು ಅವರನ್ನು ಅಸ್ಥಿರ ಮಾಡುವ ಪ್ರಮೇಯವೇ ಇಲ್ಲ. ರಾಜ್ಯದ ಜನರಿಗೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು ಎಂಬ ಆಸೆ ಇತ್ತು. ಆದರೆ, ನಮ್ಮ ಸರಕಾರ ಬರಬಾರದು. ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದು ಎನ್ನುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಕೈಜೋಡಿಸಿವೆ. ಇದು ಅಪವಿತ್ರ ಮೈತ್ರಿ ಎಂದು ಟೀಕಿಸಿದರು.
ಬೆಳಗಾವಿ ಕುಂದಾನಾಡಿಗೆ ಸಕ್ಕರೆ ನಾಡು ಬಂದಿದ್ದೇ ದೊಡ್ಡ ಅಪರಾಧ. ಬಹಳ ವರ್ಷಗಳಿಂದ ರಾಜಕಾರಣ ಮಾಡುತ್ತ ಬಂದಿರುವ ರಮೇಶ ಜಾರಕಿಹೊಳಿಗೆ ಇದರಿಂದ ನೋವಾಗಿದೆ. ಹೀಗಾಗಿ ಅವರು ಸರಕಾರದಿಂದ ಮಾನಸಿಕವಾಗಿ ದೂರವಾಗಿದ್ದಾರೆ ಎಂದು ಸಚಿವ ಡಿ.ಕೆ. ಶಿವಕುಮಾರ ವಿರುದ್ಧ ಪರೋಕ್ಷ ಟೀಕೆ ಮಾಡಿದರು.