Advertisement

ಬಿಜೆಪಿ ಸರ್ಕಾರ ಒಂದೇ ಒಂದು ಮನೆ ಕೊಟ್ಟಿಲ್ಲ

09:12 PM Dec 14, 2021 | Team Udayavani |

ಸುವರ್ಣ ವಿಧಾನಸೌಧ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಹೊಸ ಮನೆ ಮಂಜೂರು ಮಾಡದಿರುವ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ವಿ.ಸೋಮಣ್ಣ ನಡುವೆ ವಾಸ್ತವ ಮಾಹಿತಿಯ ಬಗ್ಗೆ ಆರೋಪ ಪ್ರತ್ಯಾರೋಪ ನಡೆಯಿತು.

Advertisement

ರಾಜ್ಯದಲ್ಲಿ ಉಂಟಾದ ಪ್ರವಾಹದ ಕುರಿತು ನಿಲುವಳಿ ಸೂಚನೆ ಮೇಲೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಹೊಸ ಮನೆ ನೀಡಿಲ್ಲ ಎಂದು ಆರೋಪಿಸಿದರು. ತಾವು ಅಧಿಕಾರದಲ್ಲಿದ್ದಾಗ ಐದು ವರ್ಷದಲ್ಲಿ 15 ಲಕ್ಷ ಮನೆಗಳನ್ನು ನೀಡಿದ್ದು, ಪ್ರತಿ ವರ್ಷವೂ ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಫಲಾನುಭವಿಗಳಿಗೆ ಹಣ ನೀಡಲಾಗಿದೆ ಎಂದು ಆಂಕಿ ಆಂಶಗಳ ಸಮೇತ ಸದನಕ್ಕೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಸಾರಿಗೆ ಸಚಿವ ಬಿ. ಶ್ರಿರಾಮುಲು ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದರು. ಆಗ ಸಿದ್ದರಾಮಯ್ಯ, ಯಾವ ಶಾಸಕರಿಗೆ ಎಷ್ಟು ಮನೆಗಳನ್ನು ನೀಡಿದ್ದೀರಿ ಎಂಬ ದಾಖಲೆ ಕೊಡಿ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರು ನೀಡಿದ ಮಾಹಿತಿ ಸರಿಯಾಗಿಲ್ಲ. ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ ವಸತಿ ಸಚಿವ ವಿ.ಸೋಮಣ್ಣ, ಇವರು ಅಧಿಕಾರ ಬಿಟ್ಟು ಹೋಗುವಾಗ ನಮ್ಮ ಮೇಲೆ 22 ಸಾವಿರ ಕೋಟಿ ರೂ. ಬಾಕಿ ಬಿಟ್ಟು ಹೋಗಿದ್ದಾರೆ. ಇವರ ಅವಧಿಯಲ್ಲಿ ಘೋಷಣೆ ಮಾಡಿದ ಮನೆಗಳಿಗೆ 4467 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. 2.77 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ ಎಂದು ವಿವರಿಸಿದರು.

ಇದನ್ನೂ ಓದಿ:ಸಿಬಿಐ ಸೋಗಿನಲ್ಲಿ ಬಂದು ಮನೆಯಲ್ಲಿದ್ದ ಚಿನ್ನ, ನಗದು ಕದ್ದರು!

Advertisement

ಆದರೆ, ಸಿದ್ದರಾಮಯ್ಯ ನಿಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಮನೆಗಳನ್ನು ಮಂಜೂರು ಮಾಡಿದ್ದಿರಿ ಎನ್ನುವ ದಾಖಲೆ ನೀಡಿ, ನಾನು ನೀಡಿರುವ ಮಾಹಿತಿ ಸುಳ್ಳಾದರೆ ಪ್ರತಿಪಕ್ಷದ ನಾಯಕ ಸ್ಥಾನದಲ್ಲಿ ಇರುವುದಿಲ್ಲ ಎಂದು ಸವಾಲು ಹಾಕಿದರು. ಈ ಬಗ್ಗೆ ನಾಳೆ ದಾಖಲೆ ಕೊಡುತ್ತೇನೆ. ಆದರೆ, ನಮ್ಮ ಸರ್ಕಾರದಲ್ಲಿ ಹಿಂದಿನ ಸರ್ಕಾರದಲ್ಲಿ ಬಾಕಿ ಉಳಿದ ಮನೆಗಳಿಗೆ ಹಣ ಮಂಜೂರು ಮಾಡಲಾಗುತ್ತಿದೆ ಎಂದು ಸೋಮಣ್ಣ ಹೇಳಿದರಲ್ಲದೆ, ಒಂದು ವೇಳೆ ನಾನು ಸುಳ್ಳು ಮಾಹಿತಿ ನೀಡಿದ್ದರೆ, ರಾಜೀನಾಮೆ ನೀಡಲೂ ಸಿದ್ಧ ಎಂದು ಪ್ರತಿಸವಾಲು ಹಾಕಿದರು.

ಈ ವರ್ಷ ಹೊಸದಾಗಿ ಬಸವ ವಸತಿ, ಅಂಬೇಡ್ಕರ ವಸತಿ ಸೇರಿದಂತೆ ವಿವಿಧ ವಸತಿ ಯೋಜನೆ ಅಡಿಯಲ್ಲಿ 5 ಲಕ್ಷ ಹೊಸ ಮನೆಗಳನ್ನು ನೀಡಲಾಗುವುದು. ಸರ್ಕಾರ ನಿಂತ ನೀರಲ್ಲ. ಪ್ರತಿಪಕ್ಷದ ಸದಸ್ಯರು ಹಳೆಯ ಮನೆಗಳಿಗೆ ಅನುದಾನ ನೀಡಬಾರದು ಎಂದು ಹೇಳಲಿ. ಕಾಂಗ್ರೆಸ್‌ ಸರ್ಕಾರ ಚುನಾವಣೆ ದೃಷ್ಟಿಯಿಂದ 15 ಲಕ್ಷ ಮನೆಗಳನ್ನು ಘೋಷಣೆ ಮಾಡಿ, 29 ಸಾವಿರ ರೂ. ಯೋಜನೆಯಲ್ಲಿ ಕೇವಲ 2500 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿ, ಉಳಿದ ಮನೆಗಳಿಗೆ ಹಣ ಮಿಸಲಿಡದೇ ಬಿಟ್ಟು ಹೋಗಿದ್ದಾರೆ. ಆ ಹಣವನ್ನು ನಾವು ಕೊಡುತ್ತಿದ್ದೇವೆ. ಈಗ ಘೋಷಣೆ ಮಾಡುವ ಮನೆಗಳನ್ನು ನಮ್ಮ ಅವಧಿಯಲ್ಲಿಯೇ ಮುಗಿಸುತ್ತೇವೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next