ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದು, ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುವಂತೆ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಬಹುಮತ ಇರುವುದನ್ನು ರಾಜ್ಯಪಾಲರಿಗೆ
ತಿಳಿಸಿದರೂ ಅದನ್ನು ಪರಿಗಣಿಸದೆ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸಿದ್ದಾರೆ. ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ನೀಡಿ ಕುದುರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ರಾಜ್ಯ ಪಾಲರು ಬಿಜೆಪಿಯ ಏಜೆಂಟರಂತೆ ಕೆಲಸ ಮಾಡಿದ್ದಾರೆ. ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಮೂಲಕ
ಸೂಕ್ತ ಉತ್ತರ ನೀಡಬೇಕು ಎಂದರು.
ಇಡಿ ಮೂಲಕ ಆನಂದ್ ಸಿಂಗ್‌ಗೆ ಬೆದರಿಕೆ:ಜಾರಿ ನಿರ್ದೇಶನಾಲ ಯವನ್ನು (ಇಡಿ) ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರನ್ನು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಕಟ್ಟಿ ಹಾಕಿದೆ. ಬಿಜೆಪಿಗೆ ಬೆಂಬಲ ನೀಡದಿದ್ದರೆ ನಿಮ್ಮ ಹಳೆಯ ಕೇಸುಗಳನ್ನು ಹೊರಹಾಕಿ ಜೈಲಿಗೆ ಕಳುಹಿಸುವುದಾಗಿ ಅವರಿಗೆ ಬೆದರಿಕೆಯೊಡ್ಡಿದೆ. ಆನಂದ್ ಸಿಂಗ್ ಅವರು ಈ ವಿಚಾರ ಹೇಳಿರುವುದನ್ನು ಕಾಂಗ್ರೆಸ್ ಶಾಸಕರೊಬ್ಬರು ನನಗೆ ತಿಳಿಸಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧವೂ ಜನ ಪ್ರತಿಭಟಿಸ ಬೇಕಿದೆ ಎಂದರು.